ಅಪ್ಪನೆಂಬ ಮನೆಯ ಚಪ್ಪರ
-ದೀಪಿಕಾ ಚಾಟೆ, ಬೆಳಗಾವಿ
ಅಪ್ಪ. ಎಂದರೆ ಆಕಾಶ.....ಮನೆಗೆ ಚಪ್ಪರ ಇದ್ದಂತೆ. ತಾಯಿ ಎಷ್ಟೇ ಮಮತೆ, ವಾತ್ಸಲ್ಯ ತೋರಿದರೂ ಕೂಡ ಅಪ್ಪನ ಪ್ರೀತಿ ಮಗುವಿಗೆ ವಿಶೇಷವಾದದ್ದು. ತಾಯಿ ಮನೆಯಲ್ಲಿ ಮಗುವನ್ನು ಎತ್ತಿ ಆಡಿಸಿ, ಅದಕ್ಕಿಷ್ಟದ ಅಡುಗೆ ಮಾಡಿ ಉಣಿಸಬಹುದು.ಅದರೆ ತಂದೆಯ ಪಾತ್ರ ಮಗುವಿನ ಬೆಳವಣಿಗೆಯಲ್ಲಿ ಮಹತ್ತರವಾದದ್ದು. ತಂದೆ ಹೊರಗೆ ದುಡಿಯುತ್ತಿರುವುದರಿಂದ ಹೊರಗೆ ಆತ ಹೋರಾಟ ಮಾಡಬೆಕಾಗುತ್ತದೆ. ಆ ಹೋರಾಟದಲ್ಲಿ ಒಮ್ಮೊಮ್ಮೆಸೋಲೂ ಉಂಟಾಗಬಹುದು. ಅದನ್ನೆಲ್ಲ ಅವಡುಗಚ್ಚಿ ಹೆಂಡತಿ ಮಗುವಿಗೆ ಗೊತ್ತಾಗದಂತೆ ವತರ್ಿಸುತ್ತಿರಬಹುದು. ಹೇಳಿಕೊಳ್ಳಲಿಕ್ಕೆ ಆಗದಂಥ ಪ್ರಸಂಗವಿರಬಹುದು. ಅದನ್ನೆಲ್ಲ ಶ್ರೀಕಂಠನಂತೆ ಒಳಗೇ ನುಂಗಿ ಮತ್ತೆ ತನ್ನ. ಕೆಲಸದಲ್ಲಿ ಮಗ್ನನಾಗಿದ್ದಿರಬಹುದು.. ನಾವು ತಾಯಿಗೆ ತ್ಯಾಗ. ಮೂತರ್ಿ ಎಂದು ಹೇಳುತ್ತೇವೆ. ಆದರೆ ತಂದೆಯೂ ಕೂಡ ಇದಕ್ಕೆ ಹೊರತಲ್ಲ. ಹರಿದ ಚಪ್ಪಲಿಗೆ ಆತ ಮಹತ್ವ ಕೊಡದೇ ಮನೆಯಲ್ಲಿದ್ದ ಪಿನ್ನನ್ನು ಪಡೆದು ಹಚ್ಚಿ ಹೊರನಡೆಯಬಹುದು. ಅಂಗಿಯ ಕಿತ್ತೋದ ಬಟನ್ನನ್ನು ಮತ್ತೆ ಹಚ್ಚಿ ಹೊರಗೆ ಹೋಗಬಹುದು.ಆದರೆ ಅದಕ್ಕಾಗಿ ಹೊಸ ಚಪ್ಪಲಿಯಾಗಲೀ, ಹೊಸ ಶಟ್ನ್ರ್ನನ್ನಾಗಲೀ ತೆಗೆದುಕೊಳ್ಳಬೇಕೆಂದೇನೂ ಯೋಚಿಸುವುದಿಲ್ಲ. ಯಾಕೆಂದರೆ ಮಗುವಿನ ಫೀಸಿಗೆ ದುಡ್ಡು ಕಡಿಮೆ ಬೀಳಬಹುದು, ಮನೆ ಖಚರ್ಿಗೆ ತೊಂದರೆ ಆಗಬಹುದು ಎಂದೆಲ್ಲ ಯೋಚಿಸಿ ತನ್ನ ಖರ್ಚನ್ನು ಕಡಿಮೆ ಮಾಡಿಕೊಂಡು ಮಗು, ಮನೆ, ಹೆಂಡತಿ ಅಂತ ಪೊಲಿಮೆ ಮಾಡುತ್ಥಿರುತ್ತಾನೆ ಅಪ್ಪ.! ಈದೇನೂ ಕಡಿಮೆ ತ್ಯಾಗದ್ದಲ್ಲ ಅಂತ ನನ್ನ ಅಭಿಪ್ರಾಯ.
