ಹುನಗುಂದ

ಲಿಂಗಾಯತ ಪಂಚಮಸಾಲಿ ಸಮಾಜವನ್ನು ಒಬಿಸಿ ಸೇರ್ಪಡೆಗೆ ಒತ್ತಾಯಿಸಿ ಮನವಿ

ಲಿಂಗಾಯತ ಪಂಚಮಸಾಲಿ ಸಮಾಜವನ್ನು ಒಬಿಸಿ ಸೇರ್ಪಡೆಗೆ ಒತ್ತಾಯಿಸಿ ಮನವಿ

ಹುನಗುಂದ 02: ಕೃಷಿ ಕಾಯಕವನ್ನೆ ಕುಲ ಕಸುಬನ್ನಾಗಿಸಿಕೊಂಡು ಕೂಲಿಕಾರರೆಂದು ಪಟ್ಟಕ್ಕೇರಿದ ಲಿಂಗಾಯತ ಪಂಚಮಸಾಲಿ ಸಮಾಜವನ್ನು ಒಬಿಸಿ ಗೆ ಸೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ತಾಲೂಕಾ ಘಟಕವು ಪ್ರತಿಭಟಿಸಿ ತಹಶೀಲ್ದಾರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು. 

ಮಂಗಳವಾರ ನಗರದ ವಿಜಯ ಮಹಾಂತೇಶ ಮಠದ ಬಸವ ಮಂಟಪದಿಂದ ಪ್ರತಿಭಟನಾ ಬೈಕ್ ರ‍್ಯಾಲಿಯು ಚನ್ನಮ್ಮ ವೃತ್ತ, ವಿಮ ವೃತ್ತ, ಬಸ್ ನಿಲ್ದಾಣ, ಕನಕ ವೃತ್ತ ಮಾರ್ಗವಾಗಿ ಮಿನಿ ವಿಧಾನಸೌಧದ ಮುಂದೆ ನಡೆಸಿದ ಬೃಹತ್ ಪ್ರತಿಭಟನೆ ಯಲ್ಲಿ ಪಾಲ್ಗೊಂಡ ಮಹಾಂತೇಶ ಅವಾರಿ ಮಾತನಾಡುತ್ತ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಅತ್ಯಂತ ಹಿಂದುಳಿದ ಈ ಸಮಾಜವನ್ನು ಕಳೆದ 24ವರ್ಷಗಳಿಂದ ಒಬಿಸಿ ಗೆ ಸೇರಿಸುವಂತೆ ಮನವಿ ಮಾಡುತ್ತಾ ಬಂದಿದ್ದರೂ ಯಾವ ಸರ್ಕಾರವು ಸ್ಪಂದಿಸಿಲ್ಲ. ಜೊತೆಗೆ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಕಳೆದ 2012ರಿಂದ 4 ಹಂತದಲ್ಲಿ, 2021 ನೇವರಿ 14ರಿಂದ ಬೆಂಗಳೂರವರೆಗೂ ಪಂಚ ಲಕ್ಷ ಹೆಜ್ಜೆ ಮಾದರಿಯಲ್ಲಿ 712 ಕಿಮಿ ಐತಿಹಾಸಿಕ ಬೃಹತ್ ರ‍್ಯಾಲಿಯನ್ನು ಸಂಘಟಿಸಿ 10ಲಕ್ಷ ಜನಸ್ತೋಮದೊಂದಿಗೆ ಒಗ್ಗಟ್ಟಿನ ಶಕ್ತಿ ಪ್ರದರ್ಶಿಸಿದರೂ ಸರ್ಕಾರದಿಂದ ಸ್ಪಷ್ಟವಾದ ಸ್ಪಂದನೆ ಸಿಗದಿರುವದು ಯಾವ ನ್ಯಾಯ ಎಂದು ಅವಾರಿಯವರು ಪ್ರಶ್ನಿಸಿದರು. 

ಅಮರೇಶ ನಾಗೂರ ಮಾತನಾಡಿ ಸಂವಿಧಾನ ಬದ್ಧವಾಗಿ ಎಲ್ಲ ಕ್ಷೇತ್ರದಿಂದ ಹಿಂದುಳಿದ ಲಿಂಗಾಯತ ಪಂಚಮಸಾಲಿ ಸಮಾಜವನ್ನು 2ಎ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಮುಖಂಡರಾದ ಶಂಕ್ರಪ್ಪ ನೇಗಲಿ, ಮಹಾಂತಪ್ಪ ಪಲ್ಲೇದ, ಸಂಗಣ್ಣ ಗಂಜೀಹಾಳ, ಮಹಾಂತೇಶ ಮದರಿ, ಮಲ್ಲು ವೀರಾಪೂರ, ಶರಣಪ್ಪ ಹೊಸೂರ, ಶೇಖರಪ್ಪ ಬಾದವಾಡಗಿ, ಮಹಾಂತೇಶ ಸುಂಕದ, ಬಸವರಾಜ ಬಾದವಾಡಗಿ, ಅನೀಲಗೌಡ ನಾಡಗೌಡ,ಸುರೇಶ ಬಳ್ಳಾರಿ, ಮಹಾಂತೇಶ ಪರೂತಿ, ಬಸವರಾಜ ಗೊಣ್ಣಾಗರ, ಮಹಾಂತೇಶ ಹೊದ್ಲೂರ, ಶಿವಾನಂದ ಕಂಠಿ, ಶಿವು ಬಾದವಾಡಗಿ, ವೀರೇಶ ಪಾಟೀಲ, ವಿಜಯಕುಮಾರ ಬಾದವಾಡಗಿ, ಮುತ್ತಣ್ಣ ಲೋಕಾಪೂರ, ರವಿ ಹುಚನೂರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಸುದ್ದಿ ಓದಿ