ಬಿಜೆಪಿ ಪಕ್ಷದ ಶಾಸಕರಿಂದಲೇ ಪಕ್ಷದ ಸಿದ್ದಾಂತಕ್ಕೆ ಧಕ್ಕೆ: ಲಿಂಗರಾಜಗೌಡ
ಮುಂಡರಗಿ 25: ಈ ಮತಕ್ಷೇತ್ರಕ್ಕೆ ಸಂಬಂಧಿಸದೇ ಇರುವ ಸ್ವ-ಜಾತಿಯ ಪ್ರಮುಖರ ಹಿತದೃಷ್ಟಿಯಿಂದ ಹಾಗೂ ಹಣಬಲದ ವ್ಯಾಮೋಹಕ್ಕೆ ಒಳಗಾಗಿ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಮುಜುಗರ ಮಾಡಬೇಕೆನ್ನುವ ಉದ್ದೇಶದಿಂದ ಬಿಜೆಪಿ ಪಕ್ಷದ ಶಾಸಕರಿಂದಲೇ ಬಿಜೆಪಿ ಪಕ್ಷದ ಸಿದ್ದಾಂತಕ್ಕೆ ಧಕ್ಕೆತರುವಂತ ಕೆಲಸ ನಡೆಯಿತು ಎಂದು ಬಿಜೆಪಿ ಪಕ್ಷದ ಪುರಸಭೆ ಸದಸ್ಯ ಲಿಂಗರಾಜಗೌಡ ಪಾಟೀಲ್ ಆರೋಪಿಸಿದರು.
ಪಟ್ಟಣದಲ್ಲಿ ಮಂಗಳವಾರ ಜರುಗಿದ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ನಡೆದ ಘಟನಾವಳಿಯನ್ನುದ್ದೇಶಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಪಕ್ಷದಿಂದ 6 ಜನ ಸದಸ್ಯರು ಮತ್ತು ಬಿಜೆಪಿ ಶಾಸಕರ ಒಂದು ಮತ ಹಾಗೂ ನಮಗೆ ಬೆಂಬಲ ಸೂಚಿಸಿದ 5 ಜನ ಕಾಂಗ್ರೆಸ್ ಸದಸ್ಯರನ್ನೊಳಗೊಂಡು ಒಟ್ಟು 12 ಮತಗಳು ನಮಗೆ ಬೆಂಬಲವಾಗಿ ಇರುತ್ತವೆ ಎಂದು ಭಾವಿಸಿದ್ದೆವು. ಆದರೆ ಬಿಜೆಪಿ ಶಾಸಕರು ನಮಗೆ ಬೆಂಬಲಿಸದೇ ಮೂಖಜಾಣರಂತೆ ಮತಧಾನಕ್ಕೆ ಗೈರು ಹಾಜರಾದ ಹಿನ್ನೆಲೆ ಹಾಗೂ ಕೋರ ಕಮೀಟಿಯ ಮೋಸದಿಂದ ನಾವು ಇಂದು ಸೋಲಲು ಕಾರಣವಾಯಿತು.
ಈ ವೇಳೆ ಬಿಜೆಪಿ ಸದಸ್ಯೆ ಹಾಗೂ ಪುರಸಭೆ ಅಧ್ಯಕ್ಷರ ಆಕಾಂಕ್ಷಿಯಾಗಿದ್ದ ಜೋತಿ ಹಾನಗಲ್ ಮಾತನಾಡಿ, ಈ ಮೊದಲು ಅಧ್ಯಕ್ಷರಾಗಲು ನಾನು ಯಾವ ವಿಚಾರವನ್ನು ಇಟ್ಟುಕೊಂಡಿದ್ದಿಲ್ಲ. ಆದರೆ ಈ ಹಿಂದೆಯೂ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕವಿತಾ ಉಳ್ಳಾಗಡ್ಡಿಯವರ ಅಧ್ಯಕ್ಷಗಿರಿಯ ಆಡಳಿತಕ್ಕೆ ಬೇಸತ್ತ ಕೆಲವು ಬಿಜೆಪಿ ಸದಸ್ಯರುಗಳೇ ನಮ್ಮ ಮನೆಗೆ ಬಂದು, ನೀವು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿ ನಾವೆಲ್ಲರೂ ನಿಮಗೆ ಬೆಂಬಲ ನೀಡುತ್ತೇವೆ ಎಂದು ಪುರಸಭೆಯ ಬಿಜೆಪಿ ಸದಸ್ಯರು ಭರವಸೆ ಕೊಟ್ಟಿದ್ದರಿಂದ ನಾನು ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನೀಡಿದ್ದೆ. ಆದರೆ ಕೆಲವು ಸದಸ್ಯರು ದುಡ್ಡಿನ ವ್ಯಾಮೋಹಕ್ಕೆ ಮಾರುಹೋಗಿ ಇಂದು ಪಕ್ಷದ ವಿರೋದ ನೀತಿಯನ್ನು ಅನುಸರಿಸಿ ಮೋಸ ಮಾಡಿದ್ದಾರೆ.
