ಹಾರೂಗೇರಿ: ಕನಕದಾಸರ ಸಾಹಿತ್ಯ-ಕೀರ್ತನೆಗಳ ಮೌಲ್ಯ ಕುರಿತು ಉಪನ್ಯಾಸ
ಹಾರೂಗೇರಿ : ಕನಕದಾಸರ ಸಾಹಿತ್ಯ ಮತ್ತು ಕೀರ್ತನೆಗಳು ಕನ್ನಡ ನಾಡಿನ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪರಂಪರೆಗೆ ನೀಡಿದ ಅಮೂಲ್ಯ ಕೊಡುಗೆಗಳಾಗಿವೆ. ಅವರ ಕೃತಿಗಳಲ್ಲಿ ಭಕ್ತಿ, ಮಾನವೀಯತೆ, ಸಮಾನತೆ, ನೀತಿ ಮತ್ತು ಸಾಮಾಜಿಕ ಜಾಗೃತಿಯಂತಹ ಮೌಲ್ಯಗಳಿವೆ ಎಂದು ಕನಕದಾಸರ ಸಾಹಿತ್ಯ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಸಿದ್ರಾಮ ಶೇಗುಣಸಿ ಹೇಳಿದರು. ಪಟ್ಟಣದ ಕಾಳಿಕಾದೇವಿ ದೇವಸ್ಥಾನದ ಸಭಾಭವನದಲ್ಲಿ ರವಿವಾರ ನಡೆದ ಕನಕದಾಸರ ಸಾಹಿತ್ಯ ಪ್ರಚಾರ ಸಮಿತಿಯ 125ನೇ ರಾಜ್ಯಮಟ್ಟದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಪಾಳ್ಗೊಂಡು ಅವರು ಮಾತನಾಡಿದರು. ಸರಳವಾದ ಕನ್ನಡ ಭಾಷೆಯ ಮೂಲಕ ಆಳವಾದ ತತ್ವಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸಿದ ಅವರು ಜಾತಿ, ಭೇದ, ಅಹಂಕಾರ ಮತ್ತು ಸಾಮಾಜಿಕ ಅಸಮಾನತೆಯನ್ನು ಧೈರ್ಯವಾಗಿ ಪ್ರಶ್ನಿಸಿದರು. ಮಾನವೀಯ ದೃಷ್ಠಿಕೋನ, ಗಂಭೀರ ತತ್ವಗಳ ಸಾಮರ್ಥ್ಯ ಕನಕದಾಸರ ಕೀರ್ತನೆಗಳ ಶಕ್ತಿ, ಭಕ್ತಿಭಾವದ ಜೊತೆಗೆ ಉತ್ತಮ ಜೀವನ ಮೌಲ್ಯಗಳನ್ನು ಬೋಧಿಸಿವೆ ಎಂದರು. ಸಿಂದಗಿಯ ಲೇಖಕ ಡಾ.ಎ.ಆರ್.ಹೆಗ್ಗಣದೊಡ್ಡಿ ಅವರು ಲೇಖಕ ಕೃಷ್ಣಾ ಖಾನಾಪೂರ ಅವರ ಮುಕ್ಕಣ್ಣ ಕರಿಗಾರರು ಕಂಡಂತೆ ಕನಕದಾಸರು ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತ ಕನಕ ಬುದ್ಧನಷ್ಟೇ ಮಹಾತ್ಯಾಗಿ. ವಚನ ಸಾಹಿತ್ಯದಂತೆ ಕನಕದಾಸರ ಸಾಹಿತ್ಯ ಮತ್ತು ಕೀರ್ತನೆಗಳು ಜಾಗತಿಕ ಮಟ್ಟದ ಪ್ರಚಾರದ ಅಗತ್ಯವಿದೆ ಎಂದರು. ಬೆಂಗಳೂರಿನ ಮಂಜುನಾಥ ಹೊನ್ನಣ್ಣವರ ಉಪನ್ಯಾಸ ನೀಡಿದರು. ಲೇಖಕ ಬಾಲಕೃಷ್ಣ ಜಂಬಗಿ ಮಾತನಾಡಿದರು. ಧಾರವಾಡ ಕನಕದಾಸ ಪ್ರಚಾರ ಸಮಿತಿ ರಾಜ್ಯ ಸಮನ್ವಯಾಧಿಕಾರಿ ಶಿವು ಖನ್ನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಡಗಿನಾಳದ ಮುತ್ತೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಈವೇಳೆ ಕನಕದಾಸ ಪ್ರಚಾರ ಸಮಿತಿ ಅಂತರ್ಜಾಲ ನಿರೂಪಕರು ಮತ್ತು ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ಉಗಾರದ ಸಂಗೀತ ಶಿಕ್ಷಕ ಪದ್ಮರಾಜ ಆಲಪ್ಪನವರ ಅವರು ಕನಕದಾಸರ ಕೀರ್ತನೆಗಳ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕುರುಬರ ಸಂಘದ ಜಿಲ್ಲಾಧ್ಯಕ್ಷ ಭಗವಂತ ಬಂತಿ ಅಧ್ಯಕ್ಷತೆ ವಹಿಸಿದ್ದರು. ಕರೆಸಿದ್ದೇಶ್ವರ ದೇವಸ್ಥಾನದ ಪಟ್ಟದ ಪೂಜ್ಯರಾದ ಕರೆಪ್ಪ ಪೂಜೇರಿ ಸಾನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷ ಜ್ಞಾನೇಶ್ವರ ಧರ್ಮಟ್ಟಿ, ಮಾಜಿ ಅಧ್ಯಕ್ಷ ವಸಂತ ಲಾಳಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಶಿವಪುತ್ರ ಹಾಡಕಾರ, ಗಣ್ಯರಾದ ಅಂಬುಪ್ರಸಾದ ನರೋಟೆ, ದುಂಡಪ್ಪ ಹಾಡಕಾರ, ಭರಮು ಪೂಜಾರಿ, ಬೆಂಗಳೂರಿನ ನಾಗರಾಜು ಎಸ್, ಸೋಮು ಮಲ್ಲೂರ, ಹಣಮಂತ ಸೋಮನಕಟ್ಟಿ, ಸಿದ್ದಪ್ಪ ಹಾಡಕಾರ, ಆನಂದ ಹಕ್ಕೆನ್ನವರ, ಸಿದ್ರಾಮ ಖೊತ, ರವೀಂದ್ರ ಪಾಟೀಲ, ಸಂಗಮೇಶ ನಾಯಿಕ, ಮಹಾದೇವ ಶಿರಗೂರ, ಭೀಮಶಿ ಬನಶಂಕರಿ, ಶಿವಾಜಿ ಪೂಜಾರಿ ಮೊದಲಾದ ಸಾಹಿತಿಗಳು, ಸಮಾಜದ ಮುಖಂಡರು ಉಪಸ್ಥಿತರಿದ್ದರು. ಶಿಕ್ಷಕಿ ಕವಿತಾ ಬೇವನೂರ ಸ್ವಾಗತಿಸಿದರು. ಭರಮು ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಟಿ.ಎಸ್.ವಂಟಗೂಡಿ ವಂದಿಸಿದರು.