ಲೇಖನಗಳು

ಪತ್ರಿಕಾ ರಂಗದ ಪಾವಿತ್ರೆತೆಯ ಬಿಂಬದಂತಿರುವ... ಡಿವಿಜಿ ಅವರ ವೃತ್ತಪತ್ರಿಕೆ

ಪತ್ರಿಕಾ ರಂಗದ ಪಾವಿತ್ರೆತೆಯ ಬಿಂಬದಂತಿರುವ... ಡಿವಿಜಿ ಅವರ ವೃತ್ತಪತ್ರಿಕೆ

ಪತ್ರಿಕಾ ಮಾಧ್ಯಮ ಸಮಾಜದ ಓರೆ ಕೋರೆಗಳನ್ನು ಗುರುತಿಸಿ ಅವುಗಳ ವಾಸ್ತವಾಂಶವನ್ನು ಜನರ ಮುಂದಿಟ್ಟು ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಅವಕಾಶ ನೀಡುವ ಸಾಮಾಜಿಕ ಕಳಕಳಿಯುಳ್ಳ ಅಂಗವಾಗಿದೆ.  

ಯಾವುದೇ ದೇಶ ಅಥವಾ ಸಮಾಜ ಸುಧಾರಣೆಯಾಗಬೇಕಾದರೆ ಮತ್ತು ಅದೇ ಸಮಾಜ ಅಧಃಪತನ ಹೊಂದಿದರೆ ಅದಕ್ಕೆ ನೇರ ಹೊಣೆ ಪತ್ರಿಕಾ ಮಾಧ್ಯಮದ್ದೇ ಆಗಿರುತ್ತದೆ. ಸಮಾಜವನ್ನು ಸುಧಾರಿಸುವ ನಿಟ್ಟಿನಲ್ಲಿ ಪತ್ರಿಕಾ ಮಾಧ್ಯಮದ ಪಾತ್ರ ಅಪಾರವಾಗಿದೆ. ಪತ್ರಿಕಾ ಮಾಧ್ಯಮದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಯಾವುದೇ ಪ್ರಭಾವಕ್ಕೆ ಒಳಗಾಗದೆ. ಪ್ರಲೋಭಗಳಿಗೆ ಬಲಿಯಾಗದೆ. ನೇರ ನಿಷ್ಠುರವಾದ ಕಾರ್ಯ ನಿರ್ವಹಿಸಿದರೆ ಸಮಾಜದಲ್ಲಿನ ಅಸಮತೋಲನ ತೊಲಗಿ ಸಮಾನತೆಯ ವಾತಾವರಣ ಸೃಷ್ಠಿಯಾಗುತ್ತದೆ. ಭ್ರಷ್ಟಾಚಾರ, ಧರೋಡೆ, ಮೊಸ ಕೊಲೆ ಸುಲಿಗೆ, ಅತ್ಯಾಚಾರ ಅನಾಚಾರದಂಥ ಸಮಾಜ ಘಾತುಕ ಚಟುವಟಿಕೆಗಳಿಗೆ ಕಡಿವಾಣ ಹಾಕಿದಂತಾಗುತ್ತದೆ. ಸಮಾಜದಲ್ಲಿನ ವಾಸ್ತಾಂಶವನ್ನು ಅರಿತ ಜನಕ್ಕೆ ಸತ್ಯ ಮಿಥ್ಯಗಳ ಅರಿವು ಉಂಟಾಗಿ ಸ್ವಚ್ಚಂದ ಬದುಕು ಸಾಗಿಸಲು ಮುಂದಾಗುತ್ತಾರೆ. ಅಂದರೆ ಸಮಾಜದ ಸ್ವಚ್ಚಂದ ಬದುಕಿಗೆ. ಪ್ರಗತಿಗೆ. ಶಾಂತಿ ನೆಮ್ಮದಿಗೆ ಪತ್ರಿಕಾ ಮಾಧ್ಯಮದ ಕಾರ್ಯ ವೈಖರಿಯೇ ಕಾರಣವಾಗಿದೆ ಎಂದರೆ ತಪ್ಪಾಗಲಾರದು.  ಈ ಕಾರಣಕ್ಕಾಗಿಯೇ ಸಂವಿಧಾನದಲ್ಲಿ ಪತ್ರಿಕಾ ಮಾಧ್ಯಮಕ್ಕೆ  ಸಮೂಹ (ಮಾಧ್ಯಮ) ವಿಶೇಷವಾದ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. 

