ಮನರಂಜನೆ

ಡಾರ್ಲಿಂಗ್ ಕೃಷ್ಣ "ದಿಲ್ ಪಸಂದ್" ಪೊಲೀಸ್ ಅಧಿಕಾರಿ!

ಡಾರ್ಲಿಂಗ್ ಕೃಷ್ಣ "ದಿಲ್ ಪಸಂದ್" ಪೊಲೀಸ್ ಅಧಿಕಾರಿ!

 ಬೆಂಗಳೂರು, ಸೆ. 28 ನಟ ಡಾರ್ಲಿಂಗ್ ಕೃಷ್ಣ ದಿಲ್ ಪಸಂದ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.  ಶಿವತೇಜಸ್ ನಿರ್ದೇಶನದ ನಿಶ್ವಿಕ ನಾಯ್ಡು ಹಾಗೂ ಮೇಘ ಶೆಟ್ಟಿ ನಾಯಕಿಯರಾಗಿದ್ದಾರೆ.
 
ರಶ್ಮಿ ಫಿಲಂಸ್ ಲಾಂಛನದಲ್ಲಿ ಸುಮಂತ್ ಕ್ರಾಂತಿ ನಿರ್ಮಿಸುತ್ತಿರುವ ನೂತನ ಚಿತ್ರದ ಶೀರ್ಷಿಕೆಯನ್ನು  ಐ ಪಿ ಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದರು.
 
ಈ ವೇಳೆ ಮಾತನಾಡಿದ ಡಾರ್ಲಿಂಗ್ ಕೃಷ್ಣ, ಈ ಕಾರ್ಯಕ್ರಮಕ್ಕೆ ರವಿ ಸರ್ ಬಂದಿರುವುದು ನನಗೆ ಹೆಚ್ಚು ಖುಷಿ‌. ನನಗೆ ಮೊದಲಿನಿಂದಲೂ ಪೊಲೀಸ್ ಅಧಿಕಾರಿಗಳು ಅಂದರೆ ಇಷ್ಟ. ಏಕೆಂದರೆ ನನ್ನ ತಂದೆ ಕೂಡ ಪೊಲೀಸ್ ಅಧಿಕಾರಿಯಾಗಿದ್ದರು ಎಂದು ಮಾತು ಆರಂಭಿಸಿದ ಡಾರ್ಲಿಂಗ್ ಕೃಷ್ಣ, ನನ್ನ ಅಪ್ಪನಿಗೆ ನಾನು ಪೊಲೀಸ್ ಆಗಲಿ ಎಂಬ ಆಸೆಯಿತ್ತು. ನಾನು ನಟನಾದೆ. "ಲವ್ ಮಾಕ್ಟೇಲ್" ಚಿತ್ರದ ಮೂಲಕ ಬರಹಗಾರನೂ ಆದೆ. ನನ್ನ ಈ ಬೆಳವಣಗೆಯಲ್ಲಿ ನನ್ನ ಹೆಂಡತಿ ಮಿಲನ ಪಾತ್ರ ದೊಡ್ಡದು ಎಂದರು.
 
ಚಿತ್ರದ ಬಗ್ಗೆ ಮಾತನಾಡುತ್ತಾ, ನಿರ್ದೇಶಕ ಶಿವತೇಜಸ್ ಕಥೆ ಹೇಳುವಷ್ಟು ಹೊತ್ತು ನನ್ನ ಮುಖದಲ್ಲಿ ನಗುವಿತ್ತು. ಕಾಮಿಡಿ, ಲವ್ ಹೀಗೆ ಎಲ್ಲವೂ ಈ ಚಿತ್ರದಲ್ಲಿದೆ. ಪ್ರೇಕ್ಷಕರಿಗೂ "ದಿಲ್ ಪಸಂದ್" ಹಿಡಿಸುತ್ತದೆ. ನಿಮ್ಮ ಪ್ರೋತ್ಸಾಹ ನಮ್ಮ ತಂಡದ ಮೇಲಿರಲಿ ಎಂದರು.
 ರವಿ ಚನ್ನಣ್ಣನವರ್ ಮಾತನಾಡಿ, ನನ್ನ ಹದಿಮೂರು ವರ್ಷದ ವೃತ್ತಜೀವನದಲ್ಲಿ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಆದರೆ ನಾನು ಭಾಗವಹಿಸಿರುವ ಮೊದಲ ಚಲನಚಿತ್ರ ಸಮಾರಂಭವಿದು. ಅದಕ್ಕೆ ಕಾರಣ ನನ್ನ‌ ಸುಮಂತ್ ಕ್ರಾಂತಿ ಅವರ ಗೆಳೆತನ. ನಾನು ಅಪ್ಟಟ್ಟ ಕನ್ನಡಾಭಿಮಾನಿ.‌ ಕನ್ನಡ ಚಲನಚಿತ್ರಗಳು ನನಗೆ ಪ್ರಾಣ. ಡಾ. ರಾಜ್ ಅಭಿನಯದ ಮಯೂರ ನನ್ನ ಮೇಲೆ ಪ್ರಭಾವ ಬೀರಿದ ಚಿತ್ರ.  ನಾಟಕದಲ್ಲಿ ಅಭಿನಯಿಸಿದ್ದ ಅನುಭವವೂ ಇದೆ.‌‌ ವಿ ಆರ್ ಜೋಕರ್ಸ್ ಎಂಬ ನಾಟಕವನ್ನು ಬರೆದು, ನಿರ್ದೇಶನ ಮಾಡಿ, ಅಭಿನಯಿಸಿದ್ದೆ ಎಂದು ಹೇಳುತ್ತಾ, ಚಿತ್ರಕ್ಕೆ ಒಳಿತು ಹಾರೈಸಿದರು.
 
