ತಾಳಿಕೋಟಿ

ಅಭ್ಯರ್ಥಿ ಘೋಷಣೆಗೆ ವಿಳಂಬ ; ಆತಂಕದಲ್ಲಿ ಕೈ ಆಕಾಂಕ್ಷಿಗಳು ವಿಶೇಷ ವರದಿ : ಅಬ್ದುಲ್‌ಗನಿ ಮಕಾಂದಾರ

ಅಭ್ಯರ್ಥಿ ಘೋಷಣೆಗೆ ವಿಳಂಬ ; ಆತಂಕದಲ್ಲಿ ಕೈ ಆಕಾಂಕ್ಷಿಗಳು ವಿಶೇಷ ವರದಿ : ಅಬ್ದುಲ್‌ಗನಿ ಮಕಾಂದಾರ

ಲೋಕದರ್ಶನ ವರದಿ 

ತಾಳಿಕೋಟಿ: ಮುಂಬರಲಿರುವ 2023ರ ವಿಧಾನಸಭೆ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಜಿಲ್ಲೆಗಳ ಕ್ಷೇತ್ರಗಳಲ್ಲಿ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಮತಕ್ಷೇತ್ರವೂ ಕೂಡಾ ಒಂದಾಗಿದೆ. ಇಲ್ಲಿ 9 ಜನ ಆಕಾಂಕ್ಷಿಗಳು ಕಾಂಗ್ರೆಸ್ ಪಕ್ಷದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕೆಲವರು ಪಕ್ಷದ ಟಿಕೆಟ್ ಸಿಕ್ಕರೆ ಶತಾಯಗತಾಯ ಪ್ರಯತ್ನ ಮಾಡಿ ಗೆಲ್ಲಲ್ಲೇಬೇಕೆಂದು ಕಳೆದ ಒಂದು ವರ್ಷದಿಂದ ಕ್ಷೇತ್ರದಲ್ಲಿ ಕೆಲಸವನ್ನು ಮಾಡಿ ಮತದಾರರ ಒಲವು ಗಳಿಸಿಕೊಳ್ಳಲು ಯಶಸ್ವಿ ಕೂಡಾ ಆಗಿದ್ದಾರೆ. ಇನ್ನೂ ಕೆಲವರು ಬೆಂಗಳೂರಿನಲ್ಲಿ ತಿಂಗಳುಗಟ್ಟಲೆ  ಠಿಕಾಣಿ ಹೂಡಿ ಪಕ್ಷದ ನಾಯಕರಿಗೆ ದುಂಬಾಲು ಬಿದ್ದು ವರಿಷ್ಠರಿಗೆ ತಮ್ಮ ಪರ ಶಿಫಾರಸ್ಸು ಮಾಡಿಸುವಲ್ಲಿ ಯಶಸ್ವಿಯೂ ಕೂಡಾ ಆಗಿದ್ದಾರೆ ಎಂಬುದು ಅವರ ಆತ್ಮವಿಶ್ವಾಸದಿಂದ ತಿಳಿದುಬರುತ್ತಿದೆ. ಆದರೆ ಚುನಾವಣೆ ಕೇವಲ 80 ದಿನಗಳು ಮಾತ್ರ ಬಾಕಿವುಳಿದಿದ್ದರೂ ಇಲ್ಲಿಯವರೆಗೆ ಅಭ್ಯರ್ಥಿಗಳ ಪಟ್ಟಿ ಘೋಷಣೆ ಆಗದಿರುವದರಿಂದ ಆಕಾಂಕ್ಷಿಗಳು ತೀವ್ರ ಆತಂಕಕ್ಕೆ ಒಳಗಾಗುವಂತೆ ಮಾಡಿದೆ. 

ಪಕ್ಷದ ಚುನಾವಣಾ ಸಮಿತಿಯ ಸಭೆಗಳು ನಡೆಯುತ್ತಿವೆಯಾದರೂ ಇದಕ್ಕೆ ಸ್ಪಷ್ಟತೆ ಸಿಗುತ್ತಿಲ್ಲ. ದಿನಗಳು ಕಳೆದುಹೋಗುತ್ತಿವೆ. ಚುನಾವಣೆ ಸಮೀಪಿಸುತ್ತಿವೆ. ಕಾರ್ಯಕರ್ತರ ಉತ್ಸಾಹ ಕ್ಷೀಣಿಸುತ್ತಿದೆ, ಅಭ್ಯರ್ಥಿಗಳಿಗೆ ಟೆನ್ಶನ್ ಮೇಲೆ ಟೆನ್ಶನ್ ಹೆಚ್ಚಾಗುತ್ತಿದೆ. ಕಳೆದ ಬಾರಿ ಟಿಕೆಟ್ ಘೋಷಣೆ ವಿಳಂಬದಿಂದಾಗಿಯೇ ಪಕ್ಷದ ಅಭ್ಯರ್ಥಿಗೆ ಸಾಕಷ್ಟು ಸಮಯ ಸಿಗದಿರುವದರಿಂದ ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ತಲುಪಲು ಸಾಧ್ಯವಾಗಲಿಲ್ಲ, ಸೋಲಿಗೆ ಇದು ಕೂಡಾ ಕಾರಣವಾಯಿತು ಈ ಬಾರಿ ಹೀಗಾಗಬಾರದೆಂಬುದು ಆಕಾಂಕ್ಷಿಗಳ ಆಸೆಯಾಗಿದೆ. 

ಚುನಾವಣೆಗೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಕ್ಷೇತ್ರದಲ್ಲಿ ಸಂಘಟನೆ ಏನೋ ಅತ್ಯುತ್ತಮವಾಗಿದೆ. ಆದರೆ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುವುದು ಸುಲಭದ ಮಾತಲ್ಲ ಕ್ಷೇತ್ರದಲ್ಲಿ ಪ್ರತಿದಿನ ಪ್ರತಿಕ್ಷಣ ತೀವ್ರ ರಾಜಕೀಯ ಬೆಳವಣಿಗೆಗಳಾಗುತ್ತವೆ ಯಾವಾಗ ಏನಾಗುತ್ತದೆಯೋ ಎಂದು ಊಹಿಸುವುದು ಅಸಾಧ್ಯ ಎಷ್ಟು ವಿಳಂಬವಾಗುತ್ತದೆಯೋ ಅದು ಅಷ್ಟೇ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಚುನಾವಣಾ ತಂತ್ರಗಾರಿಕೆ ಏನೇ ಇರಲಿ ಪಕ್ಷದ ವರಿಷ್ಠರು ಅಭ್ಯರ್ಥಿಗಳ ಪಟ್ಟಿ ಆದಷ್ಟು ಬೇಗ ಬಿಡುಗಡೆ ಮಾಡುವುದೇ ಉತ್ತಮ. ಹಾಲಿ ಬಿಜೆಪಿ ಶಾಸಕರು ಕ್ಷೇತ್ರದಲ್ಲಿ ಶಕ್ತಿಮೀರಿ ಕೆಲಸ ಮಾಡಿರುವದರೊಂದಿಗೆ ಆಂತರಿಕ ಪೈಪೋಟಿ ಇಲ್ಲದಿರುವದರಿಂದ ನಿರಾತಂಕವಾಗಿ ಡ್ಯಾಮೇಟ್‌ನ್ನು ಸರಿಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಅವರನ್ನು ಹಗುರವಾಗಿ ಪರಿಗಣಿಸುವಂತಿಲ್ಲ. 


ಸುದ್ದಿ ಓದಿ