ಆದರೆ ಇದನ್ನರಿತ ಮಾಧ್ಯಮ ವರ್ಗ ಪತ್ರಿಕಾ ಮಾಧ್ಯಮದ ಪಾವಿತ್ರತೆಯನ್ನೇ ಹಾಳು ಮಾಡಿದೆ. ಉಳ್ಳವರ ದಬ್ಬಾಳಿಕೆಗೆ ಸಿಲುಕಿ. ಪಕ್ಷಪಾತ ನೀತಿಯನ್ನನುಸರಿಸಿ. ಪ್ರಲೋಭನೆಗಳಿಗೆ ಒಳಗಾಗಿ ವಾಸ್ತವಾಂಶಗಳನ್ನೇ ಮರೆಮಾಚಿ ಓಲೈಕೆ ನೀತಿಯನ್ನನುಸರಿಸಿ ಸಮಾಜದಲ್ಲಿ ಅಶಾಂತಿ. ಅರಾಜಕತೆ. ದುರಾಡಳಿತಕ್ಕೆ ದಾರಿ ಮಾಡಿಕೊಡುವ ವರದಿಗಳನ್ನು ಬಿತ್ತರಿಸುತ್ತಿದೆ.   

ಕಾರ್ಯಾಂಗ. ನ್ಯಾಯಾಂಗ. ಶಾಸಕಾಂಗಕ್ಕಿಂತಲೂ ಮಿಗಿಲಾದ ಅಧಿಕಾರ ಹೊಂದಿರುವ ಪತ್ರಿಕಾ ಮಾಧ್ಯಮ ತನಗಿರುವ ಸಾಮಾಜಿಕ ಜವಾಬ್ದಾರಿಯನ್ನೇ ಮರೆತುಬಿಟ್ಟಿದೆ. ಶೋಷಿತರ. ನಿರ್ಗತಿಕರ. ಅಮಾಯಕರ ಬಡವರ ಧ್ವನಿಯಾಗಬೇಕಿದ್ದ ಮಾಧ್ಯಮ ಬಲವುಳ್ಳವರ. ಹಣವಂತರ. ಅಧಿಕಾರಸ್ತರ ಹಾಗೂ ಪ್ರಭಾವಿಗಳ ಕೈಗೊಂಬೆಯಂತೆ ಕಾರ್ಯ ನಿರ್ವಹಿಸುತ್ತಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಿದ್ದ ಮಾಧ್ಯಮ ನಿರಂಕುಶ ಪ್ರಭುಗಳ ಆಣತಿಯಂತೆ ಕೆಲಸ ಮಾಡುತ್ತಿದೆ. ಜಾಗತಿಕ ಮಟ್ಟದಲ್ಲಿಯೇ ಪತ್ರಿಕಾ ಮಾಧ್ಯಮದ ಘನತೆ ತೀರಾ ಕುಸಿದು ಹೋಗಿದೆ.ಇದರ ಹೊರತಾಗಿಯೂ ಅನೇಕ ಮಾಧ್ಯಮ ಸಂಸ್ಥೆಗಳು ಹಾಗೂ ವರದಿಗಾರರು ಬದ್ದತೆಯಿಂದ. ನೇರ ನಿಷ್ಠುರದ ನಡೆಯಿಂದ ಯಥಾವತ್ತಾದ ವರದಿಗಳನ್ನು ಮಾಡಿ ಪತ್ರಿಕಾ ಮಾಧ್ಯಮ ಗೌರವವನ್ನು ಕಾಪಾಡುತ್ತಿದ್ದಾರೆ. ಸರಕಾರದ ಯಾವುದೇ ಆಮಿಷಗಳಿಗೆ ಬಲಿಯಾಗದೆ ಕಷ್ಟಗಳನ್ನು ಅವಮಾನಗಳನ್ನು ಅನುಭವಿಸಿ ಜನಪರ ಕಾಳಜಿಯುಳ್ಳ ವರದಿಗಳನ್ನು ನೀಡಿ ಪತ್ರಿಕಾ ಮಾಧ್ಯಮದ ಘನತೆಯನ್ನು ಕಾಪಾಡುತ್ತಿದ್ದಾರೆ. ವೃತ್ತಿ ಧರ್ಮದ ಜವಾಬ್ದಾರಿಯನ್ನರಿತು ಸಾಮಾಜಿಕ ಕಳಕಳಿಯ ಕೆಲಸ ಮಾಡುತ್ತಿದ್ದಾರೆ.  

