2025ರ ಕಿತ್ತೂರು ಉತ್ಸವದ ಲೆಕ್ಕಪತ್ರ ಸಲ್ಲಿಕೆಯಲ್ಲಿ ವಿಳಂಬ : ಹಣಕಾಸು ದುರುಪಯೋಗದ ಶಂಕೆ ವ್ಯಕ್ತಪಡಿಸಿ ಧರಣಿ ಎಚ್ಚರಿಕೆ
ಲೋಕದರ್ಶನ ವರದಿ
ಕಿತ್ತೂರು 22 : ಕಳೆದ ಸಾಲಿನಲ್ಲಿ ನಡೆದ ವೀರರಾಣಿ ಕಿತ್ತೂರು ಚೆನ್ನಮ್ಮ ಉತ್ಸವದ ವೆಚ್ಚದ ಲೆಕ್ಕಪತ್ರಗಳನ್ನು ಬಹಿರಂಗಪಡಿಸಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದು, ಇದರಲ್ಲಿ ಕೋಟ್ಯಂತರ ರೂಪಾಯಿ ಹಣಕಾಸು ದುರುಪಯೋಗವಾಗಿರುವ ಶಂಕೆ ಇದೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಆರೋಪಿಸಿದರು.
ಪಟ್ಟಣದ ರಾಣಿ ಚನ್ನಮ್ಮಾಜಿ ಕೋಟೆ ಆವರಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಟಿಐ ಅರ್ಜಿ ಸಲ್ಲಿಕೆ 27-01-2025 ರಂದು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಉತ್ಸವದ ವೆಚ್ಚದ ವಿವರಗಳನ್ನು ಕೋರಲಾಗಿತ್ತು. ಜಿಲ್ಲಾಧಿಕಾರಿಗಳ ಕಚೇರಿಯು ಈ ಅರ್ಜಿಯನ್ನು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ನಿರ್ಮಿತಿ ಕೇಂದ್ರಕ್ಕೆ ವರ್ಗಾಯಿಸಿತ್ತು.
ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಒಂದು ವರ್ಷ ಗತಿಸಿದರೂ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಿಂದ 18.7.2025 ರಂದು ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಸ್ಪಸ್ಟ ಆದೇಶವಾದರೂ ಇದುವರೆಗೂ ಯಾವದೇ ಲೆಕ್ಕ ಪತ್ರವನ್ನು ಒದಗಿಸುತ್ತಿಲ್ಲ. ಮಾಹಿತಿ ನೀಡಬೇಕಾದ ಜಿಲ್ಲಾಧಿಕಾರಿಗಳು ಬೇರೆ ಅಧಿಕಾರಿಗಳ ಕಡೆ ಬೆರಳು ತೋರುತ್ತಿರುವದನ್ನು ನೋಡಿದರೆ ಜಿಲ್ಲಾಧಿಕಾರಿಗಳ ಪಾತ್ರವೂ ಇದರಲ್ಲಿ ಇರಬಹುದೆಂದರು ಆರೋಪಿಸಿದರು.
ಉತ್ಸವದಲ್ಲಿ ಭಾಗವಹಿಸಿದ ಗಣ್ಯರು, ಕಲಾವಿದರು ಹಾಗೂ ಸಾರ್ವಜನಿಕರ ವಸತಿ, ಊಟ-ಉಪಹಾರದ ವೆಚ್ಚ. ದಿನಗಳ ಉತ್ಸವದಲ್ಲಿ ಭಾಗವಹಿಸಿದ ವಿವಿಧ ಕಲಾತಂಡಗಳು ಮತ್ತು ವಾದ್ಯ ತಂಡಗಳ ಹೆಸರು, ವಿಳಾಸ ಹಾಗೂ ಅವರಿಗೆ ನೀಡಲಾದ ಸಂಭಾವನೆ. ವೀಡಿಯೋಗ್ರಫಿ, ಛಾಯಾಗ್ರಹಣ (ಫೋಟೋಗ್ರಫಿ) ಹಾಗೂ ಚಿತ್ರೀಕರಣದ ಗುತ್ತಿಗೆ ಪಡೆದವರ ವಿವರ ಮತ್ತು ನೀಡಿದ ಹಣ. ಉತ್ಸವದ ಸಮಯದಲ್ಲಿ ಸುರಕ್ಷತೆ ಮತ್ತು ಭದ್ರತೆಗಾಗಿ ಪೊಲೀಸ್ ಇಲಾಖೆಗೆ ವೆಚ್ಚವಾದ ಹಣದ ಒದಗಿಸುವಂತೆ ಕೋರಲಾಗಿತ್ತು ಎಂದು ತಿಳಿಸಿದರು.