ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಒತ್ತಾಯ
ತಾಳಿಕೋಟೆ 21: ಬಾರಿ ಪ್ರಮಾಣದ ಮಳೆಯಿಂದಾಗಿ ರೈತರು ಸಂಕಷ್ಠದಲ್ಲಿರುವರಿಂದ ರಾಜ್ಯ ಸರಕಾರ ಕೂಡಲೇ ರೈತರಿಗೆ ತುರ್ತು ಪರಿಹಾರವನ್ನು ಹಾಗೂ ಬೆಳೆ ವಿಮೆಯನ್ನು ಬಿಡುಗಡೆ ಮಾಡಬೇಕು ಎಂದು ಸಮಾಜ ಸೇವಕ ಡಾ.ಬಸವರಾಜ ಅಸ್ಕಿ ಹೇಳಿದ್ದಾರೆ.
ಪಟ್ಟಣದಲ್ಲಿ ಪರ್ತಕರ್ತರೊಂದಿಗೆ ಮಾತನಾಡಿ, ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಮುಂಗಾರು ಹಂಗಾಮಿನ ಸಜ್ಜೆ, ತೊಗರಿ, ಹತ್ತಿ, ಸೂರ್ಯಕಾಂತಿ ಬೆಳೆಗಳು ಹಾಳಾಗಿ ಹೋಗಿವೆ. ಅತಿವೃಷಿಯಿಂದ ಜಿಲ್ಲೆಯ ಬಹುತೇಕ ಮುಂಗಾರು ಬೆಳೆಗಳು ಸಂಪೂರ್ಣ ಹಾಳಾಗಿ ಹೋಗಿವೆ. ಇದರಿಂದ ರೈತರು ಸಂಕಷ್ಠದಲ್ಲಿದ್ದಾರೆ. ಹಿಂಗಾರು ಮಳೆಯು ಸಹ ನಿರಂತರಾವಾಗಿ ಸುರಿಯುತ್ತಿರುವದರಿಂದ ಬಿತ್ತನೆ ಸಹ ಸಾಧ್ಯವಾಗುತ್ತಿಲ್ಲ. ಮುಂಗಾರು ಬೆಳೆ ಕಿತ್ತು ಹಾಕಿ ಹಿಂಗಾರು ಬೆಳೆ ಬಿತ್ತನೆ ಮಾಡಬೇಕು. ಆದರೆ ಬಿತ್ತನೆ ಮಾಡಲು ರೈತರಿಗೆ ಆರ್ಥಿಕ ತೊಂದರೆಯಿಂದ ಸಾಧ್ಯವಾಗುತ್ತಿಲ್ಲ. ಭಾರಿ ಮಳೆಯಿಂದ ಡೋಣಿ, ಹಳ್ಳಗಳು ತುಂಬಿ ಹರಿದು ಭಾರಿ ಪ್ರಮಾನದ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ಒಣ ಬೇಸಾಯ, ತೋಟಗಾರಿಕೆ ಬೆಳೆಗಳು ಸಹ ಹಾಳಾಗಿ ಹೋಗಿವೆ. ರೈತರ ನೀರಿಕ್ಷೆಗಳು ತಲೆಕೆಳಗಾಗಿವೆ. ಮಾಡಿದ ಸಾಲ ಹೆಚ್ಚಾಗುತ್ತಿದೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರವದು ರಾಜ್ಯ ಸರಕಾರ ಆಧ್ಯ ಕರ್ತವ್ಯವಾಗಿದೆ. ಕೂಡಲೇ ರಾಜ್ಯ ಸರಕಾರ ಬೆಳೆ ಪರಿಹಾರವನ್ನು ಬಿಡುಗಡೆಗೊಳಿಸಬೇಕು. ಬೆಳೆ ವಿಮೆ ತುಂಬಿದ ರೈತರ ಖಾತೆಗಳಿಗೆ ವಿಮೆ ಹಣವನ್ನು ಬಿಡುಗಡೆಗೊಳಿಸಲು ಇನ್ಸೂರೇನ್ಸ್ ಕಂಪನಿಗೆ ರಾಜ್ಯ ಸರಕಾರ ಸೂಚಿಸಬೇಕು ಹಾಗೂ ಬೆಳೆ ವಿಮೆ ಹಣ ಹಾಗೂ ಪರಿಹಾರ ಹಣವನ್ನು ಬ್ಯಾಂಕಗಳು ಸಾಲದ ಕಂತನ್ನು ಪಾವತಿಸಿಕೊಳ್ಳದೇ ನೇರವಾಗಿ ರೈತರಿಗೆ ನೀಡಲು ಆದೇಶ ನೀಡಬೇಕು ಎಂದು ಒತ್ತಾಯಿಸಿದರು.