ಕವಿಯಾಗಿ, ನಾಟಕಕಾರರಾಗಿ, ಚಿಂತಕರಾಗಿ ಮತ್ತು ವಾಗ್ಮಿಗಳಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಬೆಳಗಿ ಹೋದ ಶ್ರೀ ಡಿ ವಿ ಗುಂಡಪ್ಪನವರು ನೇರ ನಿಷ್ಠುರ ಮತ್ತು ವಾಸ್ತವಾಂಶಗಳ ವರದಿಯನ್ನು ಮಾಡಿ ಪತ್ರಿಕಾ ಮಾಧ್ಯಮದ ಗೌರವವನ್ನು ಕಾಪಾಡಿದವರಲ್ಲಿ ಒಬ್ಬರಾಗಿದ್ದಾರೆ. ಕವಿ, ರಾಜಕಾರಣಿ, ಗುರು, ಪತ್ರಿಕೋಧ್ಯಮಿ, ವಿಮರ್ಶಕ, ಕಲಾರಾಧಕ, ಚರಿತ್ರೆಕಾರ, ಸಂಸ್ಥೆಗಳ ನಿರ್ಮಾಪಕ ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಡಿ ವಿ ಜಿಯವರು ಬಹುಮುಖ ಪ್ರತಿಭೆಯಲ್ಲಿ ಮಿಂದೆದ್ದವರು. ಸಾಹಿತ್ಯ ಕ್ಷೇತ್ರದಲ್ಲಿ ಪತ್ರಿಕೋದ್ಯಮದ ಮೂಲಕ ಸಾಮಾಜಿಕ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದವರು. ಪತ್ರಿಕೋದ್ಯಮದಲ್ಲಿ ತಮ್ಮನ್ನು ತಾವು ಆಳವಾಗಿ ತೊಡಗಿಸಿಕೊಂಡವರು.  

ಪತ್ರಿಕೋದ್ಯಮದ ಇತಿಹಾಸವನ್ನು ಅರಿಯಲು ಸತತ ಪ್ರಯತ್ನ ಮಾಡಿದವರು. ಡಿವಿಜಿ ಅವರ ಪ್ರಕಾರ ಪ್ರಪಂಚದ ಮೊದಲ ಪತ್ರಿಕೆಯಂದರೆ... 1615ರಲ್ಲಿ ಜರ್ಮನಿಯಲ್ಲಿ ವಾರಕ್ಕೊಮ್ಮೆ ಪ್ರಕಟವಾಗುತ್ತಿದ್ದ ವಾರಪತ್ರಿಕೆಯಾಗಿದೆ. ನಂತರ 1660ರಲ್ಲಿ ಇಂಗ್ಲೆಂಡಿನಲ್ಲಿ ಪ್ರಕಟವಾಗುತ್ತಿದ್ದ “ಪರ್ಫೆಕ್ಟ್‌ ಡಯಾರ್ನಲ್‌” ಎಂಬ ಪತ್ರಿಯಾಗಿತ್ತು. ಇದು ಕೇವಲ 24 ದಿನಗಳ ವರೆಗೆ ಮಾತ್ರ ಪ್ರಕಟವಾದ ಪತ್ರಿಕೆ.  

