ನಾಡಿನ ಸಂಸ್ಕೃತಿ ಮತ್ತು ಕಲೆ ಉಳಿಸುವಲ್ಲಿ ನಾಡಹಬ್ಬಗಳ ಪಾತ್ರ ಅಪಾರ: ಪಿಎಸ್ಐ ಲಕ್ಷ್ಮಣ ಗೌಡಿ
ಸವದತ್ತಿ 22: ನಾಡಿನ ಸಂಸ್ಕೃತಿ, ಕಲೆ ಮತ್ತು ಸಾಹಿತ್ಯವನ್ನು ಉಳಿಸಿ ಬೆಳೆಸುವಲ್ಲಿ ನಾಡಹಬ್ಬಗಳ ಪಾತ್ರ ಅಪಾರವಾಗಿದೆ.ಯುವ ಪೀಳಿಗೆಗೆ ನಮ್ಮ ನೆಲದ ಭವ್ಯ ಪರಂಪರೆಯನ್ನು ಪರಿಚಯಿಸಲು ಕಳೆದ ನಾಲ್ಕೂವರೆ ದಶಕಗಳಿಂದಲೂ ಈ ಉತ್ಸವವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದು ಪಿಎಸ್ಐ ಲಕ್ಷ್ಮಣ ಗೌಡಿ ಅಭಿಪ್ರಾಯಪಟ್ಟರು. ನಗರದ ಗಾಂಧಿ ಚೌಕದಲ್ಲಿ ಆಯೋಜಿಸಲಾಗಿದ್ದ 46ನೇ ವರ್ಷದ ಹೆಮ್ಮೆಯ ನಾಡಹಬ್ಬ ಉತ್ಸವದ ಸಮಾರೋಪ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಡಹಬ್ಬ ಉತ್ಸವ ಸಮಿತಿಯ ಅಧ್ಯಕ್ಷ ಬಸವರಾಜ ಪುರದಗುಡಿ, ನಾಡಹಬ್ಬವು ಕೇವಲ ಒಂದು ಆಚರಣೆಯಷ್ಟೇ ಅಲ್ಲ, ಅದು ಸಮಾಜದಲ್ಲಿ ಸೌಹಾರ್ದತೆ, ಭಾವೈಕ್ಯತೆ ಮತ್ತು ಒಗ್ಗಟ್ಟನ್ನು ಮೂಡಿಸುವ ಶಕ್ತಿಯಾಗಿದೆ. ಗ್ರಾಮೀಣ ಭಾಗದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅಲ್ಲದೆ, ಸಮಾಜಮುಖಿ ಸೇವೆ ಸಲ್ಲಿಸಿದ ಸ್ಥಳೀಯ ಪತ್ರಕರ್ತರನ್ನು ಗೌರವಿಸಿ ಸನ್ಮಾನಿಸುವ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು.ಉತ್ಸವದ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಜೆ ವೇಳೆ ಶಕ್ತಿದೇವತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ಸಾಮೂಹಿಕ ಸೀಮೊಲ್ಲಂಘನೆಗಾಗಿ ಎಲ್ಲಾ ದೇವಸ್ಥಾನಗಳ ಪಲ್ಲಕ್ಕಿಗಳೊಂದಿಗೆ ಭವ್ಯವಾದ ಮೆರವಣಿಗೆ ಜರುಗಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಹಾಗೂ ಮಹಿಳಾ ಡೊಳ್ಳು ಕುಣಿತ, ಜೋಕಾನಟ್ಟಿ ಕಲಾತಂಡ, ಮಜಲು, ಕರಡಿ ಮಜಲು, ಜಾಂಜ್ ಪಥಕ್, ಜಗ್ಗಲಗಿ, ಮರಗಾಲು ಹಾಗೂ ಕುದುರೆ ಕುಣಿತ, ಬ್ಯಾಂಡ್ ಮಜಲು ಮತ್ತು ಉಡುಪಿಯ ಕುಕ್ಕಿಟ್ಟೆಯ ವಿಶೇಷ ಬಾಂಧವ್ಯ ಮಹಿಳಾ ಚಂಡೆ ಬಳಗದ ಚೆಂಡೆ ವಾದನ ಮುಂತಾದ ವೈವಿಧ್ಯಮಯ ಕಲಾ ತಂಡಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು.
ಮೆರವಣಿಗೆಯುದ್ದಕ್ಕೂ ಸಾರ್ವಜನಿಕರು ಹಾಗೂ ಸಾವಿರಾರು ಭಕ್ತಾದಿಗಳು ಉತ್ಸಾಹದಿಂದ ಪಾಲ್ಗೊಂಡು ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದರು. ಗಜಾನನ ಯುವಕ ಮಂಡಳ ಅಕ್ಕಿ ಓಣಿ ಇವರಿಂದ ಜರುಗಿದ ಪ್ರಸಿದ್ಧ ದೊಡ್ಡಾಟ ಸಂಗ್ಯಾ ಬಾಳ್ಯಾ ನಾಟಕವು ಪ್ರೇಕ್ಷಕರನ್ನು ಅಭೂತಪೂರ್ವವಾಗಿ ರಂಜಿಸಿತು. ಒಟ್ಟಾರೆಯಾಗಿ ನಗರದಲ್ಲಿ ನಾಡಹಬ್ಬವು ಅತ್ಯಂತ ಅದ್ದೂರಿಯಾಗಿ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಳೆಗಟ್ಟುವ ಮೂಲಕ ಯಶಸ್ವಿಯಾಗಿ ಸಂಪನ್ನಗೊಂಡಿತು.