ಮುಂದಗೋಡ

ಅಕ್ರಮ ನಿರ್ಮಾಣದ ಮನೆಗಳ ತೆರವಿಗೆ ಒತ್ತಾಯ

ಅಕ್ರಮ ನಿರ್ಮಾಣದ ಮನೆಗಳ ತೆರವಿಗೆ ಒತ್ತಾಯ

ಮುಂಡಗೋಡ: ಅಂಗನವಾಡಿ ಕೇಂದ್ರದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮನೆಯನ್ನು ತಕ್ಷಣವೇ ತೆರವುಗೊಳಿಸುವಂತೆ ಒತ್ತಾಯಿಸಿ ತಾಲೂಕಿನ ಕೆಂದಲಗೇರಿ ಗ್ರಾಮಸ್ಥರು ನಂದಿಕಟ್ಟಾ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಬಂದು ಒತ್ತಾಯಿಸಿದ ಘಟನೆ ಬುಧವಾರ ಜರುಗಿದೆ. 

ನಂದಿಕಟ್ಟಾ ಗ್ರಾ.ಪಂ.ವ್ಯಾಪ್ತಿಯ ಕೆಂದಲಗೇರಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ಕೊಂಡವಾಡವಿತ್ತು. ಕೆಲವು ವರ್ಷಗಳ ಹಿಂದೆ ಗ್ರಾಮಸ್ಥರು ಕೊಂಡವಾಡದ ಜಾಗದಲ್ಲಿ ಜಾನುವಾರುಗಳನ್ನು ಕಟ್ಟಿಕೊಳ್ಳಲು ಬಿಟ್ಟಿದ್ದ ಜಾಗದಲ್ಲಿ ಸ್ಥಳೀಯ ಮಹಿಳೆ ವಾಸಿಸಲು ಮನೆಯನ್ನು ನಿರ್ಮಿಸಿಕೊಂಡಿದ್ದಾರೆ. ಅಂಗನವಾಡಿ ಕೇಂದ್ರದ ಮಕ್ಕಳಿಗೆ ಆಟದ ಮೈದಾನಕ್ಕಾಗಿ ಮನೆಯನ್ನು ತೆರವುಗೊಳಿಸಲು ಗ್ರಾಮ ಪಂಚಾಯಿತಿಯವರಿಗೆ ಮೌಖಿಕವಾಗಿ ತಿಳಿಸಿದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೆಂದಲಗೇರಿ ಗ್ರಾಮಸ್ಥರು ನಂದಿಕಟ್ಟಾ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಬಂದು ಅಕ್ರಮವಾಗಿ ನಿರ್ಮಿಸಿರುವ ಮನೆಯನ್ನು ತೆರವುಗೊಳಿಸುವಂತೆ ಪಟ್ಟು ಹಿಡಿದರು.   

ಈ ವೇಳೆ ಗ್ರಾ.ಪಂ.ಪಿಡಿಒ ವೆಂಕಪ್ಪ ಲಮಾಣಿ ತಹಶೀಲ್ದಾರ ಶ್ರೀಧರ ಮುಂದಲಮನಿ ಅವರಿಗೆ ಪೋನ್ ಕರೆ ಮಾಡಿ ವಿಷಯ ತಿಳಿಸಿದರು. ಮಾಹಿತಿ ಪಡೆದ ತಹಶೀಲ್ದಾರರು ಸ್ಥಳಕ್ಕೆ ಬರುವುದಾಗಿ ತಿಳಿಸಿದ ನಂತರ ಗ್ರಾಮಸ್ಥರು ಸಮಾಧಾನಗೊಂಡರು.    

ನಂತರ ಕೆಂದಲಗೇರಿ ಗ್ರಾಮಕ್ಕೆ ಬಂದ ತಹಶೀಲ್ದಾರ ಶ್ರೀಧರ ಮುಂದಲಮನಿ ಮತ್ತು ಸಿಡಿಪಿಒ ದೀಪಾ ಬಂಗೇರ ಅಕ್ರಮವಾಗಿ ನಿರ್ಮಿಸಿರುವ ಮನೆಯನ್ನು ವೀಕ್ಷಿಸಿದರು. ಅಕ್ರಮವಾಗಿ ಮನೆ ನಿರ್ಮಿಸಿಕೊಂಡವರ ಜೊತೆ ಮಾತನಾಡಿ ಮಾಹಿತಿ ಪಡೆದರು. ಈ ವೇಳೆ ಗ್ರಾಮಸ್ಥರು ಈ ಹಿಂದೆ ಇವರಿಗೆ ಈ ಜಾಗದಲ್ಲಿ ಒಂದೆರಡು ಜಾನುವಾರುಗಳನ್ನು ಕಟ್ಟಿಕೊಳ್ಳಲು ಅವಕಾಶ ನೀಡಲಾಗಿತ್ತು. ಈಗ ಅವರು ನಮ್ಮದೇ ಜಾಗ ಎನುತ್ತಿದ್ದಾರೆ. ಇದು ಅವರ ಜಾಗವಲ್ಲ. ಅಂಗನವಾಡಿ ಕೇಂದ್ರಕ್ಕೆ ಸೇರಿದ ಜಾಗವಾಗಿದೆ. ಈ ಬಗ್ಗೆ ಪ್ರತಿ ದಿನ ಜಗಳವಾಡುತ್ತಾರೆ. ಇದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ಇದೇ ಗ್ರಾಮದಲ್ಲಿ ಅವರಿಗೆ ಬೇರೆ ಕಡೆ ಜಾಗವನ್ನು ನೀಡಿದರು ಸಹ ಅಂಗನವಾಡಿ ಕೇಂದ್ರಕ್ಕೆ ಸೇರಿದ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದಾರೆ ಎಂದು ದೂರಿದರು.      

ಶ್ರೀಧರ ಮುಂದಲಮನಿ, ತಹಶೀಲ್ದಾರ ಮುಂಡಗೋಡ: ಅಕ್ರಮವಾಗಿ ಮನೆ ನಿರ್ಮಿಸಿರುವ ಈ ಜಾಗ ಇವರ ಹೆಸರಿನಲ್ಲಿ ಇಲ್ಲ. ಇವರ ಹೆಸರಿನಲ್ಲಿ ಬೇರೆ ಕಡೆ ಜಾಗವಿದೆ. ಈ ಹಿಂದೆ ಇದು ಗ್ರಾ.ಪಂ.ನ ಕೊಂಡವಾಡದ ಜಾಗವಾಗಿತ್ತು. ಗ್ರಾಮ ಪಂಚಾಯಿತಿಯವರು ಈ ಜಾಗವನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವ ಕಾರಣ ಸಮಸ್ಯೆ ಉದ್ಭವವಾಗಿದೆ. ಅಕ್ರಮವಾಗಿ ಮನೆ ನಿರ್ಮಿಸಿಕೊಂಡ ಜಾಗವನ್ನು ಅಂಗನವಾಡಿ ಕೇಂದ್ರಕ್ಕೆ ಬಿಟ್ಟು ಕೊಡುವಂತೆ ಒಂದು ತಿಂಗಳ ಗಡುವು ನೀಡಲಾಗಿದೆ. ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ.  

ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಬಸವರಾಜ ನಡುವಿನಮನಿ, ಜಿ.ಪಂ. ಇಂಜಿನಿಯರ ಪ್ರದೀಪ ಭಟ್ಟ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