ಭಾರತದಲ್ಲಿನ ಮೊದಲ ಪತ್ರಿಕೆಯಂದರೆ 1781 ರಲ್ಲಿ ಕಲ್ಕತ್ತಾ ದಲ್ಲಿ ಪ್ರಕಟವಾಗುತ್ತಿದ್ದ “ಬೆಂಗಾಲ್ ಗೆಜೆಟ್‌” (“ಹಿಕ್ಕೀಸ್ ಗೆಜೆಟ್‌”)  ಹಾಗೆಯೇ ಕನ್ನಡದ ಮೊದಲ ಪತ್ರಿಕೆ “ಮಂಗಳೂರು ಸಮಾಚಾರ” ಇದು ಪ್ರತಿ ತಿಂಗಳ 1ನೇ ಹಾಗೂ 15ನೇ ತಾರೀಖಿನಂದು ಪ್ರಕಟವಾಗುತ್ತಿತ್ತು.ಈ ಇತಿಹಾಸವನ್ನು ಅರಿತಿದ್ದ ಡಿ ವಿ ಜಿ ಯವರು ಇತಿಹಾಸಕ್ಕೆ ತಮ್ಮದೊಂದು ಪುಟದ ಸೇರೆ​‍್ಡ ಎಂಬಂತೆ 1884 ರಲ್ಲಿ ಮಸೂರು ಪ್ರಾಂತ್ಯದ ಪತ್ರಿಕೆ ಎಂಬ ಹೆಗ್ಗಳಿಕೆಯೊಂದಿಗೆ ‘ಕರ್ನಾಟಕ ಪ್ರಕಾಶಕ’ ಎಂಬ ಪತ್ರಿಕೆಯನ್ನು ಮುನ್ನಡೆಸಿದರು. 

ಮೈಸೂರು ರಾಜ್ಯಾಂಗ ಸುಧಾರಣಾ ಸಮಿತಿಯ ಸದಸ್ಯರಾಗಿದ್ದ ಶ್ರೀಯುತರು ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸುತ್ತಿದ್ದ ‘ಇಂಗ್ಲೀಷ್ ಕನ್ನಡ ನಿಘಂಟು’ ಕೃತಿಯ ಸಂಪಾದಕರೂ ಆಗಿ ಕಾರ್ಯ ನಿರ್ವಹಿಸಿದರು. ಇದೇ ಯನಯದಲ್ಲಿ ಪ್ರಕಟವಾಗುತ್ತಿದ್ದ ಇತರ ಪತ್ರಿಕೆಗಳಾದ  ಭಾರತಿ (1907)  ವೀರಕೇಸರಿ  (1908).  ಸುಮತಿ  (1909).  ಸುರ್ಯೋದಯ ಪ್ರಕಾಶಕ.  ಈವಿನಿಂಗ್ ಮೈಲ್  ಮೈಸೂರು ಟೈಮ್ಸ್‌  ಇಂಗ್ಲೀಷ್ ಮತ್ತು ಕನ್ನಡ  (1913 ರಿಂದ 1926)  ಇಂಡಿಯನ್ ರಿವ್ಯೀವ್ ಆಫ್ ರೀವೀವ್ಸ್‌  ಕರ್ನಾಟಕ ಜನಜೀವನ.  ಅರ್ಥ ಸಾಧಕ ಪತ್ರಿಕೆ.  (1923).  ಪಬ್ಲಿಕ್ ಅಫೇರ್ಸ್‌  (1949 ರಿಂದ 1975).  ಮುಂತಾದ ಪತ್ರಿಕೆಗಳನ್ನು ಮುನ್ನಡೆಸಿದ ಕೀರ್ತಿ ಡಿ ವಿ ಜಿ ಅವರಿಗೆ ಸಲ್ಲುತ್ತದೆ.ತಮ್ಮ ಬದುಕಿನ ಬಹುಭಾಗದ ಸಮಯವನ್ನು ಪತ್ರಿಕೋದ್ಯಮದಲ್ಲಿಯೇ ಕಳೆದ ಇವರು ಅದರ ಕುರಿತು ಅಪಾರ ಅನುಭವ ಹೊಂದಿದವರು.  

ಹಾಗೆ ನೋಡಿದರೆ ಪತ್ರಿಕೋದ್ಯಮ ಡಿ ವಿ ಜಿಯವರ ಇಶಿಸಿದ್ದ ವೃತ್ತಿಯೇನಲ್ಲ.  ‘ಉದರಂಭರಣ ಅಶನಾರ್ಧ ನಿರ್ವಹಣೆ’  ಕಾರಣವಾಗಿ ಕೈಗೊಂಡ ಕೈಂಕರ್ಯವಷ್ಟೆ. ಆದರೆ ‘ವೃತ್ತ ಪತ್ರಿಕೆ’ ಎಂಬ ಪ್ರಬುದ್ದ ಕೃತಿಯೊಂದನ್ನು ರಚಿಸುವಷ್ಟು ಪತ್ರಿಕಾ ಮಾಧ್ಯಮವನ್ನು ಪ್ರೀತಿಸುತ್ತಿದ್ದರು. ಪತ್ರಿಕಾ ಮನೋಧರ್ಮವನ್ನು ಬೆಳೆಸಿಕಂಡಿದ್ದರು. ಎಂತಹ ಟೀಕೆಯನ್ನಾದರೂ ಎದುರಿಸುವಷ್ಟು ಸಂಕಲ್ಪ ಹೊಂದಿದ್ದರು.  

