ವ್ಯವಸ್ಥಿತವಾಗಿ ನ್ಯೂನತೆಗಳನ್ನು ಸರಿಪಡಿಸುವಂತಾಗಬೇಕು: ಬಿ.ಕೆ.ಪಾಟೀಲ
ಮುಂಡಗೋಡ 27: ಸರ್ಕಾರದಿಂದ ಬರುವ ಸವಲತ್ತುಗಳ ಕುರಿತು ಸಾಕಷ್ಟು ತೊಂದರೆಗಳು ಇವೆ ಪ್ರತಿಯೊಂದೂ ಇಲಾಖೆಗೆ ಜನರು ಅಲೆದಾಡುತ್ತಿದ್ದಾರೆ ಇತ್ತೀಚೆಗೆ ಎಲ್ಲ ಆನ್ಲೈನ್ ಪದ್ಧತಿ ಆಗಿರುವುದರಿಂದ ಇಲಾಖೆ ಸಿಬ್ಬಂದಿ ಕಂಪ್ಯೂಟರ್ ಮೇಲೆ ಹಾಕಿ ಕೈಬಿಡುತ್ತಾರೆ ವ್ಯವಸ್ಥಿತವಾಗಿ ನ್ಯೂನತೆಗಳನ್ನು ಸರಿಪಡಿಸುವಂತಾಗಬೇಕು ಎಂದು ತಾಲೂಕಿನ ಇಂದೂರ ಗ್ರಾಮದ ಕಲ್ಮೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಿ.ಕೆ.ಪಾಟೀಲ ಮನವಿ ಮಾಡಿಕೊಂಡರು.
ಕಂದಾಯ ಇಲಾಖೆಯ ಆಶ್ರಯದಲ್ಲಿ ತಾಲೂಕಿನ ಇಂದೂರ ಗ್ರಾಮದ ಶ್ರೀಕಲ್ಮೇಶ್ವರ ದೇವಸ್ಥಾನದಲ್ಲಿ ಮಂಗಳವಾರ ನಡೆದ ಗ್ರಾಮ ವಾಸ್ತವ್ಯ ಮತ್ತು ಪಿಂಚಣಿ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತೋಟಗಾರಿಕೆ ಮತ್ತು ಕೃಷಿ ಇಲಾಖೆಗಳಿಂದ ರೈತರಿಗಾಗಿ ಇತ್ತೀಚೆಗೆ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿಲ್ಲ. ಬೆಳೆಗಳಿಗೆ ತುಂಬಿದ ಲಕ್ಷಾಂತರ ಹಣದ ವಿಮೆ ಪರಿಹಾರ ಬರುವುದೇ ಇಲ್ಲ. ಅಧಿಕಾರಿಗಳಿಗಾಗಲೀ ಅಥವಾ ಬ್ಯಾಂಕ್ನವರಿಗೆ ಕೇಳಿದರೆ ಆ ಬಗ್ಗೆ ಅವರಿಗೆ ಗೊತ್ತಿರುವುದಿಲ್ಲ ಎಂದರು. ಸಹಾಯಕ ಕೃಷಿ ನಿರ್ದೇಶಕ ಎಮ್.ಎಸ್.ಕುಲಕರ್ಣಿ ಮಾತನಾಡಿ ಭತ್ತ ಮತ್ತು ಗೋವಿನ ಜೋಳದ ಬೆಳೆಗಳಿಗೆ ಸಂಬಂಧಿಸಿದಂತೆ ನಿಗದಿತ ಅವಧಿಯೊಳಗೆ ವಿಮಾ ಕಂತು ತುಂಬಬೇಕು. ಇಳುವರಿ ಮಟ್ಟ ಕಡಿಮೆ ಇದ್ದರೆ ವಿಮೆ ಪರಿಹಾರ ಸಿಗುತ್ತದೆ ಜಾಸ್ತಿ ಆಗಿದ್ದರೆ ಸಿಗುವುದಿಲ್ಲ ಎಂದರು. ತಹಶೀಲ್ದಾರ ಶಂಕರ ಗೌಡಿ ಮಾತನಾಡಿ ಆಯ್ಕೆಯಾದ ಬೆಳೆಗಳ ನಾಲ್ಕು ಪ್ಲಾಟ್ಗಳನ್ನು ಗ್ರಾಮ ಲೆಕ್ಕಿಗ ಅಥವಾ ಗ್ರಾಮ ಪಂಚಾಯತನ ಮೂಲ ಕಾರ್ಯಕರ್ತರು ಆಣೆವಾರಿ ಮಾಡಿದ್ದರ ಆಧಾರದ ಮೇಲೆ ವಿಮೆ ಪರಿಹಾರ ನೀಡಲಾಗುತ್ತದೆ ಎಂದರು.