ಅಪ್ಪ ಎಂದರೆ ಮಾರ್ಗದರ್ಶನ. ತನ್ನ ಅಷ್ಟೂ ವರ್ಷದ ಜೀವನದ ಅನುಭವದಲ್ಲಿ ಅದ್ದಿ ತೆಗೆದಂತಿರುವ ಅಪ್ಪ ಮಗುವಿಗೆ ಒಳ್ಳೆಯ ಮಾರ್ಗದರ್ಶಕನಾಗಿರುತ್ತಾನೆ.
ಅದರಲ್ಲೂ ಹೆಣ್ಣುಮಕ್ಕಳಿಗೆ ತಂದೆ ಅಂದರೆ ಅದೇನೋ ಭಯಂಕರ ಪ್ರೀತಿ, ವಾತ್ಸಲ್ಯ, ಮಮಕಾರ...ತನ್ನ ತಂದೇ ಆಂದರೆ ಮಹಾವೀರ, ಶೂರ, ಪರಾಕ್ರಮಿ ಎಂದೆಲ್ಲ ತಿಳಿದಿರುತ್ತಾಳೆ. ಪ್ರತಿ ಮಗುವಿಗೂ ತನ್ನ ತಂದೇ ಎಂದರೇ ವಿಸ್ಮಯ, ಸೋಜೀಗ. ಮಗುವಿದ್ದಾಗ ಯಾವುದೇ ಮಗುವನ್ನು ಕೇಳಿ ತನ್ನ ತಂದೆಯಷ್ಟು ವೀರ ಶೂರ ಜಗತ್ತಿನಲ್ಲೇ ಯಾರೂ ಇಲ್ಲ ಎಂದೇ ಹೇಳುತ್ತಿರುತ್ತದೆ. ಸ್ವಲ್ಪ ದೊಡ್ಡದಾದಾಗ ನೀನು ಏನಾಗಬಯಸುವೆ ಎಂದು ಕೇಳಿದರೆ ಅಪ್ಪನ ಹಾಗೆ ಆಗುತ್ತೇನೆ ಎಂದು ಥಟ್ಟನೆ ಹೇಳುತ್ತಿರುತ್ತದೆ.ಕಾಲೇಜು ದಾಟಿದ ಮೇಲೆ ಮಾತ್ರ ಅಪ್ಪನ ಒಂದೊಂದೇ ತಪ್ಪುಗಳು ಕಾಣಿಸಲಾರಂಭಿಸುತ್ತವೆ.ಅಪ್ಪನಿಗೆ ಏನೂ ತಿಳಿಯುವುದಿಲ್ಲ ಎಂಬ ಸಣ್ಣಗಿನ ಗೊಣಗಾಟಗಳು ಹೊರ ಬರಲಾರಂಭಿಸುತ್ತವೆ.ಇದು ಯಾಕೆ ಹೀಗೆ...? ಗೊತ್ತಿಲ್ಲ.....
ನಮ್ಮ ತಂದೆ ತುಂಬ ಪ್ರಾಮಾಣಿಕ, ದಕ್ಷರಾಗಿದ್ದರು. ಪೋಲಿಸ್ ಪ್ರಾಸಿಕ್ಯುಟರ್ರಾಗಿದ್ದ ಅವರು ದುಡ್ಡು ಮಾಡಬೆೇಕೆಂದರೆ ಬೇಕಾದಷ್ಟು ಮಾಡಬಹುದಾಗಿತ್ತು. ಆದರೆ ಗಾಂಧೀವಾದಿಯಾಗಿಧ್ದ ಅವರು ಎಂದಿಗೂ ಅನ್ಯಾಯದ ದುಡ್ಡನ್ನು ಕಣ್ಣೆತ್ತಿಯೂನೋಡಲಿಲ್ಲ.ತಮಗೆ ಸಕರ್ಾರ ಪಗಾರ ಕೊಡುವುದು ಕೆಲಸ ಮಾಡಲಿಕ್ಕಾಗಿ, ಮೇಲಿನ ದೂಡ್ಡನ್ನು ತೆಗೆದುಕೊಂಡು ಯಾವ ಪಾಪದ ಕೂಪಕ್ಕೆ ಬೀಳಲಿ ಎಂದೇ ಹೇಳುತ್ತಿದ್ದರು. ತಮ್ಮ ಕೈಲಾದ ಸಹಾಯವನ್ನು ಮಾಡಿಕೊಡುತ್ತಿದ್ದರು. ಅವರು ಭಗವದ್ಗೀತೆಯ ತಿರುಳನ್ಙು ಅರಿದು ಕುಡಿದಂತೆ ಯಾರಿಂದಲೂ ಯಾವಾಗೂ ಪ್ರತಿ ಫಲಾಪೇಕ್ಷೆಯನ್ನು ಬಯಸದೇ ಕೆಲಸ ಮಾಡಿ ಕೊಡುತ್ತಿದ್ದರು. ಅವರು ರಿಟೈರ್ ಆದ ಮೇಲೂ ಮೇಲಿನ ಆಫೀಸರ್ಗಳೆಲ್ಲ ಅವರನ್ನು ಹುಡುಕಿಕೊಂಡು ಬಂದು ಭೆಟ್ಟಿಯಾಗುತ್ತಿಧ್ದರು.
