ಡಂಗುರ
ಒಂದು ಅಡವಿ ಇತ್ತು. ಅಲ್ಲಿ ಇರುವೆಗಳು ಬಿಲ ಕೊರೆದುಕೊಂಡು ಸಂತೋಷದಿಂದ ಇದ್ದವು. ಕಿರಿಯ ಇರುವೆಗಳು ಹಿರಿಯ ಇರುವೆಗಳಿಗೆ ಗೌರವ ಕೊಡುತ್ತಿದ್ದವು. ತಮ್ಮ ಕಷ್ಟ ಸುಖಗಳಲ್ಲಿ ಪರಸ್ಪರ ಕೊಡು ತೆಗೆದುಕೊಳ್ಳುವ ವ್ಯವಹಾರ ಇಟ್ಟುಕೊಂಡು ಸುಖವಾಗಿದ್ದವು.
ಆದರೆ ಅವುಗಳ ಸಮುದಾಯದಲ್ಲೇ ಎರಡು ಕೆಟ್ಟ ಇರುವೆಗಳು ಇದ್ದವು. ತಾಯಿ ಮಗಳುಗಳಾದ ಅವು ಸಂಭಾವಿತ ಇರುವೆಗಳನ್ನು ಕಂಡರೆ ಅವುಗಳಿಗೆ ಆಗಿಬರುತ್ತಿರಲಿಲ್ಲ. ದುಡಿಯುವ ಇರುವೆಗಳಿಗೆ ಸಿಗುವ ಗೌರವ ಪುರಸ್ಕಾರಗಳನ್ನು ಕಂಡು ಕರುಬುತ್ತಿದ್ದವು. ಅವುಗಳ ರೀತಿಯನ್ನು ಕಂಡು ಹೊಟ್ಟೆಯಲ್ಲಿ ಕುತ್ತೆಸರಪಡುತ್ತಿದ್ದವು. ಅಲ್ಲದೇ ಈ ತಾಯಿ ಮಗಳು ಇರುವೆಗಳು ಜಾಣ ಬೇರೆ ಇದ್ದವು. ತಮ್ಮ ಕೆಂಡಕಾರುವ ಗುಣವನ್ನು ಸಮುದಾಯದಲ್ಲಿ ತೋರಿ್ಡಸಿಕೊಳ್ಳದ ಹಾಗೆ ತಮ್ಮ ನಡೆಯನ್ನು ರೂಪಿಸಿಕೊಂಡಿದ್ದವು. ಈ ತಾಯಿ ಮಗಳು ಇರುವೆಗಳು ಎಂದೂ ದವಸ ಧಾನ್ಯಗಳನ್ನು ಸಂಗ್ರಹಿಸಲು ಹೋಗಲಿಲ್ಲ.
ಆ ಬಿಲ ಈ ಬಿಲಗಳಿಗೆ ಹೋಗುವುದು ಮಾತು ಹೇಳುವುದು ಅವರು ಕೊಟ್ಟ ಎಂಜಲು ತಿನ್ನುವ ಕಾಯಕ ರೂಢಿಸಿಕೊಂಡಿದ್ದವು.
ಆ ಇರುವೆಗಳ ಮುಂದೆ ತಮಗೆ ಆಗದವರನ್ನು ಬೈಯುವ ಹಾಗೂ ಪರಸ್ಪರ ಇರುವೆಗಳಲ್ಲಿ ವೈಮನಸ್ಸು ಹಚ್ಚುವ ಕೆಲಸವನ್ನು ಬಹು ಜಾಗುರಕತೆಯಿಂದ ನೆರವೇರಿಸುತ್ತಿದ್ದವು. ಅಲ್ಲದೇ ಅದೇ ಕಾಲಕ್ಕೆ ತಾವು ಸಂಭಾವಿತವು ಒಳ್ಳೆಯವು ಎಂಬುದನ್ನು ರುಜುವಾತುಪಡಿಸಲು ತಮ್ಮ ಸಂಘಟನೆಯ ಕೆಲವು ಇರುವೆಗಳನ್ನು ಬಳಸಿಕೊಳ್ಳುತ್ತಿದ್ದವು.
ಬೇವಿಗೆ ಬೆಲ್ಲ ಬೆರಸಿದರೆ ಅದರ ಕಹಿ ಮಾಯವಾಗುವುದೇ...!!?? ಹಾಗೆಯೇ ತಾಯಿ ಮಗಳ ತಂತ್ರ ಉಳಿದ ಇರುವೆಗಳಿಗೆ ಕೂಡಲೇ ವೇಧ್ಯವಾಯಿತು. ಅವುಗಳು ಈ ಕೆಟ್ಟ ಇರುವೆಗಳ ಕಾರುಬಾರುಗಳನ್ನು ತಂತ್ರಗಳನ್ನು ಬಹಿರಂಗಪಡಿಸಲು ಸಮುದಾಯದ ದೊಡ್ಡ ಇರುವೆಗಳ ಮುಂದೆ ತಿಳಿಸಿದವು.
