ಗದಗ

ದಸರಾ ಕ್ರೀಡಾಕೂಟ: ಕಬಡ್ಡಿಯಲ್ಲಿ ಹುಲಕೋಟಿ ಕಾಲೇಜಿಗೆ ಪ್ರಥಮ ಸ್ಥಾನ

ದಸರಾ ಕ್ರೀಡಾಕೂಟ: ಕಬಡ್ಡಿಯಲ್ಲಿ ಹುಲಕೋಟಿ ಕಾಲೇಜಿಗೆ ಪ್ರಥಮ ಸ್ಥಾನ

ಲೋಕದರ್ಶನ ವರದಿ 

ಹುಲಕೋಟಿ.23: ಗದಗ ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಗದಗ ತಾಲ್ಲೂಕು ಪಂಚಾಯಿತಿ ಜಂಟಿ ಆಶ್ರಯದಲ್ಲಿ ಕೆ.ಎಚ್‌. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 2026-27ನೇ ಸಾಲಿನ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ಕಬಡ್ಡಿ ಸ್ಪರ್ಧೆಯಲ್ಲಿ ಹುಲಕೋಟಿಯ ಶ್ರೀ ಕೆ.ಎಚ್‌. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರಾದ ಐಶ್ವರ್ಯ ಶಿವಪ್ಪ ಲಮಾಣಿ, ಜ್ಯೋತಿ ಹಿರೇಮನಿ ಹಾಗೂ ಅನಿತಾ ಬೂದಪ್ಪ ಮಂಟೂರ ಅವರು ಪ್ರಥಮ ಸ್ಥಾನ ಗಳಿಸಿದ್ದಾರೆ.  

ಈ ಸಾಧನೆ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ದೈಹಿಕ ಶಿಕ್ಷಣ ಉಪನ್ಯಾಸಕಿ ಡಾ. ಶೋಭಾ ಪಿ. ಅಡಿಕೆ ಮಾತನಾಡಿ, ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಸದೃಢತೆಯ ಜೊತೆಗೆ ಶಿಸ್ತು, ಪರಸ್ಪರ ಸಹಕಾರ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತವೆ ಎಂದರು.  

ಕಾಲೇಜಿನ ಪ್ರಾಂಶುಪಾಲ ಡಾ. ಅಪ್ಪಣ್ಣ ಎನ್‌. ಹಂಜೆ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಕಠಿಣ ಪರಿಶ್ರಮ, ನಿರಂತರ ಅಭ್ಯಾಸ ಹಾಗೂ ಗೆಲ್ಲಬೇಕೆಂಬ ದೃಢ ಸಂಕಲ್ಪದಿಂದ ಯಾವುದೇ ಸಾಧನೆ ಸಾಧ್ಯ ಎಂದರು.  

ವಿದ್ಯಾರ್ಥಿನಿಯರು ತಾಲ್ಲೂಕು ಮಟ್ಟದಲ್ಲಿ ಸಾಧಿಸಿರುವುದು ಕಾಲೇಜಿಗೆ ಹೆಮ್ಮೆಯ ವಿಷಯವಾಗಿದ್ದು, ಮುಂಬರುವ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲೂ ಇದೇ ಉತ್ಸಾಹದಿಂದ ಭಾಗವಹಿಸಿ ಉತ್ತಮ ಸಾಧನೆ ಮಾಡಲಿ ಎಂದು ಹಾರೈಸಿದರು.  ಸಮಾರಂಭದಲ್ಲಿ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದು, ವಿಜೇತ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದರು. 


ಸುದ್ದಿ ಓದಿ