ಹುನಗುಂದ

ಹೈ ಮಾಸ್ಕ್, ಕುಡಿಯುವ ನೀರಿನ ಘಟಕಗಳನ್ನು ಶೀಘ್ರ ಆರಂಭಿಸಿ: ಹಳಪೇಟಿ

ಹೈ ಮಾಸ್ಕ್, ಕುಡಿಯುವ ನೀರಿನ ಘಟಕಗಳನ್ನು ಶೀಘ್ರ ಆರಂಭಿಸಿ: ಹಳಪೇಟಿ

ಹುನಗುಂದ 18: ಈಗಾಗಲೆ ನಗರಲ್ಲಿ ಅಳವಡಿಸಿದ ಕೆಲವು ಹೈ ಮಾಸ್ಕ್ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳು ಬಂದಾಗಿವೆ. ತಕ್ಷಣ ಗುತ್ತಿಗೆದಾರರನ್ನು ಪುನ: ಕರೆಸಿ ಪ್ರಾರಂಭಿಸಬೇಕೆಂದು ಪುರಸಭೆ ಸದಸ್ಯ ಪ್ರವೀಣ ಹಳಪೇಟಿ ತಿಳಿಸಿದರು. ಸೋಮವಾರ ನಗರದ ಪುರಸಭೆ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡುತ್ತ ಅವುಗಳನ್ನು ದುರಸ್ತಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದರು. ಪುರಸಭೆಯಿಂದ ನಡೆಯುವ ಎಲ್ಲ ಕೆಲಸಗಳಿಗೂ ಸಿಬ್ಬಂದಿ ಕೊರತೆ ಹೇಳುತ್ತ ಜನರಿಗೆ ತೊಂದರೆ ಆಗಕೂಡದು. ಜೊತೆಗೆ ಬೇರೆ ಕಡೆಗೆ ನಿಯೋಜನೆ ಮೇಲೆ ಹೋದ ಸಿಬ್ಬಂದಿ ಮರಳಿ ಪಡೆದು ಕಚೇರಿ ಕೆಲಸವನ್ನು ಸುಗಮವಾಗಿ ನಡೆಸಬೇಕೆಂದು ತಿಳಿಸಿದರು.

ಸದಸ್ಯ ಶಾಂತಪ್ಪ ಹೊಸಮನಿ ಮಾತನಾಡಿ ಕಚೇರಿಯಲ್ಲಿ ಬಯೋಮೆಟ್ರಿಕ್ ಬಳಸಿ ಅವರ ಹಾಜರಾತಿಗನುಗುಣವಾಗಿ ಸಿಬ್ಬಂದಿ ವೇತನ ತೆಗೆಯಬೇಕು. ಮತ್ತು ಈಗಾಗಲೆ ಅಳವಡಿಸಲಾದ ಸಿಸಿ ಕ್ಯಾಮರಾಗಳನ್ನು ದುರಸ್ಥಿಗೊಳಿಸಬೇಕು. ಜೊತೆಗೆ ಜೆಸಿಬಿ ಪ್ರತಿ ದಿನ ಕನಿಷ್ಠ ಕೆಲಸ ಮಾಡುತ್ತದೆ ಅದರ ಲಾಗ್ ಪುಸ್ತಕ ಇಡಬೇಕು. ಹಾಗೂ ಕಚೇರಿ ಬಳಕೆಗೆ ಟೆಂಡರ್ ಮೂಲಕ ಪಡೆದ ಕಾರು ಕಳೆದ ಎಷ್ಟೋ ತಿಂಗಳಿಂದ ಕಚೇರಿಗೆ ಬಂದಿರುವದಿಲ್ಲ. ಬರುವ ಮಾರ್ಚ ನಂತರ ಟೆಂಡರ ರದ್ದುಪಡಿಸಬೇಕೆಂದು ಅವರು ಒತ್ತಾಯಿಸಿದರು. ಸಧ್ಯ ಕಾರ‍್ಯನಿರ್ವಹಿಸುತ್ತಿರುವ ಖಾಯಂ ಮತ್ತು ಖಾಸಗಿ ಹಾಗೂ ಗುತ್ತಿಗೆ ಸಿಬ್ಬಂದಿಗಳ ಮತ್ತು ವೇತನದ ವಿವರವನ್ನು ಎಲ್ಲ ಸದಸ್ಯರಿಗೂ ಮಾಹಿತಿ ನೀಡಬೇಕು. 