ಬೆಳಗಾವಿಯ ನೆಲದಲ್ಲಿ ಅವರು ಸುಮಾರು ಹದಿನೈದು ವರ್ಷಗಳವರೆಗೂ ನಮ್ಮ ತಂದೆ ಕೆಲಸ ಮಾಡಿದ್ದರು. ಎಷ್ಟು ಸಲ ಬೇರೆ ಕಡೆಗೆ ಬದಲೀ ಯಾದರೂ ಕೂಡ ಅವರನ್ನು ಮತ್ತೆ ಇಲ್ಲಿಯೇ ಬದಲಿ ಮಾಡಿಕೊಂಡು ಬರುತ್ತಿದ್ದರು ಆಗಿನ ಎಸ್.ಪಿ.ಯವರು.ಕೊನೆಗೆ ಬಿ.ಡಿ.ಜತ್ತಿಯವರು ಇಲೆಕ್ಷನ್ನಿಗೆ ನಿಂತಾಗ ನಮ್ಮ ತಂದೆಯ ಹತ್ತಿರ ಬಂದರು.ಇಬ್ಬರೂ ಅಕ್ಕಪಕ್ಕ ಊರಿನವರಷ್ಟೇ ಅಲ್ಲ ಕೂಡಿಯೇ ಎಲ್.ಎಲ್.ಬಿ. ಮಾಡಿದ್ದೂ ಅಲ್ಲದೇ ಏಕವಚನದಲ್ಲಿ ಮಾತನಾಡುವಷ್ಟು ಕ್ಲೋಜ್ ಆಗಿದ್ದರು. ಹಿರೇ ಪಡಸಲಗಿಯ ಸುತ್ತಲಿನ ಮೂವತ್ತು ಹಳ್ಳಿಯ ಜನರು ನಮ್ಮ ತಂದೆ ಹೇಳಿದ್ದ ಮಾತನ್ನು ಕೇಳುತ್ತಿದ್ದರು. ಹೀಗಾಗಿ ಹಳ್ಳಿ ಜನರ ಹೋಲ್ಡ್ ಇದ್ದಕಾರಣ ಜತ್ತಿಯವರು ನಮ್ಮ ತಂದೆಗೆ ಸಹಾಯ ಮಾಡುವಂತೆ ಕೇಳಿಕೊಂಡರು. ಆಗ ನಮ್ಮ ತಂದೆ, "ನನ್ನನ್ನು ನಮ್ಮ ಊರಿನ ಸಮೀಪ ಜಮಖಂಡಿಗೆ ಬದಲೀ ಮಾಡಿಸು ಅಲ್ಲಿ ನಮ್ಮ ಹೊಲಗಳಿವೆ, ನಮ್ಮ ಜನ, ಬಂಧುಗಳಿದ್ದಾರೆ,, ಅಂದರೆ ಸಹಾಯ ಮಾಡುತ್ತೇನೆ ಎಂದರಂತೆ. ಜತ್ತಿಯವರು ಮಾತು ಕೊಟ್ಟರಂತೆ. ಅವರು ಇಲೆಕ್ಷನ್ನಿನಲ್ಲಿ ಆರಿಸಿ ಬಂದು ಗೃಹಮಂತ್ರಿಯಾಗಿ ಆಯ್ಕೆಯಾದ ಮೇಲೆ ಮೊದಲುಮಾಡಿದ ಕೆಲಸವೇ ನಮ್ಮ ತಂದೆಯವರನ್ನು ಜಮಖಂಡಿಗೆ ವಗರ್ಾಯಿಸಿದ್ದು.