ಅತಿಥಿ ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆಗೆ ಆಗ್ರಹ; ಸೇವಾ ಭದ್ರತೆ ಕಲ್ಪಿಸಲು ಮನವಿ
ಹೂವಿನಹಡಗಲಿ, ಆ. 4: ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಶಾಸಕ ಕೃಷ್ಣ ನಾಯಕ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಮನವಿಯಲ್ಲಿ ಅತಿಥಿ ಉಪನ್ಯಾಸಕರ ವೇತನದಲ್ಲಿರುವ ತಾರತಮ್ಯವನ್ನು ತಕ್ಷಣ ನಿವಾರಿಸಬೇಕು, ಸೇವಾ ಭದ್ರತೆ ಕಲ್ಪಿಸಬೇಕು ಹಾಗೂ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಬೇಡಿಕೆಗಳನ್ನು ಸರ್ಕಾರ ಆದ್ಯತೆಯ ಮೇರೆಗೆ ಪರಿಗಣಿಸಬೇಕು ಎಂದು ಒತ್ತಾಯಿಸಲಾಯಿತು.
ಶಿಕ್ಷಣ ಕ್ಷೇತ್ರದಲ್ಲಿ ಅತಿಥಿ ಉಪನ್ಯಾಸಕರು ಸಲ್ಲಿಸುತ್ತಿರುವ ಸೇವೆಗೆ ತಕ್ಕ ಗೌರವ ಹಾಗೂ ಭದ್ರತೆ ಒದಗಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಮನವಿಯಲ್ಲಿ ಕೋರಲಾಗಿದೆ. ಮನವಿ ಸ್ವೀಕರಿಸಿದ ಶಾಸಕ ಕೃಷ್ಣ ನಾಯಕ್, ಅತಿಥಿ ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದು, ಅಗತ್ಯ ಕ್ರಮ ಕೈಗೊಳ್ಳಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಎ. ಕೊಟ್ರಗೌಡ ಹಾಲಪ್ಪ, ಶಂಕರ್, ಮಹೇಶ್, ಪರಂಜ್ಯೋತಿ, ಉಮಾ, ರಶ್ಮಿ, ನರೇಶ್ ಸೇರಿದಂತೆ ತಾಲೂಕಿನ ವಿವಿಧ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.