ಸದಸ್ಯ ಮೈನು ಧನ್ನೂರ ಮಾತನಾಡಿ ಪಟ್ಟಣದ ನ್ಯಾಯಾಲಯದಿಂದ ಎನ್‍ಎಚ್ 50 ವರೆಗೂ ಅಳವಡಿಸಲಾದ ಬೀದಿ ದೀಪಗಳನ್ನು ಹಾನಿ ಮಾಡಿದ ಸಾರ್ವಜನಿಕರ ಅಥವಾ ವಾಹನಗಳ ಮೇಲೆ ಪೊಲೀಸ ಪ್ರಕರಣ ದಾಖಲಿಸಬೇಕು. ಮತ್ತು ವಾಣಿಜ್ಯ ನಡೆಸಲು ಪಡೆದ ಪರವಾನಿಗೆಯನ್ನು ನವೀಕರಿಸಬೇಕು. ಹಾಗೂ ಅಕ್ರಮ ನಳಗಳನ್ನು ಸಕ್ರಮಗೊಳಿಸಿ ಪುರಸಭೆ ಆದಾಯ ಹೆಚ್ಚಳಕ್ಕೆ ಕ್ರಮ ಜರುಗಿಸಬೇಕು ಎಂದಾಗ ಸಿಬ್ಬಂದಿ ಕಾರ್ಯೋನ್ಮುಖರಾಗುವಂತೆ ತಿಳಿಸಲಾಗುವದೆಂದು ಮುಖ್ಯಾಧಿಕಾರಿ ಜಗದೀಶ ಹುಲಗೆಜ್ಜಿ ಉತ್ತರಿಸಿದರು. ಶರಣು ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಎಲ್ಲ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಮುಖ್ಯಾಧಿಕಾರಿ ಜಗದೀಶ ಹುಲಗೆಜ್ಜಿ ಇದ್ದರು.

  1. ಮುಖ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವಾರ್ಡಗಳಲ್ಲಿ ಸಭೆ ನಡೆಸಿ ಅಲ್ಲಿನ ಸಾರ್ವಜನಿಕರಿಂದ ಬರುವ ಸಮಸ್ಯೆಗಳಿಗೆ ಪರಿಹಾರ ಕಾಣಬೇಕು. ಕಳೆದ ಎರಡು ವರ್ಷಗಳಿಂದಲೂ ಯಾವುದೆ ಅಭಿವೃದ್ಧಿ ಕೆಲಸಗಳು ನಡೆದಿರುವದಿಲ್ಲ. ಕೂಡಲೆ ಸಭೆ ನಡೆಸಬೇಕು. 

ಶ್ರೀದೇವಿ ಚೂರಿ ಸದಸ್ಯೆ. 

      2. ಇನ್ಮುಂದೆ ನಗರದ ಒಳ ಮತ್ತು ಹೊರ ವಲಯಗಳಲ್ಲಿ ನೂತನವಾಗಿ ನಿರ್ಮಾಣವಾಗುವ ಕಟ್ಟಡಗಳ ಅಕ್ರಮಕ್ಕೆ ಅವಕಾಶ ನೀಡದೆ ಅವುಗಳಿಗೆ ಕಡ್ಡಾಯವಾಗಿ ಪರವಾನಗೆ ಪಡೆಯಬೇಕು. 

ಮಹ್ಮದ್ ದೋಟಿಹಾಳ ಸದಸ್ಯ.

ಸುದ್ದಿ ಓದಿ