ದೊಡ್ಡ ಇರುವೆಗಳು ಸಮುದಾಯದಯ ಜಗಳವನ್ನು ಬಗೆಹರಿಸಲು ಬಯಸಿ ಒಂದು ದಿನ ಪಂಚಾಯತಿಯನ್ನು ಕರೆದವು. ಆ ಸಭೆಗೆ ಎಲ್ಲ ಇರುವೆಗಳು ಬಂದವು.
ಹಿರಿಯ ಇರುವೆ: ‘ನೋಡ್ರಿ .., ನಾವೆಲ್ಲ ಒಂದ. ಯಾರೂ ಮೇಲಲ್ಲ. ಯಾರೂ ಕೀಳಲ್ಲ. ಎಲ್ಲಾರೂ ನಮ್ಮ ಅಕ್ಕ ತಂಗ್ಯಾರು ಅಣ್ಣ ತಮ್ಮಾರು ಅಂತ ಹೋಗಬೇಕು. ಅವ್ರ ಛಾಡಾ ಇವ್ರ; ಮುಂದ - ಇವ್ರ ಛಾಡಾ ಅವ್ರ ಮುಂದ ಹೇಳುದು ಮಾಡಬ್ಯಾಡ್ರಿ. ಪರೋಪಕಾರವೇ ಪುಣ್ಯ ಅಂದಾವ ಶ್ಯಾಸ್ತ್ರ. ಎಲ್ಲಾರು ತಿಳಿದಾರ ಅದಿರಿ ಹೆಚ್ಚಿಗಿ ಏನ ಹೇಳುದೈತಿ.’ ಎಂದು ಹೇಳಿ ವೇದಿಕೆಯಿಂದ ನಿರ್ಗಮಿಸಿತು.
ಮತ್ತೊಂದು ಹಿರಿಯ ಇರುವೆ ವೇದಿಕೆ ಏರಿತು.
“ಇನ್ನ ಮಳಿಗಾಲ ಬರು ಹೊತ್ತಾತು. ಯಾರೂ ಸುಮ್ನ ಕುಂದರಬ್ಯಾಡ್ರಿ. ನಿಮ್ನ ನೀವು ದುಡಿಮೆವೊಳಗ ತೊಡಗಿಸಿಕೊಳ್ಳಿರಿ. ದುಡಿಯ್ಯಾವ್ರ ಕಂಡ್ರ ಸಂತೋಷಪಡಬೇಕ ಕುತ್ತೆಸರ ಅಲ್ಲ.” ಎಂದು ಪರೋಕ್ಷವಾಗಿ ತಾಯಿ ಮಗಳು ಇರುವೆಗಳಿಗೆ ಟಾಂಗ ಕೊಟ್ಟಿತು.
“ನಾನು ಏನೂ ಹೆಚ್ಚಿಗಿ ಹೇಳುದಿಲ್ಲ. ಮಾತ ಮನಿ ಕೆಡಸತಾವ” ಎಂದು ಹೇಳಿ ವೇದಿಕೆಯಿಂದ ನಿರ್ಗಮಿಸಿತು.
ಎಲ್ಲ ಇರುವೆಗಳು ಗೋಣು ಹಾಕಿದವು. ಪಂಚಾಯತಿ ಮುಗಿಯುತ್ತಿದ್ದಂತೆ ಎಲ್ಲ ಇರುವೆಗಳು ಬಿಲದತ್ತ ಹರಿದು ಹೋದವು.
ಆದರೆ ಈ ಎರಡೂ ತಾಯಿ ಮಗಳು ಇರುವೆಗಳು
ಅದೇನನ್ನೋ ಯೋಚಿಸುತ್ತಾ ನಿಂತುಕೊಂಡವು. ಕುಹಕ ನಗೆ ನಗುತ್ತಾ ನುಡಿದವು. ಪಾಪ ಅಂತ ಪುಣ್ಯ ಅಂತ ಎಲ್ಲಿ ಐತಿ... ಪಾಪ ಎಲ್ಲಿ ಐತಿ ಪುಣ್ಯ.... ನಾವ ನಡದದ್ದ.... ದಾರಿ..!! ಎನ್ನುತ್ತಾ ಬಿಲದತ್ತ ನಡೆದವು.
ದುಡಿಯುವ ಇರುವೆಗಳು ದುಡಿಮೆಯಲ್ಲಿ ಆನಂದಿಸತೊಡಗಿದವು. ಬಿಲದಿಂದ ಹೊರಗೆ ಹೋಗಿ ದವಸ ಧಾನ್ಯ ಸಕ್ಕರೆ ಬೆಲ್ಲ ಸಂಗ್ರಹಿಸತೊಡಗಿದವು.