ಆಗ ಬೆಳಗಾವಿಯ ಮರಾಠಾ ಚೌಕ ಭಾಷಣಕ್ಕೆ ಬಹಳೇ ಫೇಮಸ್ಸು. ಯಾವುದೇ ಕನ್ನಡಿಗನೂ ಅಲ್ಲಿ ನಿಂತು ಮಾತನಾಡಲು ಮರಾಠಿಗರು ಕೊಡುತ್ತಿರಲಿಲ್ಲ. ಆದರೆ ನಮ್ಮ ತಂದೆಯ ಮಿತ್ರರಾದ ಬಾಬುರಾವ್ ಠಾಕೂರ್ ಅವರು ನಮ್ಮ ತಂದೆಯ ಬೀಳ್ಕೊಡುಗೆಯ ಭಾಷಣವನ್ನು ಅಲ್ಲಿಯೇ ಏರ್ಪಡಿಸಿದ್ದರಂತೆ. ಇಂಥ ಗಡಿ ಪ್ರದೇಶದಲ್ಲಿ ಕನ್ನಡಿಗರಾಗಿಯೂ ಅನೇಕ ಮರಾಠಿಗರ ಮನಸ್ಸನ್ನು ಗೆದ್ದುಕೊಂಡಿದ್ದರು ಬದಲೀಯಾಗಿ ಹೋಗುವಾಗ ತರುಣ ಭಾರತದ ತುಂಬ ನಮ್ಮ ತಂದೆಯವರ. ಫೋಟೋ ಹಾಕಿ ಎಂಥ ಪ್ರಾಮಾಣಿಕ, ನಿಸ್ಪೃಹ ಅಧಿಕಾರಿಯಾಗಿದ್ದರು ಎಂಬ ಬಗ್ಗೆ ಬಹಳಷ್ಟು ಬರೆದಿದ್ದರಂತೆ.. ಬಾಹುರಾವ್ ಕಾಕತ್ಕರರಂತೂ ನಮ್ಮ ತಂದೆಯ ವಿಶೇಷ ಅಭಿಮಾನಿಯಾಗಿದ್ದರು... ನಮ್ಮ ತಂದೆ ತೀರಿಕೊಂಡಾಗ ಮನೇಗೆ ಬಂದಿದ್ದರು..ಅವರು ಬಿಕ್ಕಿ ಬಿಕ್ಕಿ ಅಳುತ್ತಿದ್ದು ಮಾತನಾಡಲೂ ಆಗದಂಥ ಪರಿಸ್ಥಿತಿಯಾಗಿತ್ತು....ಹಾಗೆ ಅಭಿಮಾನಿ ಬಳಗ ಬೆಳೆಸಿಕೊಳ್ಳಲು ಅವರು ಮಾಡಿದ್ದಾದರೂ ಏನಿರಬಹುದು?
ಒಂದು ಸಲ ಒಬ್ಬ ಪಕ್ಷಕಾರನು ಒಂದು ಚೀಲದ ತುಂಬಾಬಟಾಟೆ ಹಾಗೂ ಇನ್ನೊಂದು ಚೀಲದ ತುಂಬ ಬಾಸಮತಿ ಅಕ್ಕಿಯ ಮೂಟೆಯನ್ನು ಹೊತ್ತುತಂದಿದ್ದನಂತೆ.ಆಗ ನಮ್ಮ ತಂದೆಯ ವರು ಮುಂಬೈಗೆ ಹೋಗಿದ್ದರು.ನಮ್ಮ ತಾಯಿ ಪಕ್ಷಗಾರನಿಗೆ ಈ ರೀತಿಯ ಯಾವುದೇ ವಸ್ತುವನ್ನು ಅವರು ತೆಗೆದುಕೊಳ್ಳುವ ದಿಲ್ಲ, ಇಲ್ಲಿ ಇಟ್ಟು ಹೋಗಬೇಡಿರೆಂದು ಎಷ್ಟು ಪರಿಪರಿಯಾಗಿ ಹೇಳಿದರೂ ಕೇಳದೇ ಆತ ಆ ಚಿಲಗಳನ್ನು ಆಫೀಸಿನಲ್ಲಿ ಇಟ್ಟು ಹೋದನಂತೆ. ಮರುದಿನ ನಮ್ಮ ತಂದೆ ಊರಿನಿಂದ ಬಂದ ಮೇಲೆ ಆ ಮೂಟೆಗಳನ್ನು ನೋಡಿ ಏನಿದು? ಎಂದು ನಮ್ಮ ತಾಯಿ ಗೆ ಕೇಳಿದಾಗ ಆಕೆ ನಡೆದ ವಿಷಯವನ್ನೆಲ್ಲ ಹೇಳಿದರಂತೆ.