ನಿಯಮ ಪಾಲಿಸದ ಕಬ್ಬು ಸಾಗಣೆ ಟ್ರ್ಯಾಕ್ಟರ್ಗಳ ಮೇಲೆ ಕ್ರಮಕ್ಕೆ ಒತ್ತಾಯ
ಮಾಂಜರಿ ನವೆಂಬರ್ 04: ಸಿಕ್ಕಾಪಟ್ಟೆ ಲೋಡಿಂಗ್, ಯರ್ರಾಬಿರ್ರಿ ರೈಡಿಂಗ್, ಬೇಕಾಬಿಟ್ಟಿ ಪಾರ್ಕಿಂಗ್, ನೋ ಲೋಡ್ ಲಿಮಿಟ್, ನೋ ಸ್ಪೀಡ್ ಲಿಮಿಟ್, ನೋ ಫಿಯರ್, ಓನ್ಮಿ ಟಾಪ್ ಗೆರ್!
ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಸುತ್ತಮುತ್ತಲಿನ ಭಾಗದಲ್ಲಿ ಸಂಚರಿಸುವ ಕಬ್ಬಿನ ಟ್ರ್ಯಾಕ್ಟರ್ಗಳ ಸ್ವಘೋಷಿತ ಸಂಚಾರ ನಿಯಮಗಳಿವು. ಬೆಳಗಾವಿ ಜಿಲ್ಲೆಯ ಹತ್ತಾರು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸುವ ನೂರಾರು ಟ್ರ್ಯಾಕ್ಟರ್ಗಳು ರಸ್ತೆಯಲ್ಲಿ ಎಗ್ಗಿಲ್ಲದೆ ನುಗ್ಗಿ ಇತರ ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ಅಪಘಾತದ ಭಯವನ್ನುಂಟು ಮಾಡುತ್ತಿವೆ.
ನೋ ಸ್ಪೀಡ್ ಲಿಮಿಟ್ : ರಸ್ತೆ ಮೇಲಿನ ಎಲ್ಲ ವಾಹನಗಳಿಗೂ ವೇಗ ಮತ್ತು ಭಾರದ ವಿಷಯದಲ್ಲಿ ಒಂದು ಮಿತಿಯಿದೆ. ಆದರೆ ಈ ಟ್ರ್ಯಾಕ್ಟರ್ಗಳಿಗೆ ಅದ್ಯಾವ ಮಿತಿಯು ಇಲ್ಲ. ಒಂದು ಟೇಲರ್ಗೆ ಕೇವಲ 6 ಟನ್ ಮತ್ತು ಎರಡು ಟೇಲರ್ಗೆ ಸೇರಿ 16 ಟನ್ ಭಾರ ಮಾತ್ರ ಭಾರ ಹೆರಬೇಕೆಂಬ ನಿಯಮವಿದ್ದರೂ 35 ರಿಂದ 40 ಟನ್ ಕಬ್ಬು ಹೇರುತ್ತಿದ್ದಾರೆ. ಕೆಲವೊಮ್ಮೆ ದಾಖಲೆಗಾಗಿ ಎರಡು ಟೇಲರ್ನಲ್ಲಿ 50 ಟನ್ವರೆಗೆ ಕಬ್ಬು ಸಾಗಿಸುವ ದುಸ್ಸಾಹಸವನ್ನು ಮಾಡಲಾಗುತ್ತದೆ.
ಚಾಲಕರು ಶರವೇಗದ ಸರದಾರರಂತೆ ಹೆಚ್ಚು ವೇಗವಾಗಿ ಟ್ರ್ಯಾಕ್ಟರ್ ಚಲಾಯಿಸಿ ಇನ್ನಿತರ ಸವಾರರ ದಿಕ್ಕು ತಪ್ಪಿಸಿ ಅಪಘಾತಕ್ಕೆ ಕಾರಣರಾಗುತ್ತಿದ್ದಾರೆ. ಧಾಬಾ ಮತ್ತು ಪಾನಶಾಪ್ಗಳ ಮುಂದೆ ಬೇಕಾಬಿಟ್ಟಿ ಟ್ರ್ಯಾಕ್ಟರ್ಗಳನ್ನು ನಿಲ್ಲಿಸಿ ಟ್ರಾಫಿಕ್ ಜಾಮ್ಗೆ ಕಾರಣರಾಗುತ್ತಿದ್ದಾರೆ. ಟ್ರ್ಯಾಕ್ಟರ್ ಡಬ್ಬಿಗಳಿಗೆ ರಿಪ್ಲೆಕ್ಟರ್ ಇಲ್ಲದ್ದರಿಂದ ಕೆಟ್ಟುನಿಂತ ಟ್ರ್ಯಾಕ್ಟರ್ಗಳಿಗೆ ಇತರ ವಾಹನಗಳು ಡಿಕ್ಕಿ ಹೊಡೆದು ಅಪಘಾತಗಳಾಗುತ್ತಿವೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಅತಿಯಾದ ಶಬ್ದ ಮಾಲಿನ್ಯ
