ಬೆಳಗಾವಿ

ಹಿಂದೂ ರುದ್ರಭೂಮಿಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ

ಹಿಂದೂ ರುದ್ರಭೂಮಿಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ



ಸವದತ್ತಿ 22 : ಕರೀಕಟ್ಟಿ ರಸ್ತೆ ಮಾರ್ಗದಲ್ಲಿ ಹಿಂದೂ ರುದ್ರಭೂಮಿ ಆವರಣದಲ್ಲಿ ಲಿಂಗರಾಜ ಶಿಕ್ಷಣ ಮತ್ತು ಸಾಮಾಜಿಕ ಸೇವಾ ಸಂಘದ ವತಿಯಿಂದ ಇತ್ತೀಚೆಗೆ ಬೃಹತ್ ಸ್ವಚ್ಛತಾ ಅಭಿಯಾನ ಹಾಗೂ ಶ್ರಮದಾನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು. ಸಾರ್ವಜನಿಕ ಸ್ಥಳಗಳು ಹಾಗೂ ರುದ್ರಭೂಮಿಯ ನೈರ್ಮಲ್ಯ ಮತ್ತು ನೈರ್ಮಲ್ಯ ಕಾಪಾಡುವ ಉದಾತ್ತ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಅಭಿಯಾನದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯ ಯುವಕರು ಸಕ್ರಿಯವಾಗಿ ಭಾಗವಹಿಸಿ ಶ್ರಮದಾನ ಮಾಡಿದರು. ರುದ್ರಭೂಮಿ ಆವರಣದಲ್ಲಿ ದಟ್ಟವಾಗಿ ಬೆಳೆದಿದ್ದ ಅನಗತ್ಯ ಮುಳ್ಳಿನ ಗಿಡ-ಕಂಟಿಗಳನ್ನು ತೆರವುಗೊಳಿಸಿ, ಬಿದ್ದಿದ್ದ ಕಸ-ಕಡ್ಡಿಗಳನ್ನು ವಿಲೇವಾರಿ ಮಾಡುವ ಮೂಲಕ ಇಡೀ ಆವರಣಕ್ಕೆ ಹೊಸ ಕಳೆ ತಂದರು. ಈ ಸಂದರ್ಭದಲ್ಲಿ ಮಾತನಾಡಿದ ಶಂಕರ್ ಗುಡಿ ಅವರು, ಪವಿತ್ರವಾದ ರುದ್ರಭೂಮಿಯನ್ನು ಸ್ವಚ್ಛ ಹಾಗೂ ಸುಂದರವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ.

ಪರಿಸರ ನೈರ್ಮಲ್ಯ ಮತ್ತು ಸಾಮಾಜಿಕ ಕಾಳಜಿಯ ದೃಷ್ಟಿಯಿಂದ ನಮ್ಮ ಸಂಘದ ವತಿಯಿಂದ ಮುಂಬರುವ ದಿನಗಳಲ್ಲೂ ಇಂತಹ ಹಲವು ಸಮಾಜಮುಖಿ ಸೇವಾ ಕಾರ್ಯಗಳನ್ನು ಪೂರ್ಣಪ್ರಮಾಣದಲ್ಲಿ ಹಮ್ಮಿಕೊಳ್ಳಲಾಗುವುದು, ಎಂದು ಹೇಳಿದರು. ಈ ಸಂದರ್ಭದಲ್ಲಿ ಬಸವರಾಜ ಮಡ್ಲಿ,ಬಾಪೂ ಕರೀಕಟ್ಟಿ, ಜಯಪ್ಪ ಹವಾಲ್ದಾರ್, ಶಶಿಧರ ಸೋಮಣ್ಣವರ, ನಾರಾಯಣ ಮುತಗೊಂಡ, ಮಹೇಶ್ ರಾವಳ, ಹಾಗೂ ಸಂಘದ ಪ್ರಮುಖ ಪದಾಧಿಕಾರಿಗಳು, ಉಪಸ್ಥಿತರಿದ್ದು ಯಶಸ್ವಗೊಳಿಸಿದರು. ಸಂಘದ ಈ ಪರಿಸರ ಹಾಗೂ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. 


ಸುದ್ದಿ ಓದಿ