ಗಣಿಗಾರಿಕೆ ನಿಯಮಗಳ ಸರಳಿಕರಣಕ್ಕೆ ಆಗ್ರಹ : ಮಿಣಜಗಿ ಗಣಿಗಾರಿಕೆ ಕುರಿತು ಬೆಂಗಳೂರನಲ್ಲಿ ಸಭೆ
ತಾಳಿಕೋಟೆ 23: ತಾಲೂಕಿನ ಮಿಣಜಗಿ ಗ್ರಾಮದ ಫರಸಿ ಕಲ್ಲಿನ ಕ್ವಾರಿ ಗಣಿಗಾರಿಕೆ ಮೇಲಿನ ಪ್ರಕರಣಗಳು ಹಾಗೂ ಗಣಿಗಾರಿಕೆ ನಿಯಮಗಳು ಸರಳಿಕರಣಗೊಳಿಸುವ ಕುರಿತಂತೆ ಗಣಿ ಸಚಿವ ಹಾಲಪ್ಪ ಆಚಾರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಬೆಂಗಳೂರಿನ ಖನಿಜ ಭವನದಲ್ಲಿ ನಡೆದ ಸಭೆಯಲ್ಲಿ ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ನೇತೃತ್ವದಲ್ಲಿ ಗಣಿ ಮಾಲಿಕರು ಸಭೆಯಲ್ಲಿ ಭಾಗವಹಿಸಿದ್ದರು. ಮಿಣಜಗಿಯ ದೊರೆಯುವ ಮನೆ ಕಟ್ಟಲು ಬಳಸಲು ಫರಸಿ ಕಲ್ಲುಗಳನ್ನು ಶಹಾಬಾದ್ ಶಿಲೆ ವ್ಯಾಪ್ತಿಯಿಂದ ಕೈಬಿಟ್ಟು ಪ್ರತ್ಯೇಕವಾಗಿ ಕೇವಲ ಮನೆ ಕಟ್ಟುವ ಕಲ್ಲು ಎಂದು ಪರಿಗಣಿಸಿ ಸರ್ಕಾರದ ನಿಯಮಗಳಿಗೆ ತಿದ್ದುಪಡಿ ಮಾಡುವಂತೆ ನಿಯೋಗ ಸಚಿವರನ್ನು ಕೋರಿತ್ತು. ಸಭೆಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜಕುಮಾರ ಪಾಂಡೆ, ವಿಜಯಪುರ ಜಿಲ್ಲಾಧಿಕಾರಿ ಡಾಽ ವಿಜಯಮಹಾಂತೇಶ ದಾನಮ್ಮನವರ ಮತ್ತು ಇಲಾಖೆಯ ನಿರ್ದೇಶಕರು, ಉಪ ನಿರ್ದೇಶಕರು ಸಭೆಯಲ್ಲಿ ಭಾಗವಹಿಸಿ ಕ್ವಾರಿ ಮಾಲಿಕರು, ಪ್ರತಿನಿಧಿಗಳ ಅಹವಾಲು ಆಲಿಸಿದ್ದರು.
ಸಚಿವ ಹಾಲಪ್ಪ ಆಚಾರ ಮಾತನಾಡಿ, ಭೂಮಿಯಿಂದ ತೆಗೆಯುವ ಪ್ರತಿಯೊಂದು ವಸ್ತುವೂ ಖನಿಜ ಎಂದು ಪರಿಗಣಿಸಲ್ಪಡುತ್ತದೆ. ಅದಕ್ಕೆ ಕಡ್ಡಾಯವಾಗಿ ರಾಯಲ್ಟಿ ಶುಲ್ಕ ಕಟ್ಟಲೇಬೇಕು. ಗರಸು ಮಣ್ಣನ್ನು ಭೂಮಿಯಿಂದ ತೆಗೆದರೂ ಅದಕ್ಕೆ ರಾಯಲ್ಟಿ ಕಟ್ಟಿಸಿಕೊಳ್ಳಲಾಗುತ್ತದೆ. ಆದರೂ ಕ್ವಾರಿ ಮಾಲಿಕರ ಬೇಡಿಕೆ ಮತ್ತು ರಾಯಲ್ಟಿ ಶುಲ್ಕ ಕಡಿಮೆ ಮಾಡುವ ಮುರಿತು 2-3 ತಿಂಗಳಲ್ಲಿ ನಡೆಯಲಿರುವ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಗಣಿಗಾರಿಕೆ ಮಾಡಲು ವಿವಿಧ ಇಲಾಖೆಗಳ ನಿರಪೇಕ್ಷಣಾ ಪ್ರಮಾಣ ಪತ್ರ ನೀಡುವಿಕೆ ಸರಳೀಕರಣಗೊಳಿಸಬೇಕು ಎನ್ನುವ ಬೇಡಿಕೆಗೆ ಸ್ಪಂದಿಸಿದ ಸಚಿವರು ಕಂದಾಯ ಮತ್ತು ಅರಣ್ಯ ಇಲಾಖೆಯ ನಿರಪೇಕ್ಷಣಾ ಪ್ರಮಾಣ ಪತ್ರವನ್ನು ಅರ್ಜಿ ಸಲ್ಲಿಸಿದ 15 ದಿನಗಳೊಳಗೆ ನೀಡಲು ಕ್ರಮ ಕೈಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ಪೂರ್ವಜರ ಕಾಲದಿಂದಲೂ ಫರಸಿ ಕಲ್ಲು ತೆಗೆಯುವ ಕೆಲಸ ನಡೆಯುತ್ತಿದೆ. 