ಬಳ್ಳಾರಿ

ಪೌರಕಾರ್ಮಿಕರ ಸಮೀಕ್ಷೆಗೆ ನಿರ್ಧಾರ: ಎಂ.ಶಿವಣ್ಣ

ಪೌರಕಾರ್ಮಿಕರ ಸಮೀಕ್ಷೆಗೆ ನಿರ್ಧಾರ: ಎಂ.ಶಿವಣ್ಣ

ಬಳ್ಳಾರಿ 24: ರಾಜ್ಯದಲ್ಲಿ ನಿಖರ ಪೌರಕಾರ್ಮಿಕರ ಸಂಖ್ಯೆಯನ್ನು ತಿಳಿದುಕೊಂಡು ಅವರ ಶ್ರೇಯೋಭಿವೃದ್ಧಿಗೆ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಪೌರಕಾರ್ಮಿಕರ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಅವರು ತಿಳಿಸಿದರು. 

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮ್ಯಾನುವೆಲ್ ಸ್ಕಾ-್ಯವೆಂಜರ್‌ಗಳ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013 ರ ಕಾಯ್ದೆ ಹಾಗೂ ನಿಯಮಗಳ ತರಬೇತಿ ಹಾಗೂ ಪ್ರಗತಿ ಪರೀಶೀಲನಾ ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 

ಕೋವಿಡ್ ಸಮಯದಲ್ಲಿ ರಾಜ್ಯದಲ್ಲಿ 32 ಜನ ಪೌರಕಾರ್ಮಿಕರು ಮೃತಪಟ್ಟಿದ್ದು ಅದರಲ್ಲಿ ಒಬ್ಬರಿಗೆ 30 ಲಕ್ಷದಂತೆ 17 ಜನರಿಗೆ ಪರಿಹಾರ ನೀಡಿದ್ದು, ಉಳಿದವರಿಗೂ ಕೂಡ ಆದಷ್ಟು ಬೇಗ ಪರಿಹಾರದ ಹಣ ನೀಡಲಾಗುತ್ತದೆ. ಪೌರ ಕಾರ್ಮಿಕರ ಮಕ್ಕಳಿಗೆ 1ನೇ ತರಗತಿಯಿಂದ ಪದವಿ ಹಂತದವರೆಗೆ ಉಚಿತ ಶಿಕ್ಷಣ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದರು. 

ರಾಜ್ಯದಲ್ಲಿ 5080 ಮ್ಯಾನುವೆಲ್ ಸ್ಕ್ಯಾವೆಂಜರ್‌ಗಳಿದ್ದು,ಕಳೆದ ಒಂದು ವರ್ಷದಲ್ಲಿ ಮ್ಯಾನುವೆಲ್ ಸ್ಕ್ಯಾವೆಂಜರ್‌ಗಿಳಿದು 8 ಜನ ಸಾವನ್ನಪ್ಪಿದ್ದಾರೆ ಎಂದರು. 

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಹೆಚ್‌.ಹನುಮಂತಪ್ಪ ಅವರು ಮಾತನಾಡಿ ಸಮಾಜದ ಅತ್ಯಂತ ಹಿಂದುಳಿದ ಸಮುದಾಯವನ್ನು ಸಮಾಜದ ಮುನ್ನೆಲೆಗೆ ತರುವ ಮೂಲಕ ಸಫಾಯಿ ಕರ್ಮಚಾರಿಗಳ ಸರ್ವತೋಮುಖ ಬೆಳವಣಿಗೆಗೆ ಆಯೋಗ ಮತ್ತು ನಿಗಮದಿಂದ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. 

ನಿಗಮಕ್ಕೆ 80ಕೋಟಿ ಹಣ ಬಿಡುಗಡೆಯಾಗಿದ್ದು,ಇದರಲ್ಲಿ ವಿವಿಧ ಸೌಲಭ್ಯಗಳಡಿ 80 ಕೋಟಿ ರೂ.ಹಣವನ್ನು ಸಫಾಯಿ ಕರ್ಮಚಾರಿಗಳ ಶ್ರೇಯೋಭಿವೃದ್ಧಿಗೆ ವಿನಿಯೋಗಿಸಲಾಗಿದೆ.ಅದರಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 56 ಲಕ್ಷ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗಿದೆ ಎಂದರು. 

ರಾಜ್ಯದಲ್ಲಿ 1.45 ಲಕ್ಷ ಜನ ಪೌರ ಕಾರ್ಮಿಕರಿದ್ದು,ಅವರ ಅವಲಂಬಿತರು ಸೇರಿದಂತೆ ಒಟ್ಟು 25 ರಿಂದ 30 ಲಕ್ಷ ಸಫಾಯಿ ಕರ್ಮಚಾರಿ ಸಮುದಾಯವರು ರಾಜ್ಯದಲ್ಲಿ ವಾಸಿಸುತ್ತಿದ್ದು,ಅವರ ಅವರ ಸಮಗ್ರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಬೇಕಾಗುತ್ತದೆ;ಇದಕ್ಕೆ ಕನಿಷ್ಠ 500 ಕೋಟಿ ರೂ.ಗಳಾದರೂ ಬೇಕಾಗುತ್ತದೆ. ಮುಂದಿನ ಅರ್ಥಿಕವರ್ಷದಲ್ಲಿ ಈ ನಿಗಮಕ್ಕೆ ಅಗತ್ಯ ಅನುದಾನ ನೀಡಬೇಕು ಎಂದು ಅವರು ಮನವಿ ಮಾಡಿದರು. 

ಈ ಸಂದರ್ಭದಲ್ಲಿ ಆಯೋಗದ ಕಾರ್ಯದರ್ಶಿಗಳಾದ ರಮಾ, ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು. 


ಸುದ್ದಿ ಓದಿ