ಹದಿನೆಂಟು ವರ್ಷಗಳ ನಂತರ ತಮ್ಮ ‘ಕರ್ನಾಟಕ ಪ್ರಕಾಶಕ’ ಪತ್ರಿಕೆಯನ್ನು ನಿಲ್ಲಿಸಿದಾಗ ಸಾರ್ವಜನಿಕರಿಂದ ಬಂದ ಕಟುವಾದ ಮತ್ತು ನಿರ್ಧಾಕ್ಷಿಣ್ಯವಾದ ಟೀಕೆಯನ್ನು ಎದುರಿಸಿ ಸಮರ್ಥಿಸಿಕೊಂಡಿದ್ದರು. ಮತ್ತು ಪತ್ರಿಕೆ ನಿಲ್ಲಿಸಲು ಕಾರಣವನ್ನೂ ಯಾವುದೇ ಮುಲಾಜಿಲ್ಲದೆ ಧರ್ಯದಿಂದ ಹೇಳಿದ್ದರು.  ಅದೇನೆಂದರೆ.... ‘ಅಸಮರ್ಥರು ಹಾಗೂ ಸಣ್ಣ ಮನಸ್ಸಿನವರು ಅಧಿಕಾರ ಪದವಿಗೇರಿದರೆಂದರೆ ಪತ್ರಿಕಾವೃತ್ತಿ ಸಂತೋಷವಿಲ್ಲದ್ದಾಗುತ್ತದೆ’ ಎಂದಿದ್ದರು. ಅಷ್ಟರಮಟ್ಟಿಗೆ ಪತ್ರಿಕೋದ್ಯಮವನ್ನು ಹಚ್ಚಿಕೊಂಡಿದ್ದರು. ಯಾವುದೇ ಸಮಯದಲ್ಲೂ ಪತ್ರಿಕೋದ್ಯಮವನ್ನು ಜೀವನದ ಅವಿಭಾಜ್ಯ ಅಂಗವೆದೇ ಭಾವಿಸಿದ್ದರು. ಮತ್ತು ಒಮ್ಮೆ ಹೀಗೆ ಬರೆದುಕಂಡಿದ್ದರು.  ‘ನನ್ನದು ಮಸಿಕುಡಿಕೆಯ ಜೀವನ’ ಎಂದು. ಸರಿಸುಮಾರು 70 ವರ್ಷಗಳ ಕಾಲ ಪತ್ರಿಕಾ ಮಾದ್ಯಮದ ಸೇವೆ ಮಾಡಿದ ಡಿ ವಿ ಜಿ  ಅವರು ಆ ಕ್ಷೇತ್ರದ ಕುರಿತು ಅಗಾಧವಾದ ಅನುಭವ ಹೊಂದಿದ್ದರು.  ಕನ್ನಡ ಸಾಹಿತ್ಯದಲ್ಲಿ ಪತ್ರಿಕದ್ಯಮ ಹಾಗೂ ವೃತ್ತ ಪತ್ರಿಕೆಗಳನ್ನು ಕುರಿತು ಮೊತ್ತ ಮೊದಲ ಕೃತಿಯಾದ  *ವೃತ್ತ ಪತ್ರಿಕೆ*  ಕೃತಿಯನ್ನು ರಚಿಸಿದರು. ಈ ಕೃತಿಯು ಹದಿನೈದು ಅಧ್ಯಾಯಗಳನ್ನು ಒಳಗೊಂಡಿದ್ದು.  ಪತ್ರಿಕೋದ್ಯಮದ ಕುರಿತು ಸಮಗ್ರ ಮಾಹಿತಿಯನ್ನು ನೀಡುತ್ತದೆ.  