ಕೆಂಡಾಮಂಡಲರಾದ ಅವರು ಆತ ಕೋಟರ್ಿಗೆ ಹೋಗುವ ಸಮಯ ಕ್ಕೆ ಬಂದಾಗ ನಿನ್ನ ಚೀಲಗಳನ್ನು ತೊಗೊಂಡು ಹೋಗುತ್ತೀಯೋ ಇಲ್ಲವೋ ? ಇರಲಿಕ್ಕರ ನಿನ್ನ ಕೆಲಸಾನ ಮಾಡಿಕೊಡುದಿಲ್ಲ, ನಮಗೆ ಸಕರ್ಾರ ಪಗಾರ ಕೊಡೂದು ನಿಮ್ಮೆಲ್ಲರ ಕೆಲಸಾ ಮಾಡಿ ಕೊಡಲಿಕ್ಕೆ ...ಇಂಥದ್ದೆಲ್ಲ ತಂದರ ನಿನ್ನ ಕೆಲಸಾನ ಮಾಡಿ ಕೊಡೂದಿಲ್ಲ. ನಿನ್ನ ಕಡೆ ಅನ್ಯಾಯ ಇರದಿದ್ರ ನೀ ಯಾಕ ಹೆದತರ್ಿ?" ಎಂದು ತಿಳಿ ಹೇಳಿ ಅದನ್ನೆಲ್ಲ ಅವನೊಂದಿಗೆ ಕಳುಹಿಸಿ ಕೊಟ್ಟರಂತೆ! ನಂತರ ಆತನ ಕೆಲಸ ಆಯಿತು ಎಂದು ಬೇರೆ ಹೇಳಬೇಕಿಲ್ಲ ಅಲ್ಲವೇ? ಇದನ್ನು ನಮ್ಮ ತಾಯಿ ಮೇಲಿಂದ ಮೇಲೆ ಹೇಳುತ್ತಿದ್ದಳು.
ಆತ್ಮೀಯ ಗೆಳೆಯರಾದ ಅರವಿಂದ ಜೋಶಿಯವರ ಮನೆಯ ಮುಂದೆ ದೀಪಾವಳಿಗೆ ಕನರ್ಾಟಕದ ನಕಾಶೆಯ ಆಕಾಶ ಬುಟ್ಟಿಯನ್ನು ರಾಘವೇಂದ್ರ ಜೋಶಿಯವರೇ ತಯಾರಿಸಿ ಹಾಕಿದ್ದರಂತೆ .ಒಬ್ಬ ಎಂಟನೇಯ ಇಯತ್ತೆಯ ಬಾಲಕ ಆ ಆಕಾಶ ಬುಟ್ಟಿಗೇ ಬೆಂಕಿ ಹಚ್ಚಿ ನಂತರ ದೊಡ್ಡ ರಾದ್ಧಾಂತವೇ ನಡೆದು ಗೋಲಿಬಾರ್ ಆಗುವಷ್ಟು ಮುಂದುವರೆದಿತ್ತು.ಆಗ ಪ್ರಾಸಿಕ್ಯುಟರ್ ಆಗಿದ್ದ ನಮ್ಮ ತಂದೆ ಹಾಗು ಮುತ್ಸದ್ದಿ ಎಂಬ ಫೋಜದಾರ್ ಪ್ರಕರಣವನ್ನು ಬಗೆಹರಿಸಿ ದರಂತೆ .ಮಿಸಾಳೆ ಎಂಬ ಬಾಲಕನಿಗೆ ಕಠೊರ ಶಿಕ್ಷೆ ವಿಧಿಸುವುದಾಗಿ ಹೇಳಿದಾಗ ಆತ ಹೆದರಿಕೊಂಡು ಇನ್ನೊಮ್ಮೆ ಯಾವತ್ತಿಗೂ ಈ ರೀತಿ ದಂಗೆ ಮಾಡುವುದಿಲ್ಲ ಎಂಉ ಮುಚ್ಚಳಿಕೆ ಬರೆದುಕೊಡುವಂತೆ ಮಾಡಿದರಂತೆ.ಕನ್ನಡ ಕ್ಕಾಗಿ ಸಾಕಷ್ಟು ಕೆಲಸ ಮಾಡಿದವರು...
