ಬಳ್ಳಾರಿ

ರಂಗ ಶಿಕ್ಷಕರ ನೇಮಕಾತಿಗೆ ಆಗ್ರಹ

ರಂಗ ಶಿಕ್ಷಕರ ನೇಮಕಾತಿಗೆ ಆಗ್ರಹ

ಬಳ್ಳಾರಿ 27: 371(ಜೆ) ಸರ್ಕಾರಿ ಶಾಲೆಗಳ ಶಿಕ್ಷಕರ ನೇಮಕಾತಿಗಾಗಿ ಹೊರಡಿಸಿರುವ ಕರಡು ಅಧಿಸೂಚನೆ ತಿದ್ದುಪಡಿ ತಂದು ವಿಷಯವಾರು ಶಿಕ್ಷಕರು, ಚಿತ್ರಕಲೆ, ಸಂಗೀತ ಶಿಕ್ಷಕರೊಂದಿಗೆ ರಂಗ ಶಿಕ್ಷಕರನ್ನು ನೇಮಕ ಮಾಡುವಂತೆ ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ ಅವರನ್ನು ಬಳ್ಳಾರಿ ಸರ್ಕಾರಿ ಅತಿಥಿ ಗೃಹದಲ್ಲಿ ಭೇಟಿ ಮಾಡಿ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಪ್ರಭುದೇವ ಕಪ್ಪಗಲ್ಲು, ರಂಗ ಸಮಾಜ ಸದಸ್ಯ ಶಿವೇಶ್ವರಗೌಡ ನೇತೃತ್ವದ ರಂಗತೋರಣದ ನಿಯೋಗವು ಭೇಟಿ ಮಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಸನ್ಮಾನ್ಯ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರ​‍್ಪನವರಿಗೆ ಮನವರಿಕೆ ಮಾಡಿ ಈ ಭಾಗದ ಯುವಕರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಲಾಯಿತು. 

ರಂಗ ಶಿಕ್ಷಕರ ಅಗತ್ಯತೆ: ಕರ್ನಾಟಕದ ರಂಗಭೂಮಿ ನಮ್ಮ ದೇಶದಲ್ಲೇ ಅತಿ ವಿಶಿಷ್ಟ ಹಾಗೂ ಪ್ರಸಂಶನೀಯವಾಗಿದೆ. ಇಲ್ಲಿ ಅಧಿಕೃತ ರಂಗ ಶಿಕ್ಷಣ ಕೇಂದ್ರಗಳಲ್ಲಿಂದ ಹೊರ ಬರುವ ರಂಗ ಪದವೀಧರರು ಕಠಿಣ ಪರಿಶ್ರಮಿಗಳೂ, ಕೌಶಲ್ಯವಂತರೂ ಹಾಗೂ ಪ್ರತಿಭಾವಂತರಿದ್ದಾರೆ. ಪ್ರತಿವರ್ಷ 200ಕ್ಕೂ ಹೆಚ್ಚು ರಂಗ ಪದವೀಧರರು ಈ ಕೇಂದ್ರಗಳಿಂದ ಹೊರಬರುತ್ತಿದ್ದು ಅತ್ಯಂತ ಉತ್ಸಾಹಿಗಳಾಗಿದ್ದಾರೆ. ರಂಗ ಶಿಕ್ಷಕರು ಮಕ್ಕಳನ್ನು ಕಲಿಕೆಯ ಜೊತೆಗೆ ಅವರ ಪ್ರತಿಭೆ ಹೊರತರಲು ಸೂಕ್ತ ತರಬೇತಿ ನೀಡಿ ಸಂಗೀತ, ಅಭಿನಯ, ಪ್ರಸಾಧನ, ವೇಷಭೂಷಣಗಳ ಬಗ್ಗೆ ಸಂದರ್ಭೋಚಿತವಾಗಿ ಬೋಧಿಸುತ್ತಲೇ  ಪ್ರಾಯೋಗಿಕತೆಗಳ ಮೂಲಕ ಅವರಲ್ಲಿರಬಹುದಾದ ಕೀಳರಿಮೆ, ಭಯ, ಆತಂಕ, ಇತ್ಯಾದಿಗಳನ್ನು ಹೋಗಲಾಡಿಸಿ ಸಮಯ ಪ್ರಜ್ಞೆ ಜೊತೆಗೆ ಸಹ ಜೀವನ, ಸಾಮೂಹಿಕ ಒಳಗೊಳ್ಳುವಿಕೆಯ ಉದ್ದೀಪನದೊಂದಿಗೆ ವ್ಯಕ್ತಿತ್ವ ವಿಕಸನದ ಪಾಠಗಳನ್ನು ತಂತಾನೆ ಕಲಿಯುವಂತಾಗುತ್ತದೆ ಎಂಬುವುದು ರಂಗ ತಜ್ಞರ ವಿಶ್ವಾಸ. 

ಕೂಡಲೇ ಈ ಕರಡು ಅಧಿಸೂಚನೆಗೆ ತಿದ್ದುಪಡಿ ತಂದು, ಸಂಗೀತ, ಚಿತ್ರಕಲಾ ಶಿಕ್ಷಕರೊಂದಿಗೆ ರಂಗ ಶಿಕ್ಷಕರ ನೇಮಕಕ್ಕೆ ಪರಿಗಣಿಸಿ, ಕನಿಷ್ಟ ಶೇ. 30ರಷ್ಟು ಹುದ್ದೆಗಳನ್ನು ರಂಗ ಶಿಕ್ಷಕರ ನೇಮಕಾತಿಗೆ ಅವಕಾಶ ಕಲ್ಪಿಸಿ, ಅಧಿಸೂಚನೆಯನ್ನು ಹೊರಡಿಸಬೇಕೆಂದು ಈ ಭಾಗದ ಎಲ್ಲಾ ರಂಗ ಪದವೀಧರರ ಪರವಾಗಿ ರಂಗತೋರಣ ಸಂಸ್ಥೆ ಆಗ್ರಹಿಸಿದೆ. 


ಸುದ್ದಿ ಓದಿ