ಹಗರಿಬೊಮ್ಮನಹಳ್ಳಿ

ಒಕ್ಕಲಿಗರ ಪ್ರಾಧಿಕಾರಕ್ಕೆ ಆಡಳಿತಾಧಿಕಾರಿ ಮತ್ತು ಪದಾಧಿಕಾರಿಗಳ ನೇಮಕ ಮಾಡಿ: ನಾಗರಾಜ್

ಒಕ್ಕಲಿಗರ ಪ್ರಾಧಿಕಾರಕ್ಕೆ ಆಡಳಿತಾಧಿಕಾರಿ ಮತ್ತು ಪದಾಧಿಕಾರಿಗಳ ನೇಮಕ ಮಾಡಿ: ನಾಗರಾಜ್

ಹಗರಿಬೊಮ್ಮನಹಳ್ಳಿ 27: ರಾಜ್ಯ ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರವನ್ನು ಕಳೆದ ಮೂರಾ​‍್ನಲ್ಕು ತಿಂಗಳ ಹಿಂದೆ ರಾಜ್ಯ ಸರ್ಕಾರ ಘೋಷಣೆಮಾಡಿತ್ತು ಇಲ್ಲಿಯವರೆಗೂ  ಪ್ರಾಧಿಕಾರಕ್ಕೆ ಅಧ್ಯಕ್ಷ-ಉಪಾಧ್ಯಕ್ಷ ಸೇರಿದಂತೆ ಯಾವುದೇ ಅಧಿಕಾರಿ,ಪದಾಧಿಕಾರಿಯನ್ನು ನೇಮಕಮಾಡಿಲ್ಲ, ಶೀಘ್ರದಲ್ಲೇ ನೇಮಕ ಆದೇಶ ಹೊರಡಿಸುವಂತೆ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಪತ್ರಿಕಾ ಮಾಧ್ಯಮದ ರಾಜ್ಯ ವಕ್ತಾರ ಕೆ.ನಾಗರಾಜ್ ಒತ್ತಾಯಿಸಿದರು. 

ಭಾನುವಾರ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರ ಆದೇಶದೊಂದಿಗೆ 500 ಕೋಟಿ ರೂ.ಗಳನ್ನು ಘೋಷಣೆಮಾಡಲಾಗಿತ್ತು. ಆದರೆ, ಈ ಮೊತ್ತವು ರಾಜ್ಯಾಧ್ಯಂತ ಜಿಲ್ಲಾವಾರು ಮತ್ತು ಇಲಾಖೆಗಳಿಗೆ ಹಂಚಿಕೆಯಾಗಿಲ್ಲ. ಇದು ಪ್ರಾಧಿಕಾರದ ಅಧಿಕಾರಿಗಳ ನೇಮಕವಾಗಿರದ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆ. ಆದ್ದರಿಂದ ಘೋಷಣೆಯಾಗಿರುವ ಮೊತ್ತ ಸಮುದಾಯದ ಅಭಿವೃದ್ಧಿಗೆ ವಿನಿಯೋಗವಾಗಬೇಕು, ಆಡಳಿತಾಧಿಕಾರಿ ಮತ್ತು ಪದಾಧಿಕಾರಿಗಳ ನೇಮಕ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ನಾಡುಕಂಡ ಪ್ರಮಾಣಿಕ ಕೆಂಪೇಗೌಡರು ಒಂದು ಸುಂದರ ನಗರವನ್ನು ನಿರ್ಮಾಣಮಾಡುವಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದರ ಫಲವೇ, ಇಂದು ಬೆಂಗಳೂರತ್ತ ದೇಶವೇ ತಿರುಗಿ ನೋಡುವಂತಾಗಿದೆ ಎಂದರು. 

ಒಕ್ಕಲಿಗರ ಒಕ್ಕೂಟದ ಜಿಲ್ಲಾಧ್ಯಕ್ಷ ಜಿ.ಸಾಗರಗೌಡ ಮಾತನಾಡಿ, ಸರ್ವ ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸಿದ ನಾಡಪ್ರಭು ಕೆಂಪೇಗೌಡರು, ರೈತರ ಅಭಿವೃದ್ಧಿಗಾಗಿ ಬೃಹತ್ ಕೆರೆಗಳ ನಿರ್ಮಾಣ ಮಾಡಿದರು. ಆವರ ಆಡಳಿತದಲ್ಲಿ ಪಾರದರ್ಶಕತೆ ಇತ್ತು. ಇಂದು ರಾಜ್ಯದ ರಾಜ್ಯಧಾನಿಯನ್ನು ಬಹುತೇಕ ಮುಂದಾಲೋಚನೆಯೊಂದಿಗೆ ಕಟ್ಟಿದ ಕೆಂಪೇಗೌಡರನ್ನು ಪ್ರತಿಯೊಬ್ಬರು ಗೌರವಿಸುವ ಜೊತೆಗೆ, ಅವರ ಆಡಳಿತದ ವೈಖರಿಯ ಮಾರ್ಗದರ್ಶನದಲ್ಲಿ ನಡೆದುಕೊಳ್ಳಬೇಕು ಎಂದ ಅವರು, ಸಮುದಾಯದ ರಾಜ್ಯಾಧ್ಯಕ್ಷರಾದ ನಾಗಣ್ಣ ಬಾಣಸವಾಡಿಯವರು ಸತತ ರಾಜ್ಯದೆಲ್ಲೆಡೆ ಸಂಚರಿಸಿ ಸಮುದಾಯ ಸಂಘಟಿಸುವಲ್ಲಿ ಶ್ರಮಿಸಿದ್ದಾರೆ ಎಂದರು. 

ಇದೇ ವೇಳೆ ಕೋವಿಡ್ ವಾರಿಯರ​‍್ಸ‌ಗಳೆಂದು ಗುರುತಿಸಲ್ಪಟ್ಟವರಿಗೆ ಸಮುದಾಯದಿಂದ ಉಪತಹಸೀಲ್ದಾರ್ ಅನ್ನದಾನೇಶ್ವರ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ರಾಜಶೇಖರ್ ಮತ್ತು ವಿಜಯಕುಮಾರ್‌ರನ್ನು ಸನ್ಮಾನಿಸಲಾಯಿತು. 

ಮುಖಂಡ ಸಿದೇಶ್ ಬಣಕಾರ್, ಕೆ.ಬಿ.ಕೊಟ್ರೇಶ್, ರಮೇಶ್ವರ ಬಂಡಿ ಬಸವನಗೌಡ್ರು, ಎಸ್‌.ನಾಗರಾಜ್, ಕೆ.ಶಶಿಕುಮಾರ್, ಕೆ.ವಸಂತಕುಮಾರ್, ಕೆ.ಎಚ್‌.ಶಿವಾನಂದ, ಶಿಕ್ಷಕ ಶಿರೂರ್ ಮಲ್ಲಿಕಾರ್ಜುನ, ಸಿಬ್ಬಂದಿ ಗೋಪಾಲ್‌ಶೆಟ್ಟಿ ಹಾಗೂ ಮತ್ತಿತರರು ಇದ್ದರು. 


ಸುದ್ದಿ ಓದಿ