2000 ಗುಂಪು ಮನೆಗಳ ಫಲಾನುಭವಿಗಳಿಗೆ ಮನೆ ಹಂಚಿಕೆಗೆ ಆಗ್ರಹ
ಕೊಪ್ಪಳ, ಅ.5: ನಗರದಲ್ಲಿ 2000 ಗುಂಪು ಮನೆಗಳ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಕೂಡಲೇ ಮನೆಗಳನ್ನು ಹಂಚಿಕೆ ಮಾಡಿ, ಮೂಲಸೌಕರ್ಯ ಕಲ್ಪಿಸಬೇಕು ಎಂದು ಕರ್ನಾಟಕ ನವ ನಿರ್ಮಾಣ ಸೇನೆ ಆಗ್ರಹಿಸಿದೆ.
ಈ ಕುರಿತು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಕವಲೂರು ನೇತೃತ್ವದಲ್ಲಿ ಅ.8ರಂದು ಬೆಳಗ್ಗೆ 10ಕ್ಕೆ ಸಿಂಧೋಗಿ ರಸ್ತೆಯಲ್ಲಿರುವ 2000 ಗುಂಪು ಮನೆಗಳಿಂದ ನಗರಸಭೆಯವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
2000 ಗುಂಪು ಮನೆಗಳ ಯೋಜನೆ ಪೂರ್ಣಗೊಂಡು 15 ವರ್ಷವಾಗಲು ಇನ್ನು ಕೇವಲ 14 ತಿಂಗಳು ಬಾಕಿ ಇದ್ದರೂ, ಆಯ್ಕೆಯಾದ ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡದೆ ಸರ್ಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಯೋಜನೆ ಆರಂಭವಾಗಿ 13 ವರ್ಷ 10 ತಿಂಗಳು ಕಳೆದಿದ್ದು, ಈವರೆಗೆ 1,490 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಉಳಿದ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಮನೆ ಹಂಚಿಕೆ ಮಾಡಿಲ್ಲ ಎಂದು ತಿಳಿಸಿದರು.
ಲೋಕಾಯುಕ್ತದಲ್ಲಿ ದಾಖಲಾಗಿರುವ ದೂರುಗಳನ್ನು ನೆಪ ಮಾಡಿಕೊಂಡು ಮನೆ ಹಂಚಿಕೆ ವಿಳಂಬ ಮಾಡಲಾಗುತ್ತಿದೆ. ಲೋಕಾಯುಕ್ತದ ದೂರು ಹಣದ ಭ್ರಷ್ಟಾಚಾರ ಹಾಗೂ ಕಳಪೆ ಕಾಮಗಾರಿಗೆ ಸಂಬಂಧಿಸಿದ್ದಾಗಿದ್ದು, ಆಯ್ಕೆಯಾದ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡುವುದಕ್ಕೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಆಯ್ಕೆಯಾದ ಎಲ್ಲ ಫಲಾನುಭವಿಗಳಿಗೆ ಕೂಡಲೇ ಮನೆ ಹಂಚಿಕೆ ಮಾಡಿ, ಕುಡಿಯುವ ನೀರು, ವಿದ್ಯುತ್, ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ, ಬಡ ಫಲಾನುಭವಿಗಳು ಮನೆಗಳಲ್ಲಿ ವಾಸಿಸುವಂತಾಗಬೇಕು ಎಂದು ಆಗ್ರಹಿಸಿದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಗುವುದು ಎಂದು ವಿಜಯಕುಮಾರ ಕವಲೂರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಮಹೇಶ ಅಲ್ಲಾನಗರ, ಗಂಗಾಧರ ವಸ್ತ್ರದ, ರಾಮು ಗೋಂದಕರ, ಹನುಮಗೌಡ ಆಟೋ ಘಟಕದ ಅಧ್ಯಕ್ಷರು ಸೇರಿದಂತೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.