ಅಂದಿನ ಕಾಲಘಟ್ಟದ ಪತ್ರಿಕಾ ಪ್ರಪಂಚದ ಯಾವೊಂದು ಸಣ್ಣಪುಟ್ಟ ಹಾಗೂ ಪ್ರಮುಖ ವಿಚಾರಗಳನ್ನು ಬಿಡದೆ ಹಿಡಿದಿಡಲಾಗಿದೆ. ಅಷ್ಟೊಂದು ಸವಿಸ್ತಾರವಾದ ಕೃತಿ ರಚಿಸಬೇಕಾದರೆ ಅವರಿಗಿರುವ ಪತ್ರಿಕಾ ಕ್ಷೇತ್ರದ ಜ್ಞಾನ ಎಂತಹದ್ದು ಎಂದು ಅರಿಯಬೇಕಾಗುತ್ತದೆ. ಅವರೇ ಬರೆದುಕೊಂಡಂತೆ ‘ಮಸಿಕುಡಿಕೆಯ ಜೀವನ ನನ್ನದು’ ಎಂದಿದ್ದಾರೆ.  ಇಡೀ ಜೀವನವನ್ನೇ ಪತ್ರಿಕಾ ಮಾಧ್ಯಮಕ್ಕೆ ಮೀಸಲಿಟ್ಟು ಬದುಕಿದ್ದಾರೆ ಎಂದರೆ ಪತ್ರಿಕಾ ಮಾಧ್ಯಮದ ಘನತೆ ಎಂತಹದ್ದು ಎಂದ ಮನಗಾಣಬೇಕಿದೆ.ಅವರು ಬರೆದ ‘ವೃತ್ತಪತ್ರಿಕೆ’ ಕೃತಿಯು  ಹದಿನೈದು ಅಧ್ಯಾಯಗಳನ್ನೊಳಗೊಂಡಿದ್ದು ಪತ್ರಿಕಾ ಮಾಧ್ಯಮದ ಸಮಸ್ತ ವಿಷಯವನ್ನು ಅಭಿವ್ಯಕ್ತಿಸುವಂತಿದೆ. ಕೃತಿಯ ಆರಂಭದ ಪುಟದಲ್ಲಿ ಸಿ ಪಿ ಸ್ಕಾಟ್ ಅವರ ವಸ್ತು ಸಂಗ್ರಹದ ಮಾಹಿತಿ ಇದೆ. ಪತ್ರಿಕಾ ಟೀಕು ಸ್ವಾತಂತ್ರ್ಯ.  ವೃತ್ತಪತ್ರಿಕೆಯ ಸ್ವರೂಪ. ವೃತ್ತ ಪತ್ರಿಕೆಯ ಕರ್ತವ್ಯ. ಅದಕ್ಕಿರಬೇಕಾದ ಸಹಾಯ. ವೃತ್ತ ಪತ್ರಿಕೆಯ ಸ್ವಾತಂತ್ರ್ಯ. ವೃತ್ತ ಪತ್ರಿಕೆ ಮತ್ತು ಶಾಸನ ಸಂಸ್ಥೆ.  ಪತ್ರಿಕಾ ಸ್ವಾತಂತ್ರ್ಯದಲ್ಲಿ ಸ್ಥಾನಗೌರವ. ಪತ್ರಿಕೋದ್ಯೋಗಿಯ ಪ್ರತಿಜ್ಞೆ. ಪತ್ರಿಕಾ ವೃತ್ತಿ ಆಗ  ಈಗ. ವಿಚಾರವೇ ಪ್ರಚಾರವೇ. ಪತ್ರಿಕೆಯ ಚತುರಗ. ಕಸುಬು ತಯಾರಿ.  ಲಂಚಾವತಾರ. ಪ್ರೆಸ್ ಕಮಿಷನ್‌.  ಪ್ರೆಸ್ ಕೌನ್ಸಿಲ್ ಆದರ್ಶ ಪತ್ರಿಕೆ. ಹಾಗೂ ಉಪಸಂಹಾರ. ಹೀಗೆ ಹದಿನೈದು ಅಧ್ಯಾಯಗಳನ್ನೊಳಗೊಂಡಿದೆ.  ಇದರ ಜೊತೆಗೆ  ಪತ್ರಿಕಾವೃತ್ತಿ ಮತ್ತು ಸಾಹಿತ್ಯ  ಎಂಬ ಮೂರು ಅನುಬಂಧಗಳನ್ನು ಹೊಂದಿದೆ.