2005ರಲ್ಲಿ ಗಣಿಗಾರಿಕೆ ನೀತಿಯಲ್ಲಿ ತಿದ್ದುಪಡಿ ತಂದಿರುವ ಕಾರಣ ಗಣಿಗಾರಿಕೆ ಕಠಿಣವಾಗಿದೆ. ಆ ಹಿನ್ನೆಲೆ ಹಲವರಿಗೆ ನೋಟಿಸ್ ಕೂಡ ನೀಡಿದ್ದು ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ನಿಯೋಗ ಸಚಿವರ ಗಮನಕ್ಕೆ ತಂದಿತು. ಇದಕ್ಕೆ ಸ್ಪಂಧಿಸಿದ ಸಚಿವರು, ಪ್ರಧಾನ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿ ನ್ಯಾಯಾಲಯದ ಅಂತಿಮ ಆದೇಶಕ್ಕೆ ಬದ್ದರಾಗಿ ಪುನಹ ಗಣಿಗಾರಿಕೆ ಪ್ರಾರಂಭಿಸಲು ಸರ್ಕಾರಕ್ಕೆ ಮುಚ್ಚಳಿಕೆ ಪತ್ರ ಬರೆದುಕೊಟ್ಟು ಈಗಿನ ಯಥಾಸ್ಥಿತಿ ಪರಿಗಣಿಸಿ ಗಣಿಗಾರಿಕೆ ಮರು ಪ್ರಾರಂಭಿಸಲು ನಿಯಮಾನುಸಾರ ಅನುಮತಿ ಕೊಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಗಣಿಗಾರಿಕೆ ಮರು ಪ್ರಾರಂಭಿಸುವಾಗ ಹಳಬರು, ಹೊಸಬರು ಎಂದು ವಿಭಜಿಸಿ ಹಳಬರಿಗೆ ಕೆಲ ನಿಯಮಗಳಿಂದ ರಿಯಾಯಿತಿ ನೀಡುವಂತೆ ನಿಯೋಗದಲ್ಲಿದ್ದ ಕೆಲವರು ಪ್ರಸ್ತಾಪ ಮಾಡಿದ್ದಾರೆ. ಈ ವಿಷಯವನ್ನು ದಾಖಲಿಸಿಕೊಂಡಿರುವ ಸಚಿವರು ಈ ಕುರಿತು ಪರೀಶೀಲಿಸುವುದಾಗಿ ತಿಳಿಸಿದರು. ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸಾಧ್ಯವಾದಷ್ಟು ಅನುಕೂಲ ಕಲ್ಪಿಸುವ ಭರವಸೆ ನೀಡಿದರು. ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರು ಮಿಣಜಗಿ ಕ್ವಾರಿಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವಂತೆ ಒತ್ತಡ ಹೇರಿರುವ ಹಿನ್ನೆಲೆ ನಿಯಮಗಳ ವ್ಯಾಪ್ತಿಯಲ್ಲಿ ಬರುವ ಅಂಶಗಳನ್ನು ಸರಳೀಕರಣಗೊಳಿಸುವ ಸಾಧ್ಯತೆ ಕುರಿತು ಉನ್ನತ ಮಟ್ಟದ ಸಮಿತಿಯಲ್ಲಿ ತೀರ್ಮಾನ ಕೈಕೊಳ್ಳುವುದಾಗಿ ಸಚಿವರು ನಿಯೋಗಕ್ಕೆ ಭರವಸೆ ನೀಡಿದರು.
ಶಾಸಕ ನಡಹಳ್ಳಿಯವರ ನೇತೃತ್ವದ ನಿಯೋಗದಲ್ಲಿ 80ಕ್ಕೂ ಹೆಚ್ಚು ಜನರು ಕ್ವಾರಿ ಮಾಲಿಕರು ಇದ್ದರು.