ರಿಟೈರಾದ ಮೇಲೆ ಜಮಖಂಡಿಯಲ್ಲಿಯೇ ಇರುತ್ತಿದ್ದ ರೂ ಅವರ ಹುಟ್ಟಿದ ಊರಿನ ಹಿರೇ ಪಡಸಲಗಿಯ ಮೇಲಿನ ಅಭಿಮಾನ ಅವರನ್ನೆಂದಿಗೂ ಬಿಡುತ್ತಿರಲಿಲ್ಲ.ಆಗಿನ ಕಾಲದಲ್ಲಿ ತಮ್ಮ ಪ್ರೊವಿಡೆಂಟ್ ಫಂಡಿನಿಂದ ಬಂದ ದುಡ್ಡಿನಿಂದ ಅ ಊರಿನಲ್ಲಿ ಧಾನ್ಯಗಳ ಬ್ಯಾಂಕನ್ನು ತೆಗೆದಿದ್ದರು. ಆಗ ಊರಿನಲ್ಲಿ ಮೇಲಿಂದ ಮೇಲೆ ಕ್ಷಾಮ ತಲೆದೋರುತ್ತಿರುವುದರಿಂದ ಜನರೆಲ್ಲ ಹಸಿವಿನಿಂದ ಸಾಯುತ್ತಿದ್ದರು.ಹಾಗೆ ಆಗಬಾರದೆಂದು ಧಾನ್ಯದ ರಾಶಿ ಆದ ಮೇಲೆ ಅವರವರ ಶಕ್ತ್ಯಾನುಸಾರ ಧಾನ್ಯಗಳನ್ನು ಪಡೆದು ಹಗೆದಲ್ಲಿ ಹಾಕಿರುತ್ತಿದ್ದರು.ಅದನ್ನೆಲ್ಲ ನೋಂದಾಯಿಸಲು ಒಬ್ಬನನ್ನು ನೇಮಿಸಿದ್ದರು.ಯಾರಿಗೆ ಮನೆಯಲ್ಲಿ ಏನೇ ತೊಂದರೆ ಬಂದರೆ , ಕ್ಷಾಮ ತಲೆದೋರಿದರೆ , ಅಡಿ ಅಡಚಣೆ ಗೆ, ಮದುವೆ ಮುಂಜಿವೆಗೆ ಅವರುಗಳು ಧಾನ್ಯಗಳನ್ನು ತೆಗೆದುಕೊಂಡು ಹೋಗಬಹುದಾಗಿತ್ತು.ಹೀಗಾಗಿ ಊರಿನಲ್ಲಿ ಒಂಥರ ಸಮೃದ್ಧಿ ಏರ್ಪಟ್ಟಿತ್ತು.ಆ ಧಾನ್ಯಗಳ ಬ್ಯಾಂಕಿನ ಉದ್ಘಾಟನೆಗೆ ಸರೋಜಿನಿ ಮಹಿಷಿ ಬಂದಿದ್ದರು.ಅವರು ನಮ್ಮ ತಂದೆಯ ಈ ಸಾದನೆಯನ್ನು ಇನ್ನೂ ಮರೆತಿಲ್ಲ.ಕೆಲವು ವರ್ಷಗಳ ಹಿಂದೆ ನಮ್ಮ ಮನೆಗೆ ಬಂದಾಗ ನಮ್ಮ ತಂದೆ ಯನ್ನು ಎಂಥ ಮುಂದಾಲೋಚನೆಯ, ಪ್ರಾಮಾಣಿಕ ವ್ಯಕ್ತಿಯಾಗಿದ್ದರು ಎಂದು ಮಹಿಷಿಯವರು ಶ್ಲಾಘಿಸುತ್ತಿದ್ದರು.
ನಮ್ಮ ತಂದೆ ಜೀವಂತ ಇರುವವರೆಗೂ ಒಬ್ಬೇ ಒಬ್ಬನು ಇಡೀ ಹಿರೇಪಡಸಲಗಿಯಲ್ಲಿ ಸಾರಾಯಿಯನ್ನು ಕುಡಿಯುತ್ತಿರಲಿಲ್ಲ.ಯಾರಿಗೂ ಸಾರಾಯಿ ಅಂಗಡಿ ತೆಗೆಯುವ ಧೈರ್ಯವೂ ಇರಲಿಲ್ಲ.ಯಾಕೆಂದರೆ ಯಾರಾದರೂ ಸಾರಾಯಿ ಅಂಗಡಿ ತೆಗೆದಿದ್ದಾರೆ ಎಂದರೆ ಅಥವಾ ಕುಡಿದು ಬಂದು ಗದ್ದಲ ಮಾಡುತ್ತಿ ದ್ದಾರೆ ಎಂದು ತಿಳಿದು ಬಂದರೆ ಅವರು ಅವತ್ತೇ ಊರಿನಲ್ಲಿ ಡಂಗುರ ಹೊಡೆಯಿಸಿ ಪಂಚಾಯತಿ ಕಟ್ಟೆಯಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು. ಕುಡಿದವನು ಬಂದು "ತಪ್ಪಾತ್ರೀ ಸಾಹೆಬ್ರ, ನಾ ಇನ್ಮೂಂದ ಇಂಥಾ ಕೆಲಸಾ ಮಾಡೂದಿಲ್ಲ "ಎಂದು ಪಾದಕ್ಕ ಬಿದ್ದು ಅಳ್ಳಿಕತ್ತಿದ್ದಾಗ ಉಪವಾಸವನ್ನು ತ್ಯಜಿಸುತ್ತಿದ್ದರು.
