ಬಳ್ಳಾರಿ

ಮಹಿಳಾ ದೌರ್ಜನ್ಯ ವಿರುದ್ಧ ಧ್ವನಿ ಎತ್ತುವ ಧೈರ್ಯ ಮಾಡಿ: ನ್ಯಾ. ಪುಷ್ಪಾಂಜಲಿದೇವಿ

ಮಹಿಳಾ ದೌರ್ಜನ್ಯ ವಿರುದ್ಧ ಧ್ವನಿ ಎತ್ತುವ ಧೈರ್ಯ ಮಾಡಿ: ನ್ಯಾ. ಪುಷ್ಪಾಂಜಲಿದೇವಿ

ಬಳ್ಳಾರಿ 10: ಸಮಾಜದಲ್ಲಿ ಪ್ರತಿದಿನ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕಾನೂನಿನ ಅಡಿಯಲ್ಲಿ ಪ್ರಶ್ನಿಸಿ ನ್ಯಾಯಕ್ಕಾಗಿ ಹೋರಾಡುವ ಧೈರ್ಯ ಮಹಿಳೆಯರು ಬೆಳೆಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್‌.ಹೆಚ್‌.ಪುಷ್ಪಾಂಜಲಿ ದೇವಿ ಅವರು ಹೇಳಿದರು. 

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಮಹಿಳಾ ಆಯೋಗ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ಅಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಜಿಲ್ಲಾ ಸರ್ಕಾರಿ ನೌಕರರ ಸಭಾಂಗಣದಲ್ಲಿ ಬುಧವಾರ ಏರಿ​‍್ಡಸಿದ್ದ ಕಾನೂನು ಜಾಗೃತಿ ಮೂಲಕ ಮಹಿಳೆಯರ ಸಬಲೀಕರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಮಹಿಳೆಯರು ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ಇಂದಿನವರೆಗೆ ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರೆಯುತ್ತಿದ್ದು, ಮಹಿಳೆಯು ಸಬಲಳಾಗಿ ಬದುಕುತ್ತಿರುವುದು ಹೆಮ್ಮೆಯ ವಿಚಾರ. ಆದರೆ ಇತ್ತೀಚಿನ ದಿನಮಾನಗಳಲ್ಲಿ ಮಹಿಳೆಯರ ಮೇಲೆ ದಿನನಿತ್ಯವೂ ಕಿರುಕುಳ, ಲೈಂಗಿಕ ದೌರ್ಜನ್ಯಗಳು  ನಡೆಯುತ್ತಿದ್ದು ಮಹಿಳೆಯು ಮರ್ಯಾದೆಗೆ ಹೆದರಿ ದೌರ್ಜನ್ಯದ ವಿರುದ್ಧ ಧ್ವನಿ ಎತ್ತದೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು ಯಾವುದೇ ರೀತಿಯಲ್ಲಿ ಧೃತಿಗೆಡದೆ ತಮಗಾದ ಅನ್ಯಾಯವನ್ನು ಕಾನೂನಿನ ಅಂಗಳಕ್ಕೆ ತರಬೇಕು. ಇದರಿಂದ ಅನ್ಯಾಯಕ್ಕೊಳಗಾದ ಮಹಿಳೆಗೆ ಕಾನೂನಿನ ನೆರವು ನೀಡಲಾಗುವುದು ಎಂದು ಅವರು ತಿಳಿಸಿದರು.  

ಮಹಿಳೆಯರು ದಿನನಿತ್ಯದ ಜೀವನದಲ್ಲಿ ಎಲ್ಲ ರೀತಿಯ ಕಾನೂನುಗಳನ್ನು ತಿಳಿದುಕೊಳ್ಳಬೇಕು. ತಾವು ಕೆಲಸ ಮಾಡುವ ಸ್ಥಳದಲ್ಲಿ ತಮಗಾಗಿ ರೂಪಿಸಲಾಗಿರುವ ಕಾಯ್ದೆ ಕಾನೂನುಗಳ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ತಾವೆಲ್ಲರೂ ಪಡೆದುಕೊಂಡು ಕಾನೂನಿನ ಸದುಪಯೋಗ ಪಡೆದುಕೊಳ್ಳುವಂತೆ ಅವರು ತಿಳಿಸಿದರು.  

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ವಿಜಯಲಕ್ಷೀ ಮೈದೂರು ಹಾಗೂ ವಕೀಲರಾದ ಯರಿ​‍್ರಸ್ವಾಮಿ ಮಾತನಾಡಿ, ಸಬಲೀಕರಣ ಎನ್ನುವುದು ಹೆಣ್ಣು ಮಕ್ಕಳಿಗೆ ಅರ್ಧ ಭಾಗದಷ್ಟು ಬಂದಿದ್ದು, ಸಮಾಜದಲ್ಲಿ ಹೆಣ್ಣಿನ ಮೇಲೆ ಇನ್ನೂ ಕಿರುಕುಳ ಹೆಚ್ಚಾಗುತ್ತಿದೆ. ಐಪಿಸಿ, ಸಿಆರ್‌ಒಪಿಸಿ ಅಡಿ ಮಹಿಳೆಯರ ರಕ್ಷಣೆಗೆ ಸಂಬಂಧಿಸಿದ ಕಾನೂನಿನ ಅಂಶಗಳನ್ನು ಹಾಗೂ ಹಿಂದೂ ವಿವಾಹ ಕಾಯ್ದೆ, ಕೌಟುಂಬಿಕ ದೌರ್ಜನ್ಯ ಮಹಿಳಾ ಸಂರಕ್ಷಣಾ ಕಾಯ್ದೆ, ವರದಕ್ಷಿಣೆ ಕಾಯ್ದೆ ಕುರಿತು ವಿವರಿಸಿದರು. 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಆರ್‌.ನಾಗರಾಜ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಡಿ.ಪವಿತ್ರಾ ಅವರು ಮಾತನಾಡಿದರು. 

ಕಾರ್ಯಕ್ರಮಕ್ಕೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶಿವಾಜಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒಗಳಾದ  ಎಸ್‌.ಉಷಾ, ಪಿ.ನಾಗರಾಜ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.  

ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೈಯದ್ ಚಾಂದ್‌ಬಾಷ, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಪ್ಪ, ಪೊಲೀಸ್ ಇಲಾಖೆಯ ಸಿಬ್ಬಂದಿ, ಮಹಿಳಾ ಪೊಲೀಸರು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ವರ್ಗದವರು ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.  

*-*-* 


ಸುದ್ದಿ ಓದಿ