ಬಾಚಣಕಿ ಡ್ಯಾಂ ಸಮಿತಿ ಅಧ್ಯಕ್ಷ ಮಹದೇವಪ್ಪ ನಡಿಗೇರ ಮಾತನಾಡಿ ಸರ್ಕಾರದಿಂದ ಸರ್ವೇ ಆಗಿ ಮೊದಲು ಮಾಡಿದ ಮುಖ್ಯ ಕಾಲುವೆಗಳನ್ನು ಕೆಲವರು ಒತ್ತುವರಿ ಮಾಡಿಕೊಂಡು ಮುಚ್ಚಿ ಬೇರೆ ಕಡೆ ಕಾಲುವೆಗಳನ್ನು ಮಾಡಿಕೊಂಡು ನೀರು ಹೋಗದಂತೆ ಮಾಡಿದ್ದಾರೆ. ನೀರಿನ ಸೋರಿಕೆ ಕೂಡ ಬಂದ್ ಆಗಬೇಕು ಎಂದಾಗ ತಹಶೀಲ್ದಾರರು ಸಣ್ಣ ನೀರಾವರಿ ಇಲಾಖೆ ಎಇಇ ಅವರಿಗೆ ಪರೀಶೀಲನೆ ಮಾಡಿ ಅವಶ್ಯ ಬಿದ್ದರೆ ಇನ್ನೊಮ್ಮೆ ಸರ್ವೇ ಕೂಡ ಮಾಡಿ ಎಂದು ಸೂಚಿಸಿದರು.
ಕ್ಯಾಂಪ್ ನಂ.8ರ ಗೇಟ್ ಬಳಿ ಬರುವ ಸುಮಾರು 200 ಎಕರೆ ಜಮೀನಿಗೆ ನೀರು ಹಾಯಿಸುವ ಅನುಕೂಲತೆ ಇದೆ. ಆರಂಭದಲ್ಲಿ ಬಾಚಣಕಿ ಡ್ಯಾಂನಿಂದ ನೀರು ಬರುತ್ತಿತ್ತು. ಆದರೆ ಕಳೆದ ಬಹಳಷ್ಟು ವರ್ಷಗಳಿಂದ ಕಾಲುವೆ ಮುಚ್ಚಿ ಹೋಗಿ ಸಣ್ಣ ನೀರಾವರಿ ಇಲಾಖೆಯವರಿಗೆ ಸಾಕಷ್ಟು ಬಾರಿ ಹೇಳಿ ಸಾಕಾಗಿ ಈಗ ರೈತರೆಲ್ಲ ಸಾಲ ಮಾಡಿ ಕೊಳವೆಬಾವಿ ತೆಗೆಯಿಸಿ ಜೀವನ ನಡೆಸುತ್ತಿದ್ದೇವೆ ಎಂದು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಸಹದೇವಪ್ಪ ನಡಿಗೇರ ಬೇಸರ ವ್ಯಕ್ತ ಪಡಿಸಿದರು. 1917ರಲ್ಲಿ ಇಂದೂರ ಸರ್ವೇ ನಂ.11ರಲ್ಲಿ 4ಎಕರೆ 2ಗುಂಟೆ ಮತ್ತು ಸರ್ವೇ ನಂ.12ರಲ್ಲಿ 11ಗುಂಟೆ ಜಾಗವನ್ನು ಆಗಿನ ಕಲೆಕ್ಟರ್ ಸ್ಮಶಾನ ಎಂದು ಬರೆದಿಟ್ಟಿದ್ದಾರೆ. ಸಾಕಷ್ಟು ಪ್ರಯತ್ನಪಟ್ಟರೂ ಇನ್ನೂ ಅರಣ್ಯಭೂಮಿಯಾಗಿಯೇ ಉಳಿದಿದೆ. ಅಧಿಕೃತವಾಗಿಲ್ಲ ಎಂದು ಅವರು ಹೇಳಿದಾಗ ತಹಶೀಲ್ದಾರರು ಮಾತನಾಡಿ ಕಂದಾಯ ಇಲಾಖೆಗೆ ಅಧಿಕಾರ ಇರುವುದಿಲ್ಲ. ಸಮುದಾಯ ಹಕ್ಕಿನಲ್ಲಿ ಆಗಿದೆಯೋ ನೋಡಲಾಗುವುದು. ತಾ.ಪಂ. ಮತ್ತು ಜಿ.ಪಂ. ಸದಸ್ಯರ ಆಯ್ಕೆ ಆದ ನಂತರ ಸಮಿತಿ ರಚನೆ ಆಗುತ್ತದೆ. ಈಗಾಗಲೆ ಅರ್ಜಿ ಸಲ್ಲಿಸಿದ್ದರೆ ಜಿಲ್ಲಾ ಮಟ್ಟದ ಸಮಿತಿಯಿಂದ ಸ್ಮಶಾನ ಎಂದು ಹಕ್ಕುಪತ್ರ ಬರುತ್ತದೆ ನಂತರ ನಾವು ದಾಖಲಿಸಿ ಕೊಡುತ್ತೇವೆ ಎಂದರು.