ನಮ್ಮ ತಂದೆ ಬೆಂಗಳೂರಿಗೆ ಹೋದಾಗೊಮ್ಮೆ ಹೊರಿ ಹೊರಿ ಪುಸ್ತಕಗಳನ್ನು ಹೊತ್ತು ತರುತ್ತಿದ್ದರು.ಅವುಗಳಲ್ಲಿ ಜಿವನ ಚರಿತ್ರೆ, ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ವೈಜ್ಞಾನಿಕ ಪುಸ್ತಕಗಳಿರುತ್ತಿದ್ದವು. ನಾವೆಲ್ಲ ಓದಿಯಾದ ಮೇಲೆ ಹೀರೆ ಪಡಸಲಗಿಯಲ್ಲೊಂದು ಲೈಬ್ರರಿ ತೆಗೆದಿದ್ದು ಅವುಗಳನ್ನೆಲ್ಲ ಅಲ್ಲಿ ಇಟ್ಟು ಬಿಡುತ್ತಿದ್ದರು.ಬಡರೈತನ ಮಕ್ಕಳು ಅವುಗಳನ್ನೆಲ್ಲ ಪುಕ್ಕಟೆ ಓದಲಿ ಎಂಬ ಮಹದಾಶೆ ಅವರದಾಗಿತ್ತು.
ಇಂಚಗೇರಿ ಮಠದ ಮಹದೇವಪ್ಪ ಅಲ್ಲಿ ಸುತ್ತಲಿನ ಹಳ್ಳಿಗಳಲ್ಲೆಲ್ಲ ದರೋಡೆ, ಖೂನಿ ಮಾಡಿಸುತ್ತಿದ್ದವ. ಆಗ ನಮ್ಮ ತಂದೆ ಮಠದೊಳಕ್ಕೆ ಹೊಕ್ಕು ಅರೆಸ್ಟ್ ಮಾಡಿಸಿದಾಗ, "ಯಾರಿಗೂ ಹೆದರದವನು ನಾನು ಈ ಎಚ್. ಬಿ. ಗ್ಯಾಕೋ ಹೆದತರ್ಿನಿ, ಹುಲಿ ಯಂಥಾ ಮನಷ್ಯಾ ಇದ್ದಾನವ" ಎಂದು ಉದ್ಗಾರ ತೆಗೆದನಂತೆ. ಅದೇ ಸಂದರ್ಭದಲ್ಲಿ ನಮ್ಮ ಕಾಕಾ ರಾವಬಹದ್ದೂರರು ಸಂಯುಕ್ತ ಕನರ್ಾಟಕದ ಸಂಪಾದಕರಾಗಿ ಹುಬ್ಬಳ್ಳಿಯಲ್ಲಿರುತ್ತಿದ್ದರು ದಿನವೂ ಇಂಚಗೇರಿ ಮಠದ ಸ್ವಾಮಿಯ ಸುದ್ದಿಯನ್ನು ಮುಖ ಪುಟದಲ್ಲೇ ಹಾಕುತ್ತ ಸುದ್ದಿಗೆ ಮತ್ತಿಷ್ಟು ಕಾವುಕೊಟ್ಟು ಅರೆಸ್ಟ್ ಅಗುವಲ್ಲಿ ಸಹಕಾರ ನೀಡಿದ್ದೂ ಉಂಟು.ನಂತರ ದುಡ್ಡು ಕೊಟ್ಟು ಹೊರಗೆ ಬಂದಿದ್ದು ಬೇರೆ ವಿಷಯ!