ಬೇಸಗೆ ಕಳೆದು ಮಳೆಗಾಲ ಬಂದೇ ಬಿಟ್ಟಿತು. ಮಳೆ ಬಿಟ್ಟೂ ಬಿಡದೇ ಸುರಿಯತೊಡಗಿತು. ಇರುವೆಗಳು ಬಿಲಬಿಟ್ಟು ಎಲ್ಲೂ ಹೊರಗೆ ಹೋಗದಂತೆ ಆಯಿತು. ಎಲ್ಲ ಇರುವೆಗಳು ಸಂಗ್ರಹಿಸಿದ ದವಸ ಧಾನ್ಯಗಳನ್ನು ತಿನ್ನತೊಡಗಿದವು. ಆದರೆ ಈ ಮಗಳು ತಾಯಿ ಇರುವೆಗಳಿಗೆ ಬಿಲದಲ್ಲಿ ಆಹಾರ ಇದ್ದಿರಲಿಲ್ಲ. ಬೇರೆ ಬಿಲಗಳಿಗೆ ಹೋಗಲು ಮಳೆ ಬಿಡುತ್ತಿಲ್ಲ. ತಿನ್ನಲು ಅವುಗಳಿಗೆ ಒಂದು ಕಾಳು ದವಸ ಇರಲಿಲ್ಲ. ಒಂದ ಸಕ್ಕರೆ ಚೂರೂ ಇರಲಿಲ್ಲ. ಅವುಗಳ ಹೊಟ್ಟೆ ಹಸಿದು ‘ಗರಗರ...’ ಎನ್ನತೊಡಗಿತು. ಹಸಿವೆಯಿಂದ ಮುಖ ಬಾಡಿತು.. ಕೈ ಕಾಲುಗಳಲ್ಲಿ ಶಕ್ತಿ ಉಡುಗಿತು. ಒಂದು ಕಾಳಿಗಾಗಿ ಕಣ್ಣು ತೆರೆದುಕೊಂಡೇ ಕುಳಿತವು.
ಹಗಲೆಲ್ಲ ‘ರಮ್ ರಮ್...’ ಎಂದು ಹೊಡೆದ ಮಳೆ ರಾತ್ರಿ ತಣ್ಣಗಾಗಿತ್ತು.
ಹಸಿವೆಯಿಂದ ತತ್ತರಿಸಿದ ಈ ತಾಯಿ ಮಗಳಿಗೆ ನಿದ್ದೆ ಬಾರದೇ ಒದ್ದಾಡುತ್ತಿದ್ದವು. ತಾಯಿ ಇರುವೆ ಬಿಲದಿಂದ ಹೊರಗೆ ಬಂದು ನೋಡಿತು. ನಿಶ್ಯಬ್ದ ರಾತ್ರಿ. ಮಗಳನ್ನು ಕರೆದುಕೊಂಡು ಮಗ್ಗುಲ ಬಿಲಗಳಿಗೆ ಸಾಗಿ ಹೋದವು. ಆ ಬಿಲಗಳಲ್ಲಿಯ ದವಸ ಧಾನ್ಯ ಸಕ್ಕರೆ ಬೆಲ್ಲ ಹೊತ್ತುಕೊಳ್ಳತೊಡಗಿದವು. ಕೂಡಲೇ ಬಿಲದ ದೊಡ್ಡಿರುವೆಗಳಿಗೆ ಎಚ್ಚರವಾಗಿ ಎಲ್ಲ ಇರುವೆಗಳನ್ನು ಕರೆದುಕೊಂಡು ಬಂದವು. ‘ಕಳ್ಳರು... ಕಳ್ಳರು...’ ಎಂದು ಕೂಗತೊಡಗಿದವು. ಕಳವು ಮಾಡಿದ ತಮ್ಮ ಮಾಲನ್ನು ಕಸಿದುಕೊಂಡವು. ಅವುಗಳ ಕೈ ಕಾಲುಗಳನ್ನು ಕಟ್ಟಿ ಬೆಳಗಾಗುವವರೆಗೂ ಬಂಧಿಸಿದವು.
ಈ ಸುದ್ದಿಯನ್ನು ಆ ಇರುವೆಗಳು ಅಡವಿಯ ಎಲ್ಲ ಸಮುದಾಯಗಳಿಗೂ ಡಂಗುರ ಹೊಡೆಸಿ ‘ಕಳ್ಳರಿದ್ದಾರೆ ಎಚ್ಚರಿಕೆ.... ನಿಮ್ಮ ನಿಮ್ಮ ದವಸ ಧಾನ್ಯಗಳ ಮೇಲೆ ನಿಮ್ಮ ಕಣ್ಣಿರಲಿ’ ಎಂದು ಡಂಗುರ ಸಾರಿದವು. ಅಂದಿನಿಂದ ಎಲ್ಲ ಇರುವೆಗಳು ಎಚ್ಚರಿಕೆಯಿಂದ, ಅಂದರೆ ಸುಖದಿಂದ ಜೀವಿಸಿದವು.
- ಯಮುನಾ ಕಂಬಾರ
ರಾಮದುರ್ಗ