ಸಾರಸ್ವತಯೋಗಿ ಡಾ. ವೈ.ನಾಗೇಶಶಾಸ್ತ್ರಿ: ರುದ್ರಯ್ಯಸ್ವಾಮಿ
ಬಳ್ಳಾರಿ 11: ಭರತಭೂಮಿಯಲ್ಲಿ ಹಲವು ಯೋಗಗಳಲ್ಲಿ ನಿರತರಾಗಿದ್ದ ಯೋಗಿಗಳನ್ನು ಕಾಣಬಹುದು. ಲೋಕದಲ್ಲಿ, ಲೌಕಿಕರಂತೆ ಬಾಳಿ, ಕೃತಿ ಸಂತಾನವೇ ನನ್ನ ಸಂತಾನವೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಯೋಗಿಯೊಬ್ಬ ಏಳಬೆಂಚಿ ಎಂಬ ಕುಗ್ರಾಮದಲ್ಲಿದ್ದ. ದಕ್ಷಿಣ ಭಾರತದಲ್ಲಿಯೇ ಮೊದಲಿಗನಾಗಿ "ಸರ್ವದರ್ಶನ ತೀರ್ಥ" ಪದವಿ ಪಡೆದಿದ್ದ ಡಾ. ವೈ.ನಾಗೇಶಶಾಸ್ತ್ರಿಗಳು ಸಾರಸ್ವತ ಯೋಗದಲ್ಲಿ ತಲ್ಲೀನರಾಗಿದ್ದ, ಸಾರಸ್ವತ ಯೋಗಿ ಎಂದು ಕೊಂಗವಾಡದ ವೀರಭದ್ರ ಶಾಸ್ತ್ರಿಗಳು ನುಡಿದಿದ್ದರೆಂದು ಆಧ್ಯಾತ್ಮಿಕ ಚಿಂತಕರಾದ ಕೆ.ಎಂ.ರುದ್ರಯ್ಯ ಸ್ವಾಮಿಗಳು ಹೇಳಿದರು.
ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಬಾಂಬೆ ಪ್ರೆಸ್ ರಸ್ತೆಯಲ್ಲಿಯ ಮೃತ್ಯುಂಜಯ ಕುಟೀರದಲ್ಲಿ ಹಮ್ಮಿಕೊಂಡಿದ್ದ 260ನೆ ಮಹಾಮನೆ ಲಿಂ. ಡಾ. ವೈ.ನಾಗೇಶ ಶಾಸ್ತ್ರಿಗಳ ದತ್ತಿ ಮತ್ತು ಅಂಗಡಿ ನಾಗಪ್ಪ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತ, ಡಾ. ವೈ.ನಾಗೇಶ ಶಾಸ್ತ್ರಿಗಳು ಶಿವಾನುಭಾವಿಗಳು, ಶಿವಾನುಭವ ತರಗತಿಗಳಿಗೆ ಪಠ್ಯಪುಸ್ತಕ ರಚಿಸಿದವರು. ಶಿವಚಿಂತೆ, ಶಿವಜ್ಞಾನವಿಲ್ಲದ ಮಾನವನ ಬದುಕು ಸಗಣಿಯಲ್ಲಿಯ ಹುಳುವಿನಂತೆ ಹೀನಾಯವಾದುದು ಎಂದು ಪ್ರತಿಪಾದಿಸಿದ ಪಂಡಿತರು, ಜನರ ಮುಂದೆ ನಾವು ಹೇಳಲು ಹೋಗುವುದಿಲ್ಲ, ಕಲಿಯಲು ಎಂದು ಸದಾ ನಂಬಿದ್ದ ಸಮದರ್ಶಿಯೆಂದು ನುಡಿದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ಶಿವಾನುಭವ ಸಮಿತಿ ಸದಸ್ಯರಾದ ಅರಸೂರು ವಿಶ್ವನಾಥರು, ಮೃತ್ಯುಂಜಯ ಕುಟೀರದಲ್ಲಿ ಧಾರವಾಡದ ಮಹಾಂತಪ್ಪಗಳು, ಮೃತ್ಯುಂಜಯ ಸ್ವಾಮಿಗಳ ಸಾನಿಧ್ಯದಲ್ಲಿ ಡಾ. ವೈ. ನಾಗೇಶ ಶಾಸ್ತ್ರಿಗಳು, ಜೋಳದರಾಶಿ ದೊಡ್ಡನಗೌಡರು, ಕೊಂಗವಾಡದ ವೀರಭದ್ರ ಶಾಸ್ತ್ರಿಗಳು ವಿದ್ವತ್ ಪೂರ್ಣವಾದ ಶಿವಾನುಭವ ಚಿಂತನೆಯನ್ನು ಮಾಡುತ್ತಿದ್ದುದನ್ನು ಸ್ಮರಿಸಿದರು.
ಜೋಳದರಾಶಿಯ ನಿವೃತ್ತ ಮುಖ್ಯಗುರುಗಳಾದ ಕೆ.ಪಂಪನಗೌಡರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ನಾಗರತ್ನಮ್ಮ ವಚನ ಪ್ರಾರ್ಥನೆ ಮಾಡಿದರು. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಬಿ.ಸಿದ್ಧಲಿಂಗಪ್ಪ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತ ಕೋರಿ, ಕಾರ್ಯಕ್ರಮ ನಿರ್ವಹಣೆ ಮಾಡಿದರು.