ಬಿಜಾಪುರ ಜಿಲ್ಲೆಯ ಹುಲಿಯೆಂದೇ ಪ್ರತೀತಿ ಪಡೆದ ನಮ್ಮ ತಂದೆಯವರು ಅನ್ಯಾಯ ಕಂಡರೆ ಸಹಿಸುತ್ತಿರಲಿಲ್ಲ. ರಿಟೈರ್ ಆದಮೆಲೂ ಭೂದಾನ, ಜೆಪಿಚಳುವಳಿಯಲ್ಲೆಲ್ಲ ಮುಂಚೂಣಿಯಲ್ಲಿದ್ದವರು.ಅಣ್ಣುಗೂರೂಜಿಯವರಂತೂ ನಮ್ಮ ತಂದೆಯ ಗಳಸ್ಯ ಕಂಟಸ್ಯ. ಜೀವನದ ಕೊನೆಯುಸಿರಿರುವವರೆಗೂ ಅವರು ನಮ್ಮ ತಂದೆಯೊಂದಿಗೇ ಇದ್ದರು ಎಚ್.ಎಸ್. ದೊರೈಸ್ವಾಮಿಯಾಗಲೀ, ವೆಂಕರೆಡ್ಡಿ ಹುಲಿಯಾಗಲಿ ನಮ್ಮ ಮನೆಯಲ್ಲಿಯೆ ಇರುತ್ತಿದ್ದರು. ಸುರೇಂದ್ರ ದಾನಿಯವರು ಏನೇ ಲೀಗಲ್ ಅಡ್ವೈಸ್ ತೆಗೆದುಕೊಳ್ಳುವುದಿದ್ದರೂ ನಮ್ಮ ತಂದೆಯ ಹತ್ತಿರವೇ ತೆಗೆದುಕೊಳ್ಳುತ್ತಿದ್ದರು.
ನಮ್ಮ ಮನೆ ಎಂದರೆ ಧರ್ಮ ಛತ್ರವಿದ್ದಂತೆ.ಯಾವಾಗಲೂ ಯಾರಾದರೂ ಊಟಕ್ಕೆ, ತಿಂಡಿಗೆ, ಚಹಕ್ಕೆ ಇರುವವರೇ. ಯಾರೇ ಬಂದರೂ ಊಟ ಮಾಡಿ ಹೋಗುವ ಪದ್ಧತಿ ನಮ್ಮ ಮನೆಯಲ್ಲಿತ್ತು. ನಮ್ಮ ತಾಯಿಯದೂ ದೊಡ್ಡ ಮನಸ್ಸು.ಯಾರನ್ನೂ ಹಾಗೇ ಕಳಿಸುತ್ತಲೇ ಇರಲಿಲ್ಲ." ಅನ್ನಪೂಣರ್ೆಶ್ವರಿ "ಎಂತಲೇ ಪ್ರತೀತಿ ಪಡೆದಿದ್ದಳು. ಮನೆಯಲ್ಲಿ ಬಳಗದ ಮಕ್ಕಳೆಲ್ಲ ಶಾಲೆ ಕಲಿಯಲು ಇರುತ್ತಿದ್ದರು.ಅಡುಗೆಯವಳಿದ್ದರೂ ಮೇಲ್ವಿಚಾರಣೆ ಎಲ್ಲ ನಮ್ಮ ತಾಯಿಯ ದೇ.ಯಾಕೆಂದರೆ ನಮ್ಮ ತಂದೆಯವರು ಮನೆಯಲ್ಲಿರುವುದೇ ಅಪರೂಪ. ಆಗೆಲ್ಲ ನಮ್ಮ ತಾಯಿಯೇ ಮನೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಳು. ಬರೀ ಪಕ್ಷಗಾರರಷ್ಟೇ ಅಲ್ಲ, ಆಸ್ಪತ್ರೆಗೆ ಬಂದ ಪೇಶಂಟುಗಳೂ, ಅವರ ಸಂಬಂಧಿಕರೂನಮ್ಮ ಮನೆಯಲ್ಲೇ ಠಿಕಾಣಿ ಹೂಡುತ್ತಿದ್ದರು. ಅಗೆಲ್ಲ ಅವರ ಪಥ್ಯದ ಅಡುಗೆ ಸಂಬಂದಿ ಕರ ಊಟ, ಚಹ, ನಾಷ್ಟಾ ಅಂತೆಲ್ಲ ನಮ್ಮ ತಾಯಿಯೆ ನೋಡಿಕೊಳ್ಳಬೇಕಾಗುತ್ತಿತ್ತು. ಅವಳಲ್ಲಿ ಎಂದಿಗೂ ಗೊಣಗಾಟ ಎಂಬ ಶಬ್ದವೇ ಇರುತ್ತಿರಲಿಲ್ಲ. ಅಕೆ ಎಂಥಾ ದೇವತೆಯಪ್ಪಾ ಎಂದು ಈಗ ಅನ್ನಿಸುತ್ತಿರುತ್ತದೆ.
"ಅನಾಯಾಸೇನ ಮರಣಂ ಧ್ರುವಂ ವಿನಾ ದೈನ್ಯೇನ ಜೀವನಂ" ಎಂದು ಯಾವಾಗಲೂ ಹೇಳುತ್ತಿದ್ದ ನಮ್ಮ ತಂದೆಯವರು ಅಲ್ಪಕಾಲದ ಅನಾರೋಗ್ಯದಿಂದ ಬಳಲಿ ನಮ್ಮಿಂದ ದೂರವಾದರು.