ಖಾನಾಪುರ

ನಕಲಿ ಪತ್ರಕರ್ತರ ವಿರುದ್ಧ ಕ್ರಮಕ್ಕೆ ಭೂರಣಕಿ ಗ್ರಾಪಂದಿಂದ ಎಸ್‌ಪಿಗೆ ದೂರು

ನಕಲಿ ಪತ್ರಕರ್ತರ ವಿರುದ್ಧ ಕ್ರಮಕ್ಕೆ ಭೂರಣಕಿ ಗ್ರಾಪಂದಿಂದ ಎಸ್‌ಪಿಗೆ ದೂರು

ಖಾನಾಪುರ : ತಾವು ಪತ್ರಕರ್ತರೆಂದು ಹೇಳಿಕೊಂಡು ತಮ್ಮ ಗ್ರಾಮ ಪಂಚಾಯ್ತಿಯ ದೈನಂದಿನ ಕೆಲಸ ಕಾರ್ಯಗಳಿಗೆ ತೊಂದರೆ ಉಂಟು ಮಾಡುತ್ತಿರುವ ಮಾಸ್ಕೇನಟ್ಟಿ ಗ್ರಾಮದ ಜ್ಯೋತಿಬಾ ಭೇಂಡಿಗೇರಿ ಮತ್ತು ಸುರಪುರ ಕೇರವಾಡ ಗ್ರಾಮದ ಶಶಿಕಾಂತ ತಳವಾರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಮೀಪದ ಭೂರಣಕಿ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ ಮತ್ತು ಸಿಬ್ಬಂದಿ ಬುಧವಾರ ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. 

ಬುಧವಾರ ಪಟ್ಟಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಗ್ರಾಪಂ ಅಧ್ಯಕ್ಷ ಮುಬಾರಕ ಕಿತ್ತೂರ, ಜ್ಯೋತಿಬಾ ಭೇಂಡಿಗೇರಿ ಮತ್ತು ಶಶಿಕಾಂತ ತಳವಾರ ತಾವು ಯೂ ಟೂಬ್ ವಾಹಿನಿಯ ಪತ್ರಕರ್ತರೆಂದು ಹೇಳಿಕೊಂಡು ಮೇಲಿಂದ ಮೇಲೆ ಗ್ರಾಪಂ ಕಚೇರಿಗೆ ಭೇಟಿ ನೀಡಿ ವಿಡಿಯೋ ಶೂಟಿಂಗ್ ಮಾಡುತ್ತಾರೆ.  

ತಮಗೆ ಹಣ ನೀಡುವಂತೆ ಪೀಡಿಸುತ್ತಿದ್ದಾರೆ. ಅವರು ಕೇಳಿದಷ್ಟು ಹಣ ನೀಡಲು ನಿರಾಕರಿಸಿದರೆ ನಮ್ಮ ಪಂಚಾಯ್ತಿ ಬಗ್ಗೆ ಅಸಭ್ಯ ಭಾಷೆ ಬಳಸಿ, ಪಂಚಾಯ್ತಿಯಲ್ಲಿ ಕೋಟಿಗಟ್ಟಲೇ ಅವ್ಯವಹಾರ ನಡೆದಿದೆ ಎಂದು ಆರೋಪಿಸುವ ಮತ್ತು ನಮ್ಮನ್ನು ಅಪರಾಧಿಗಳೆಂದು ಬಿಂಬಿಸುವ ಸುದ್ದಿಗಳನ್ನು ತಯಾರಿಸಿ ಬಿತ್ತರಿಸುತ್ತಿದ್ದಾರೆ.  

ಇದರಿಂದಾಗಿ ಗ್ರಾಪಂನ ಜನಪ್ರತಿನಿಧಿಗಳಿಗೆ, ಪಿಡಿಒ, ಕಾರ್ಯದರ್ಶಿ ಮತ್ತು ಸಿಬ್ಬಂದಿಗೆ ತೊಂದರೆ ಉಂಟಾಗುತ್ತಿದೆ. ಇವರ ಕಿರುಕಳದ ಕಾರಣ ಗುತ್ತಿಗೆದಾರರು ನಮ್ಮ ಗ್ರಾಪಂ ಕಾಮಗಾರಿಗಳನ್ನು ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಪಂನ ಸದಸ್ಯರು, ಪಿಡಿಒ, ಸಿಬ್ಬಂದಿ ಸೇರಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಇವರಿಬ್ಬರ ವಿರುದ್ಧ ಲಿಖಿತ ದೂರನ್ನು ಸಲ್ಲಿಸಿದ್ದೇವೆ ಎಂದು ವಿವರಿಸಿದರು. 

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ವಿದ್ಯಾ ಪಾಟೀಲ, ಸದಸ್ಯರಾದ ಎಂ.ಎಂ ಸಾಹುಕಾರ, ಮಲ್ಲಪ್ಪ ತಳವಾರ, ವಿಠ್ಠಲ ಸಾಗರೇಕರ, ಶ್ರೀದೇವಿ ಬಡಿಗೇರ, ಗೀತಾ ಕೋಲಕಾರ, ಮಂಜುಳಾ ದೊಡಮನಿ, ಬೇಬಿಜಾನ ಪಾಟೀಲ ಸೇರಿದಂತೆ ಗ್ರಾಪಂ ಪಿಡಿಒ, ಸಿಬ್ಬಂದಿ ಇದ್ದರು. 


ಸುದ್ದಿ ಓದಿ