ನಟ ರಜನಿಕಾಂತ್ ಗೆ ಇಂದು ದಾದಾ ಫಾಲ್ಕೆ ಪ್ರಶಸ್ತಿ ಪ್ರದಾನ
ಚೆನ್ನೈ, ಅ 25 ತಮ್ಮ ಜೀವನದಲ್ಲಿ ಸೋಮವಾರ ಎರಡು ಸಂತಸದ ಗಳಿಗೆಗಳು ಎದುರಾಗಲಿವೆ ಎಂದು ನಟ ರಜನಿಕಾಂತ್ ಅವರು ಹೇಳಿಕೊಂಡಿದ್ದಾರೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಅತ್ಯುತ್ತಮ ಸೇವೆಗಾಗಿ ಕೇಂದ್ರ ಸರ್ಕಾರ ಪ್ರತಿಷ್ಟಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಿದ್ದು, ಈ ಪ್ರಶಸ್ತಿಯನ್ನು ಸೋಮವಾರ ದೆಹಲಿಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಜನಿಕಾಂತ್ ಅವರಿಗೆ ಪ್ರದಾನ ಮಾಡಲಿದ್ದಾರೆ.
ಭಾನುವಾರ ದೆಹಲಿಗೆ ತೆರಳುವ ಮುನ್ನ ರಜನಿಕಾಂತ್ ಫೋಯಿಸ್ ಗಾರ್ಡನ್ನಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ತಮಗೆ ಲಭಿಸಿರುವುದು ಅತ್ಯಂತ ಸಂತೋಷವಾಗಿದೆ. ಈ ಪ್ರಶಸ್ತಿಯನ್ನು ತಾವು ನಿರೀಕ್ಷಿಸಿರಲಿಲ್ಲ. ಈ ಸಂದರ್ಭದಲ್ಲಿ ತಮ್ಮ ಚಿತ್ರರಂಗದ ಗುರು ದಿ. ಕೆ.ಬಾಲಚಂದರ್ ಅವರ ನೆನಪು ಕಾಡುತ್ತಿದೆ. ಅವರು ಈಗ ಇಲ್ಲದಿರುವುದು ತಮಗೆ ತೀವ್ರ ನೋವುಂಟುಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಸೋಮವಾರ ಎರಡು ಸಂತಸದ ಘಟನೆಗಳು ಘಟಿಸಲಿವೆ ಒಂದು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸುವುದು. ಮತ್ತೊಂದು ಪುತ್ರಿ ಸೌಂದರ್ಯ ರಜನಿಕಾಂತ್ 'ವಿಶಾಖನ್ ಹಾಟ್' ಎಂಬ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಆರಂಭಿಸಲಿರುವುದು ಎಂದು ತಿಳಿಸಿದ್ದಾರೆ.