ನಮ್ಮ ಶಿರಹಟ್ಟಿ ಶಾಸಕರು ಈ ಚುನಾವಣೆ ಹಿಂದಿನ ದಿವಸ ಕೋರ ಕಮೀಟಿ ಕರೆದರು. ಆದರೆ ಕೋರ ಕಮೀಟಿ ಸದಸ್ಯರು ಬರೆದೇ ಗೈರು ಹಾಜರಾದರು. ಆದರೂ ಸಹ ಶಿರಹಟ್ಟಿ ಶಾಸಕರು ಹೇಳಿದಂತೆ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಜೋತಿ ನಾಗರಾಜ ಹಾನಗಲ್ ಅವರನ್ನು ಆಯ್ಕೆ ಮಾಡುತ್ತೇನೆ. ಚುನಾವಣೆಗಾಗಿ ಸಿದ್ದತೆ ಮಾಡಿಕೊಳ್ಳಿ, ನಾನು ಬಂದು ಮತವನ್ನು ಹಾಕುತ್ತೇನೆ ಎಂದು ಭರವಸೆ ನೀಡಿದ ಶಾಸಕರು ಇಂದು ಚುನಾವಣೆ ಸಂದರ್ಭದಲ್ಲಿ ಪೋನ್ ಸ್ವಿಚ್ ಆಫ್ ಮಾಡಿ ಮತಧಾನಕ್ಕೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಶಾಸಕರೇ ಬಿಜೆಪಿ ಸಿದ್ದಾಂತಕ್ಕೆ ಧಕ್ಕೆ ತರುವಂತೆ ನಡೆದುಕೊಂಡಿರುವುದು ಖಂಡನೀಯ.
ಈ ಕುರಿತು ಶಿರಹಟ್ಟಿ ಶಾಸಕರು, ರೋಣ ಶಾಸಕರು ಹಾಗೂ ಮುಂಡರಗಿ ಸ್ಥಳೀಯ ಬಿಜೆಪಿ ಮುಖಂಡರ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲುರವರಿಗೆ ದೂರು ನೀಡುತ್ತೇವೆ ಎಂದು ಆಗ್ರಹಿಸಿದರು.
ಈ ವೇಳೆ ಪುರಸಭೆ ಉಪಾಧ್ಯಕ್ಷ ಹಾಗೂ ಪುರಸಭೆ ಸದಸ್ಯ ಪ್ರಹ್ಲಾದ ಹೊಸಮನಿ ಮಾತನಾಡಿ, ಮುಂಡರಗಿ ಬಿಜೆಪಿ ಪಕ್ಷದಲ್ಲಿ ಗುಲಾಮಗಿರಿ ರಾಜಕಾರಣಿ ನಡೆಯುತ್ತಿದೆ. ಇದರಿಂದ ಪಕ್ಷ ನಿಷ್ಠೆ ಮರೆಮಾಚಿಹೋಗುತ್ತಿದೆ. ಆದ್ದರಿಂದ ಗುಲಾಮಗಿರಿ ಮಾಡುವವರಿಗೆ ಮನೆ ಹಂಚಿಕೆಯಲ್ಲಿ ಆಸ್ಪದ ಕೊಡುವುದಿಲ್ಲ. ಇದರಿಂದ ಸಂವಿಧಾನ ಅಗೌರವ ಕೊಟ್ಟಂತಾಗುತ್ತದೆ. ಹೀಗಾಗಿ ನಾವು ಸಂವಿದಾನಕ್ಕೆ ಗೌರವ ಕೊಡುತ್ತೇವೆ ಎಂದು ಹೇಳಿದರು.
ಈ ವೇಳೆ ಬಿಜೆಪಿ ಪುರಸಭೆ ಉಪಾಧ್ಯಕ್ಷ ಶಿವಣ್ಣ ಚಿಕ್ಕಣ್ಣವರ, ಪ್ರಕಾಶ ಹಲವಾಗಲಿ, ಪ್ರಹ್ಲಾದ ಹೊಸಮನಿ ಹಾಗೂ ನಿರ್ಮಲಾ ಕೊರ್ಲಹಳ್ಳಿ ಇದ್ದರು.