ಬದುಕಿನಲ್ಲಿ ಸೋಲು ಗೆಲುವುಗಳು ಸಹಜ: ಕೆ.ಹೆಚ್.ಮಂಜುನಾಥ್
ಬಳ್ಳಾರಿ 05: ಬದುಕಿನಲ್ಲಿ ಸೋಲು ಗೆಲುವುಗಳು ಸಹಜ, ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಮುನ್ನಡೆಯುವುದೇ ಸಾಧನೆ. ಸಾಧನೆಯ ಮಾರ್ಗವನ್ನು ಸರಳವಾಗಿ ಹಾಕಿಕೊಟ್ಟವರು ಶರಣರು. ನಾಳೆ ಬಪ್ಪುದು ಇಂದು ಬರಲಿ, ಇಂದು ಬಪ್ಪುದು ಈಗಲೇ ಬರಲಿ, ಅದಕಾರು ಅಂಜುವರು, ಅದಕಾರು ಅಳಕುವರು ಎಂದು ಜೀವನವನ್ನು ಸವೆಸಿ, ಸಾರ್ಥಕ ಮಾಡಿಕೊಂಡ ಶರಣರ ಆದರ್ಶ ಇಂದಿನ ವಿದ್ಯಾರ್ಥಿಗಳಿಗೆ ಅಗತ್ಯವಾಗಿದೆ ಎಂದು ಕುರುಗೋಡಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಕೆ.ಹೆಚ್.ಮಂಜುನಾಥ್ ನುಡಿದರು.
ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಕೊಳಗಲ್ಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಏರಿ್ಡಸಿದ್ದ 263ನೇ ಮಹಾಮನೆ ಪ್ರೊ. ಕೆ.ಬಿ.ಹನುಮಂತರಾಯ ದತ್ತಿ ಮತ್ತು ಮನೆ ಮಂದಾರ ಮುದ್ದು ಮಕ್ಕಳ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ, ಇಂದಿನ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಓದುತ್ತಿದ್ದಾರೆಯೇ ವಿನಹ, ಜ್ಞಾನಕ್ಕಾಗಿ ಅಲ್ಲ. ಅಂಕ ಗಳಿಸುವುದೇ ಪ್ರಧಾನ ಉದ್ದೇಶವಾಗಿದ್ದು, ವಿದ್ಯಾರ್ಥಿಗಳ ಮಿದುಳು ವಿಶೇಷ ಸಂಗ್ರಹಗಳ ತೊಟ್ಟಿಯಾಗಿದೆ. ವಿವೇಕ ಜ್ಞಾನ ಇಲ್ಲದಾಗಿದೆ. ಎಲ್ಲರ ಭವಿಷ್ಯವನ್ನು ಹೇಳುವ ಗಿಳಿ ತನ್ನ ಸಾವು ಬೆಕ್ಕಿನಿಂದ ಆಗುತ್ತದೆ ಎಂಬುದನ್ನು ಅರಿಯದು. ಜಗತ್ತನ್ನೇ ಕಾಣುವ ಕಣ್ಣು ತನ್ನಲ್ಲಿ ಬಿದ್ದ ಕಣವನ್ನು ಅರಿಯಲಾಗದು. ಎಲ್ಲರ ಅವಗುಣಗಳನ್ನು ಕಾಣುವ ಮಾನವ ತನ್ನನ್ನು ತಾನು ಅರಿಯಲಾರನೆಂಬ ಬಸವಣ್ಣನವರ ವಚನವನ್ನು ವಿಶ್ಲೇಷಣೆ ಮಾಡುತ್ತಾ, ಪರೀಕ್ಷೆಯ ಹಿನ್ನೆಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳು ಹೇಗೆ ಅಧ್ಯಯನ ಮಾಡಬೇಕು ಮತ್ತು ಹೇಗೆ ಹೆಚ್ಚು ಅಂಕಗಳನ್ನು ಗಳಿಸಬಹುದು ಎಂಬುದನ್ನು ವಿವರಿಸುತ್ತಾ, ಸೋಲಿಗೆ ಹೆದರಬಾರದು, ಸೋಲೇ ಗೆಲುವಿನ ಮೆಟ್ಟಿಲು. ಸೋಲನ್ನು ಒಪ್ಪಿಕೊಂಡವನು ಉಳಿಯುತ್ತಾನೆ. ಒಪ್ಪಿಕೊಳ್ಳದವನು ನಾಶವಾಗುತ್ತಾನೆ ಎಂದರು.
ಅತಿಥಿಗಳಾಗಿ ಊರಿನ ಮುಖಂಡರಾದ ವೀರೇಶಗೌಡರು ವೇದಿಕೆಯಲ್ಲಿದ್ದರು. ಪ್ರೌಢಶಾಲೆಯ ಮುಖ್ಯಗುರುಗಳಾದ ಗಾದಿಲಿಂಗಪ್ಪನವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸಮಯ ಮತ್ತು ಅದರ ಸದುಪಯೋಗದ ಬಗ್ಗೆ ತಿಳಿಸುತ್ತಾ, ಆಸಕ್ತಿಯಿಂದ ಶ್ರದ್ಧಾಪೂರ್ವಕವಾಗಿ ವಿದ್ಯಾಭ್ಯಾಸ ಮಾಡಿ ಹೆಚ್ಚಿನ ಅಂಕಗಳಿಂದ ಉತ್ತೀರ್ಣರಾಗಬೇಕು ಎಂದು ತಿಳಿಸಿದರು. ವಿದ್ಯಾರ್ಥಿನಿಯರಾದ ಅಂಬಿಕಾ ಹಾಗೂ ಸಂಗಡಿಗರು ವಚನ ಪ್ರಾರ್ಥನೆ ಮಾಡಿದರು. ಆಂಗ್ಲಭಾಷಾ ಶಿಕ್ಷಕರಾದ ಎ.ರವಿ ಸ್ವಾಗತ ಕೋರಿ, ಕಾರ್ಯಕ್ರಮ ನಿರ್ವಹಣೆ ಮಾಡಿದರು. ಪರಿಷತ್ ಅಧ್ಯಕ್ಷರಾದ ಕೆ.ಬಿ.ಸಿದ್ದಲಿಂಗಪ್ಪ ದತ್ತಿ ಪರಿಚಯಿಸಿ ಶರಣು ಸಮರೆ್ಣ ಮಾಡಿದರು. ಸಭೆಯಲ್ಲಿ ಶಾಲಾ ಬೋಧಕ ವರ್ಗ ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವೇದಿಕೆಯ ಅತಿಥಿಗಳನ್ನು ಸನ್ಮಾನಿಸುವ ಮೂಲಕ ಕಾರ್ಯಕ್ರಮ ಮಂಗಲವಾಯಿತು