ತಾಲ್ಲೂಕು ಬರಗಾಲ ಪ್ರದೇಶ ಘೋಷಣೆ : ರೈತರಿಗೆ ಜಾನುವಾರುಗಳ ರಕ್ಷಣೆಗೆ ಮೇವು ಬೀಜಗಳ ಕಿರುಪೊಟ್ಟಣ ವಿತರಣೆ
ಕಂಪ್ಲಿ 04 : ರಾಜ್ಯಾದ್ಯಂತ ಮುಂಗಾರು ಮಳೆ ಕೈಕೊಟ್ಟು ರಾಜ್ಯದ ಬಹುತೇಕ ಜಿಲ್ಲೆ ಮತ್ತು ತಾಲ್ಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿದ್ದು, ಇದರಲ್ಲಿ ಕಂಪ್ಲಿ ತಾಲ್ಲೂಕು ಸಹಿತ ಇದ್ದು, ತಾಲ್ಲೂಕಿನ ರೈತರಿಗೆ ತಮ್ಮ ಜಾನುವಾರುಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಮೇವಿನ ಬೀಜಗಳ ಕಿರುಪೊಟ್ಟಣಗಳನ್ನು ತಾಲ್ಲೂಕಿನಲ್ಲಿ ಪಶು ಸಂಗೋಪನಾ ಇಲಾಖೆ
ಮೂಲಕ ವಿತರಣೆ ಮಾಡಲಾಗುತ್ತಿದೆ. ಬರಗಾಲದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆಮೇವು ಬೆಳೆಯಲು ಅರ್ಹ ರೈತರಿಗೆ ಉಚಿತವಾಗಿ ಮೇವಿನ ಬೀಜಗಳ ಕಿರು ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ ಎಂದು ಕಂಪ್ಲಿ ಪಶು ಆಸ್ಪತ್ರೆ ಹಿರಿಯ ವೈದ್ಯಾಧಿಕಾರಿ ಡಾ.ಕೆ.ಯು. ಬಸವರಾಜ ತಿಳಿಸಿದರು. ರೈತರಿಗೆ ಮೇವಿನ ವಿವಿಧ ಬೀಜಗಳ ಕಿರುಪೊಟ್ಟಣಗಳನ್ನು ವಿತರಿಸಿ ಮಾತನಾಡಿದ ಅವರು ಜಾನುವಾರುಗಳನ್ನು ಸಾಕಿದ ರೈತರಿಗೆ ಎಫ್.ಐ.ಡಿ.ಸಂಖ್ಯೆ, ಪಹಣಿ, ಆಧಾರ್ ಕಾರ್ಡ್ ದಾಖಲೆಗಳನ್ನು ಪಡೆದು ಮೇವಿನ ಬೀಝಗಳ ಕಿರು ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ. ನೀರಾವರಿ ಸೌಲಭ್ಯ ಹೊಂದಿರುವ ರೈತರಿಗೆ 5 ಕೆಜಿಯ ಸಿ ಎಚ್.ಎಚ್. 24 ಎಫ್ ತಳಿಯ ಜೋಳದ 296 ಕಿರುಪೊಟ್ಟಣ, ಸಿ.ಎನ್.ಎಚ್. 43 ಎಂಎಫ್ ತಳಿಯ ಜೋಳದ 227 ಕಿರುಪೊಟ್ಟಣ, 5 ಕೆಜಿಯ ಮೆಕ್ಕೆಜೋಳದ 378 ಪೊಟ್ಟಣಗಳು ಸೇರಿದಂತೆ 901 ಮೇವಿನ ಬೀಝಗಳ ಕಿರು ಪೊಟ್ಟಣಗಳನ್ನು ತಾಲ್ಲೂಕಿನ ವಿವಿಧ ಗ್ರಾಮಗಳ ಅರ್ಹ ರೈತರಿಗೆ ವಿತರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪಶು ವೈದ್ಯಕೀಯ ಪರೀಕ್ಷಕರಾದ ಶೀವಪ್ಪ ವಿ.ದೇವಕಿ, ಟಿ.ರಾಮಚಂದ್ರ,ಮಂಜುನಾಥ್, ದೇವೇಂದ್ರ್ಪ, ಪಶು ಸಖಿಯರು ಸೇರಿದಂತೆ ರೈತರು ಇದ್ದರು.