 "ದಿಲ್ ಪಸಂದ್" ಲಾಕ್ ಡೌನ್ ಸಮಯದಲ್ಲಿ ಹುಟ್ಟಿದ ಕಥೆ.  ಡಾರ್ಲಿಂಗ್ ಕೃಷ್ಣ, ನಿಶ್ವಿಕನಾಯ್ಡು‌, ಮೇಘ ಶೆಟ್ಟಿ, ಸಾಧುಕೋಕಿಲ, ರಂಗಾಯಣ ರಘು, ತಬಲ ನಾಣಿ ಮುಂತಾದ  ಕಲಾವಿದರ ಅಭಿನಯ, ಕರ್ನಾಟಕದ ಹೆಸರಾಂತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯರ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮರ ಸಾಹಸ ನಿರ್ದೇಶನ ನಮ್ಮ ಚಿತ್ರಕ್ಕಿರಲಿದೆ ಎಂದು ತಮ್ಮ ತಂಡದ ಪರಿಚಯ ನೀಡಿದ ನಿರ್ದೇಶಕರು, ಇದು ಆರರಿಂದ ಅರವತ್ತರ ವರೆಗೂ ಎಲ್ಲರಿಗೂ ಹಿಡಿಸುವ ಚಿತ್ರ.‌"ದಿಲ್ ಪಸಂದ್" ನಷ್ಟೇ ನಮ್ಮ ಚಿತ್ರವೂ‌ ಸಿಹಿಯಾಗಿರಲಿದೆ. ಇನ್ನೊಂದು ‌ಅರ್ಥದಲ್ಲಿ ಹೇಳುವುದಾದರೆ ಮನಸ್ಸಿಗೆ ಹತ್ತಿರವಾದವರು ಅಂದುಕೊಳ್ಳಬಹುದು ಎಂದು ಶಿವತೇಜಸ್ ಶೀರ್ಷಿಕೆ ಬಗ್ಗೆ ಹೇಳಿದರು.
 
 "ದಿಲ್ ಪಸಂದ್" ಈ ಹೆಸರೇ ಆಕರ್ಷಣೀಯವಾಗಿದೆ. ನಾನು ಈವರೆಗೂ ನಟಿಸಿರುವ ಚಿತ್ರಗಳಲ್ಲಿ ಒಂದೆಳೆ ಲವ್ ಸ್ಟೋರಿ ಇರುತ್ತಿತ್ತು.
 ಇದೇ ಮೊದಲ ಬಾರಿಗೆ ಪೂರ್ಣಪ್ರಮಾಣದ ಪ್ರೇಮಕಥೆಯುಳ್ಳ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಒಳ್ಳೆಯ ತಂಡದೊಂದಿಗೆ ನಟಿಸಲು ಅವಕಾಶ ನೀಡಿರುವ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಧನ್ಯವಾದ ಎಂದರು ನಾಯಕಿ ನಿಶ್ವಿಕನಾಯ್ಡು‌.
 
 ಮತ್ತೊಬ್ಬ ನಾಯಕಿ ಮೇಘ ಶೆಟ್ಟಿ "ದಿಲ್ ಪಸಂದ್" ನನಗೆ ಇಷ್ಟವಾದ ಸಿಹಿತಿಂಡಿ. ನನ್ನ ಮನೆಗೆ ಬಂದು ನಿರ್ದೇಶಕರು ಕಥೆ ಹೇಳಿದಾಗ ನಾನು ಕಥೆ ಕೇಳಿ ತುಂಬಾ ಉತ್ಸುಕಳಾದೆ. ಕೃಷ್ಣ, ನಿಶ್ವಿಕನಾಯ್ಡು‌ ಅವರೊಂದಿಗೆ ಮೊದಲ ಬಾರಿ ನಟಿಸುತ್ತಿದ್ದೇನೆ. ಕಲಾವಿದರಾದ ನಮಗೆ ಈ ಕಥೆ ಇಷ್ಟು ಹಿಡಿಸಿದೆ ಅಂದರೆ, ಅಭಿಮಾನಿಗಳು ಸಹ ನಮ್ಮ ಚಿತ್ರ ಇಷ್ಟ ಪಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
 

ಸುದ್ದಿ ಓದಿ