ಕಬ್ಬಿನ ಟ್ರ್ಯಾಕ್ಟರ್ಗಳ ಅತಿಯಾದ ಶಬ್ದದಿಂದಾಗಿ ಮುಂದುಗಡೆ ಸಂಚರಿಸುವ ವಾಹನ ಸವಾರರು ಕಕ್ಕಾಬಿಕ್ಕಿಯಾಗುವಂತಾಗುತ್ತದೆ. ಸಾಲದ್ದಕ್ಕೆ ಚಾಲಕರು ಟೈಂಪಾಸ್ ಮತ್ತು ಮನರಂಜನೆಗಾಗಿ ಟ್ರ್ಯಾಕ್ಟರ್ ಹುಡ್ಡಾಗಳ ಎರಡೂ ಬದಿಯಲ್ಲಿ ಬೃಹತ್ ಗ್ರಾಮದ ಹೈಡೆಸಿಬಲ್ ಶಬ್ದ ಹೊರಸುಸುವ ಡಾಲ್ಬಿ ಸೌಂಡ ಅಳವಡಿಸಿರುತ್ತಾರೆ. ಅವುಗಳಿಂದ ಮತ್ತಷ್ಟು ಕಠೋರ ಶಬ್ದ ಬರುತ್ತದೆ. ಟ್ರ್ಯಾಕ್ಟರ್ ಇಂಜಿನ ಶಬ್ದ ಮೀರಿ ಹಾಡು ತಮ್ಮ ಕಿವಿಗೆ ಕೇಳಲಿ ಎಂಬ ಕಾರಣಕ್ಕೆ ಬರೊಬ್ಬರಿ ಅರ್ಧ ಕಿ.ಮೀ. ದೂರ ಕೇಳಿಸುವಷ್ಟು ಹೆಚ್ಚು ಸೌಂಡ್ ಬರುವ ಡಾಲ್ಬಿ ಬಾಕ್ಸ್ ಅಳವಡಿಸಿರುತ್ತಾರೆ. ಇದರಿಂದ ರಸ್ತೆ ಪಕ್ಕದ ಬಹುತೇಕ ಶಾಲೆಗಳ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತಿದೆ. ರೋಗಿಗಳೂ ತೊಂದರೆ ಅನುಭವಿಸುತ್ತಿದ್ದಾರೆ. ಅಪಾಯಕಾರಿಯಾದ ಶಬ್ದ ಮಾಲಿನ್ಯ ತಡೆಯಲು ಸಂಚಾರ ಸಂಹಿತೆ ಕಟ್ಟುನಿಟ್ಟಾಗಿ ಪಾಲನೆಯಾಗಲಿ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ದ್ವಿಚಕ್ರ ಮೇಲೆ ಮೂವರು ಕುಳಿತರೆ ದಂಡ ಹಾಕುವ ಪೆÇಲೀಸರು ಪರವಾನಗಿಗಿಂತ ಹೆಚ್ಚು ಕಬ್ಬು ಹೇರುವ ಟ್ರ್ಯಾಕ್ಟರ್ಗಳಿಗೂ ದಂಡ ಹಾಕಲಿ. ಹಬ್ಬ ಜಾತ್ರೆಗಳಲ್ಲಿ ಡಾಲ್ಬಿ ಅಳವಡಿಸಲು ಪರವಾನಗಿ ನೀಡದ ಪೆÇಲೀಸರು ಡಾಲ್ಬಿಗಿಂತ ಅಪಾಯಕಾರಿಯಾದ ಟ್ಯಾಕ್ಟರ್ ಟೇಪ್ಗಳನ್ನು ಬ್ಯಾನ್ ಮಾಡಲಿ. ಒಂದು ವೇಳೆ ಟ್ರ್ಯಾಕ್ಟರ್ ಡ್ರೈವರ್ ಹಾಡು ಕೇಳಲೇ ಬೇಕೆಂದರೆ ಇಯರ್ ಫೋನ್ ಬಳಸಲಿ
ಬಾಬಾ ಸಾಹೇಬ್ ಸದಲಗೆ
ದ್ವಿಚಕ್ರ ವಾಹನ ಸವಾರರು ನಸಲಾಪುರ
ಟ್ರ್ಯಾಕ್ಟರ್ ಚಾಲಕರಿಗೆ ಈಗಾಗಲೇ ಸೂಕ್ತ ತಿಳುವಳಿಕೆ ನೀಡಿದ್ದೇವೆ. ತೂಕದ ಲೆಕ್ಕದಲ್ಲಿ ಕ್ರಮ ಕೈಗೊಳ್ಳುವುದು ಆರಟಿಒ ವ್ಯಾಪ್ತಿಗೆ ಬರುತ್ತದೆ. ನಾವು ಮುತುವರ್ಜಿ ವಹಿಸುವ ಕ್ರಮ ಕೈಗೊಂಡಿದ್ದೇವೆ. ಓವರ್ ಲೋಡಿಂಗ್ ಬಗ್ಗೆ ಆರಟಿಒ ಗಮನಕ್ಕೆ ತರುವ ಕೆಲಸ ಮಾಡುತ್ತೇವೆ.
ಲಕ್ಷ್ಮಣಪ್ಪಾ ಆರಿ
ಪಿಎಸ್ಐ ಆಂಕಲಿ ಪೊಲೀಸ್ ಠಾಣೆ