ಅನಧಿಕೃತ ಪಿಜಿ, ಲೈಬ್ರರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ವಿಜಯಪುರ 21: ನಗರ ಹಾಗೂ ಜಿಲ್ಲೆಯಾದ್ಯಂತ ಅಗತ್ಯ ಅನುಮತಿ ಪಡೆಯದೆ ಹಾಗೂ ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಪಿಜಿ ಮತ್ತು ಖಾಸಗಿ ಸ್ಟಡಿ ಲೈಬ್ರರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅಶೋಕ ಧಾಮ ಫೌಂಡೇಶನ್ ಆಗ್ರಹಿಸಿದೆ.
ಈ ಕುರಿತು ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಫೌಂಡೇಶನ್ ಪದಾಧಿಕಾರಿಗಳು, ವಿಜಯಪುರದಲ್ಲಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ದುರುಪಯೋಗಪಡಿಸಿಕೊಂಡು ಹಲವು ಅನಧಿಕೃತ ಪಿಜಿ ಹಾಗೂ ಖಾಸಗಿ ಲೈಬ್ರರಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ಆರೋಪಿಸಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಫೌಂಡೇಶನ್ ಗೌರವಾಧ್ಯಕ್ಷ ಪ್ರಕಾಶ್ ಮಿರ್ಜಿ ಮಾತನಾಡಿ, ಬಹುತೇಕ ಪಿಜಿ ಹಾಗೂ ಲೈಬ್ರರಿಗಳು ಮಹಾನಗರ ಪಾಲಿಕೆಯಿಂದ ಅಗತ್ಯ ಪರವಾನಗಿ ಪಡೆಯದೆ ನಡೆಯುತ್ತಿವೆ.
ಕೆಲವೆಡೆ ಅಗ್ನಿಶಾಮಕ ಇಲಾಖೆಯ ಓಓಅ, ತುರ್ತು ನಿರ್ಗಮನ ದ್ವಾರ ಹಾಗೂ ಅಗತ್ಯ ಸುರಕ್ಷತಾ ವ್ಯವಸ್ಥೆಗಳಿಲ್ಲದೆ ಕಿರಿದಾದ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೆಲವು ಸಂಸ್ಥೆಗಳಲ್ಲಿ ಸಿಸಿಟಿವಿ ವ್ಯವಸ್ಥೆ ಇಲ್ಲದಿರುವುದು ಹಾಗೂ ವಿದ್ಯಾರ್ಥಿಗಳ ಪ್ರವೇಶ-ನಿರ್ಗಮನದ ದಾಖಲಾತಿ ಸಮರ್ಕವಾಗಿ ನಿರ್ವಹಿಸದಿರುವುದು ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ ಯುವತಿಯರ ಸುರಕ್ಷತೆಯ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮ ಅಗತ್ಯವಾಗಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಹೇಳಿದರು.
ಮಹಾನಗರ ಪಾಲಿಕೆ, ಪೊಲೀಸ್ ಹಾಗೂ ಅಗ್ನಿಶಾಮಕ ಇಲಾಖೆಗಳು ನಗರದ ಎಲ್ಲ ಪಿಜಿ ಮತ್ತು ಖಾಸಗಿ ಸ್ಟಡಿ ಲೈಬ್ರರಿಗಳ ಕಡ್ಡಾಯ ತಪಾಸಣೆ ನಡೆಸಿ, ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಅಶೋಕ ಧಾಮ ಫೌಂಡೇಶನ್ ಪದಾಧಿಕಾರಿಗಳಾದ ಮಧೂರ, ಶಶಿಧರ, ಅಭಿಲಾಷ, ಲಖನ್, ವಿಶ್ವಾರಾಧ್ಯ ವಾಲಿಕಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.