ಆಲಮಟ್ಟಿ ಅಣೆಕಟ್ಟಿನಿಂದ 524.256 ಮೀಟರ್ ಮಟ್ಟದ ನೀರಿನ ಸಂಗ್ರಹಕ್ಕೆ ಒತ್ತಾಯ
ಲೋಕದರ್ಶನ ವರದಿ
ವಿಜಯಪುರ 19: ಕೃಷ್ಣಾ ಕೊಳ್ಳ ಜಲ ಸಂರಕ್ಷಣಾ ಹೋರಾಟ ಸಮಿತಿ, ವಿಜಯಪುರ" ವತಿಯಿಂದ ಇಂದು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಸಂಸದರಾದ ಪಿ.ಸಿ. ಗದ್ದಿಗೌಡರ ಅವರನ್ನು ಭೇಟಿ ಮಾಡಿ, ಆಲಮಟ್ಟಿ ಅಣೆಕಟ್ಟಿನಲ್ಲಿ 524.256 ಮೀಟರ್ ಮಟ್ಟದವರೆಗೆ ನೀರಿನ ಸಂಗ್ರಹ ಹಾಗೂ ಬಳಕೆಗೆ ಸಂಬಂಧಿಸಿದಂತೆ ಮಹತ್ವದ ಮನವಿಪತ್ರ ಸಲ್ಲಿಸಲಾಯಿತು.ಕೃಷ್ಣಾ ನದಿ ತಟದ ಜನರ ಬಹುಕಾಲದ ಮತ್ತು ನ್ಯಾಯಸಮ್ಮತ ಬೇಡಿಕೆಯಾದ ಆಲಮಟ್ಟಿ ಅಣೆಕಟ್ಟಿನ ನೀರಿನ ಸಂಗ್ರಹ ಹಾಗೂ ಬಳಕೆಯ ವಿಚಾರವು ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಅತ್ಯಂತ ಮಹತ್ವದ್ದಾಗಿದೆ. ಕೃಷಿ, ಕುಡಿಯುವ ನೀರು, ಕೈಗಾರಿಕೆ ಹಾಗೂ ಗ್ರಾಮೀಣಾಭಿವೃದ್ಧಿಯ ದೃಷ್ಟಿಯಿಂದ ಈ ಯೋಜನೆ ಲಕ್ಷಾಂತರ ಜನರ ಜೀವನದೊಂದಿಗೆ ನೇರವಾಗಿ ಸಂಬಂಧ ಹೊಂದಿದೆ ಎಂದು ಸಮಿತಿಯ ಮುಖಂಡರು ಸಂಸದರಿಗೆ ವಿವರಿಸಿದರು.