ಹುಕ್ಕೇರಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉಚಿತ ಬಸ್ಸಿನ ಸೇವೆ ನೀಡಲು ನಿರ್ಧಾರ
ಲೋಕದರ್ಶನ ವರದಿ
ಚಿಕ್ಕೋಡಿ: ತಾಲೂಕಿನ ಪಟ್ಟಣಕುಡಿ ಗ್ರಾಮ ವ್ಯಾಪ್ತಿಯಲ್ಲಿ ನಡೆಯುವ ಅನ್ನಪೂರ್ಣೇಶ್ವರಿ ಆಂಗ್ಲ ಮಾಧ್ಯಮ ಶಾಲೆಗೆ ಸಿಬಿಎಸ್ಸಿ ಮಾನ್ಯತೆ ದೊರೆತ್ತಿದ್ದು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಹುಕ್ಕೇರಿ ಕುಟುಂಬ ಬದ್ಧವಿದೆ ಎಂದು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹೇಳಿದರು.
ರವಿವಾರ ತಾಲೂಕಿನ ಪಟ್ಟಣಕುಡಿ ಗ್ರಾಮದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಸಿಬಿಎಸ್ಸಿ ಮಾನ್ಯತಾ ಪ್ರಮಾಣ ಪತ್ರ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಶ್ರೀ ಅನ್ನಪೂರ್ಣೇಶ್ವರಿ ಪೌಂಡೇಶನ ವತಿಯಿಂದ ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ಶಿಕ್ಷಣ ಸಿಗಬೇಕೆನ್ನುವ ಸದುದ್ದೇಶದಿಂದ ಕಳೆದ 2016ರಲ್ಲಿ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭ ಮಾಡಲಾಯಿತು. ಈಗ ಶಾಲೆಯಲ್ಲಿ 254 ಮಕ್ಕಳು ಅಧ್ಯಯನ ಮಾಡುತ್ತಿದ್ದಾರೆ. ನರ್ಸರಿಯಿಂದ ಐದನೆ ತರಗತಿಯವರಿಗೆ ನಡೆಯುವ ಈ ಶಾಲೆಗೆ ಈಗ ಸಿಬಿಎಸ್ಸಿ ಮಾನ್ಯತೆ ಸಿಕ್ಕಿರುವುದು ವಿಶೇಷವಾಗಿದೆ ಎಂದರು.
ಪಟ್ಟಣಕುಡಿ ಹಾಗೂ ಖಡಕಲಾಟ ಜಿಪಂ ವ್ಯಾಪ್ತಿಯಲ್ಲಿ ಬರುವ ಪಟ್ಟಣಕುಡಿ, ಖಡಕಲಾಟ, ನಾಯಿಂಗ್ಲಜ್, ವಾಳಕಿ,ಚಿಕ್ಕಲವಾಳ, ರಾಂಪೂರ ಸೇರಿದಂತೆ ನಿಪ್ಪಾಣಿ ಭಾಗದ ಮಕ್ಕಳು ಸಹ ಈ ಶಾಲೆಗೆ ದಾಖಲಾಗಬೇಕು ಎನ್ನುವ ಹಂಬಲ ನಮ್ಮದು ಇದೆ. ಗ್ರಾಮೀಣ ಭಾಗದ ಮಕ್ಕಳು ಈ ಶಾಲೆಗೆ ಪ್ರವೇಶ ಪಡೆಯಲು ಅರ್ಜಿ ಕರೆಯಲಾಗಿದೆ. ಶಾಲೆಗೆ ಬರುವ ಮಕ್ಕಳಿಗೆ ಐದು ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗಿದೆ. ಬಸ್ ಮೂಲಕ ಬರುವ ಮಕ್ಕಳಿಗೆ ಬಸ್ಸಿನ ಶುಲ್ಕ ತೆಗೆದುಕೊಳ್ಳಲಾಗುವುದಿಲ್ಲ, ಮಕ್ಕಳು ಉಚಿತವಾಗಿ ಶಾಲೆಯ ಬಸ್ ಮೂಲಕ ಶಾಲೆಗೆ ಆಗಮೀಸಿ ಶಿಕ್ಷಣ ಪಡೆಯಬೇಕು ಎಂದರು.
ಚಿಕ್ಕೋಡಿ ಲೋಕಸಭೆ ಸದಸ್ಯರಿದ್ದ ವೇಳೆಯಲ್ಲಿ ಕ್ಷೇತ್ರ ಸವಾಂಗೀಣ ಪ್ರಗತಿಗೆ ಹಗಲಿರುಳು ಶ್ರಮೀಸಲಾಗಿದೆ. ಜಿಲ್ಲೆಗೆ ಸಿಮೀತವಾಗಿರುವ ಕೇಂದ್ರೀಯ ವಿದ್ಯಾಲಯಗಳನ್ನು ಪಟ್ಟಣ ಪ್ರದೇಶಗೆ ತರುವ ಮೂಲಕ ಗ್ರಾಮೀಣ ಮಕ್ಕಳಿಗೆ ಅನುಕೂಲ ಕಲ್ಪಿಸಲಾಗಿದೆ. ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಸಾಕಷ್ಟು ವಸತಿ ಶಾಲೆ ಮಂಜೂರು ಮಾಡಿ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ ಎಂದರು.
ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಬರುವ ಶೈಕ್ಷಣಿಕ ವರ್ಷದಿಂದ ಸಿಬಿಎಸ್ಸಿ ಶಾಲೆ ಆರಂಭಿಸಲಾಗುತ್ತದೆ. ಗ್ರಾಮಿಣ ಪ್ರದೇಶದ ಬಡ ವರ್ಗದ ಮಕ್ಕಳಿಗೆ ಶುಲ್ಕದಲ್ಲಿ ವಿಶೇಷ ಆಧ್ಯತೆ ನೀಡಲು ಅನ್ನಪೂರ್ಣೇಶ್ವರಿ ಪೌಂಡೇಶನ ನಿರ್ಧರಿಸಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಸವಿತಾ ಪರ್ವತಿಪಾಟೀಲ, ಪೌಂಡೇಶನ ಸಂಸ್ಥಾಪಕಿ ಶ್ರೀಮತಿ ನಿಲಾಂಭಿಕಾ ಪ್ರಕಾಶ ಹುಕ್ಕೇರಿ, ಸ್ವಪ್ನಾಲಿ ಗಣೇಶ ಹುಕ್ಕೇರಿ, ಡಾ, ಬಾಬಣ್ಣಾ ಹುಕ್ಕೇರಿ, ಅಂಜಲಿ ಬಾ ಹುಕ್ಕೇರಿ, ತಾಪಂ ಅಧ್ಯಕ್ಷ ಉರ್ಮಿಳಾ ಪಾಟೀಲ, ಉಪಾಧ್ಯಕ್ಷ ಮಹಾದೇವಿ ನಾಯಿಕ, ದುರೀಣ ಸತೀಶ ಪಾಟೀಲ, ರಾಕೇಶ ಚಿಂಚಣಿ ಮುಂತಾದವರು ಇದ್ದರು.