2022ರಲ್ಲಿಯೇ ಮುಗಿಯಬೇಕಾದ ಜಲ ಜೀವನ್ ಮಿಷನ್ ಯೋಜನೆ ನಮ್ಮ ಗ್ರಾಮದಲ್ಲಿ ಇನ್ನೂ ಆರಂಭವೇ ಆಗಿಲ್ಲ ಎಂದು ಗ್ರಾಮಸ್ಥ ಶೆಟವಾಜಿ ದುಂಡಶಿ ಕೇಳಿದಾಗ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ರಾಜೇಶ್ವರ ಕದಂ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕೆಲಸದ ಆದೇಶ ಕಳುಹಿಸಿಯಾಗಿದೆ. ಗ್ರಾ.ಪಂ.ನಲ್ಲಿ ಇನ್ನೊಮ್ಮೆ ಸಭೆ ನಡೆಸಿ ಇನ್ನೊಂದು ತಿಂಗಳಲ್ಲಿ ಕೆಲಸ ಆರಂಭಿಸಲಾಗುವುದು ಎಂದರು.
ಕಂದಾಯ ಇಲಾಖೆಯ 11 ಅರ್ಜಿಗಳಲ್ಲಿ 5 ಅರ್ಜಿಗಳು ಸ್ಥಳದಲ್ಲಿಯೇ ವಿಲೇವಾರಿ ಆದವು. ಅರಣ್ಯ ಇಲಾಖೆ 4, ಕೃಷಿ ಇಲಾಖೆ 1, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 1 ಹಾಗೂ ತಾಲೂಕು ಪಂಚಾಯಿತಿ 17 ಸೇರಿ ಒಟ್ಟು 57 ಅರ್ಜಿಗಳು ಸ್ವೀಕೃತಿಯಾದವು.
ತಹಶೀಲ್ದಾರ ಶಂಕರ ಗೌಡಿ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾ.ಪಂ.ಅಧ್ಯಕ್ಷ ಶಶಿಧರ ಪರವಾಪುರ, ಗ್ರೇಡ್-2 ತಹಶೀಲ್ದಾರ ಜಿ.ಬಿ.ಭಟ್, ಪಂಚಾಯತ ಇಂಜಿನಿಯರಿಂಗ್ ಉಪವಿಭಾಗದ ಜೆ.ಇ. ಪ್ರದೀಪ ಭಟ್, ಹಿಂದುಳಿದ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸುಜಾತಾ ಹಂಜಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣ ಕುಳ್ಳೂರ, ಭೂಸಹಾಯಕ ನಿರ್ದೇಶಕ ವಿನೋದ ರಾಠೋಡ, ಗ್ರಾ.ಪಂ. ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿಯರು ನಾಡಗೀತೆ ಹೇಳಿದರು. ಶಿಕ್ಷಕ ಫಕ್ರುದ್ದೀನ್ ಶಿರಹಟ್ಟಿ ಸ್ವಾಗತಿಸಿದರು.