ಇಂತಹ ಅಭೂತಪೂರ್ವ ಕೃತಿ ರಚಿಸಿದ ದೇವನಹಳ್ಳಿ ವೆಂಕಟರಮಣಪ್ಪ ಗುಂಡಪ್ಪ ಇವರು ಭವಿಷ್ಯದ ಪತ್ರಿಕಾ ರಂಗದ ಉದ್ಯಮಿಗಳಿಗೆ ಹಾಗೂ ವೃತ್ತಿಪರರಿಗೆ ಮಾರ್ಗದರ್ಶಕರಾಗಿದ್ದಾರೆ. ನಿಜವಾದ ಸಮಾಜಿಕ ಕಳಕಳಿಯುಳ್ಳ ಪತ್ರಿಕಾ ಕ್ಷೇತ್ರದ ಕಾರ್ಮಿಕನು ಅನುಸರಿಸಲೇಬೇಕಾದ ನೀತಿ ನಿಯಮಗಳನ್ನು. ರೀತಿ ರಿವಾಜುಗಳನ್ನು. ಬದ್ದತೆ. ಕಾರ್ಯದಕ್ಷತೆಯನ್ನು. ವೃತ್ತಿ ಧರ್ಮವನ್ನು. ಪತ್ರಿಕಾ ಮಾಧ್ಯಮದ ಜವಾಬ್ದಾರಿಗಳನ್ನು ತಮ್ಮ ವೃತ್ತಪತ್ರಿಕೆಯಲ್ಲಿ ದಾಖಲಿಸಿದ್ದಾರೆ.ಸಮಾಜದಲ್ಲಿ ಶಾಂತಿಯನ್ನು.  ಸೌಹಾರ್ದತೆಯನ್ನು ಆತ್ಮೀಯ ಬಂಧಗಳನ್ನು ಹಾಗೂ ಪ್ರಗತಿಯನ್ನು ಹೇಗೆ ಸಾಧಿಸಬಹುದು ಎಂಬುದನ್ನು ವಿವರಿಸಿದ್ದಾರೆ.ಇಂದಿನ ದಿನಮಾನದಲ್ಲಿ ಪತ್ರಿಕಾ ರಂಗದಲ್ಲಿ ದುಡಿಯುತ್ತಿರುವ ಸಮಸ್ತರೂ ನಿಯತ್ತಿನ ಹಾಗೂ ಜವಾಬ್ದಾಯುತ ಸ್ಥಾನದಲ್ಲಿದ್ದು ಸಮಸ್ತ ಜನರ ಹಿತದೃಷ್ಠಿಯಿಂದ ಪತ್ರಿಕಾ ರಂಗದ ಪಾವಿತ್ರತೆಯನ್ನು ಕಾಪಾಡುವ ಅಗತ್ಯವಿದೆ. ಅದಕ್ಕಾಗಿ ಡಿ.ವಿ.ಜಿ ಅವರು ಬರೆದ *ವೃತ್ತಪತ್ರಿಕೆ* ಕೃತಿಯನ್ನು ಕೊಂಡು ಓದುವ ಅಗತ್ಯವೂ ಇದೆ. ತಮ್ಮ ವೃತ್ತಿ ಬದುಕಿನಲ್ಲಿ ನೆಮ್ಮದಿಯನ್ನು ಕಾಣಲು  ಮಾಡುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿ ಜೀವನಮುಕ್ತಿ ಪಡೆಯಬೇಕಾದರೆ ಡಿ ವಿ ಜಿ ಅವರ *ವೃತ್ತಪತ್ರಿಕೆ* ಕೃತಿಯ ಆಶಯಗಳನ್ನು ಅನುಸರಿಸಿ. ಆ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಸರ್ವರಿಗೂ ಒಳಿತಾಗಲಿ. ಪತ್ರಿಕಾ ರಂಗದ ಮನೋಧರ್ಮ ಸಮಾಜಮುಖಿಯಾಗಿರಲಿ  ಎಂದು ಆಶಿಸುವೆ ಮತ್ತು ಬಿನ್ನಹಿಸುವೆ. 

- ವೆಂಕಟೇಶ ಈಡಿಗರ 

ರಾಣೇಬೆನ್ನೂರು 

- * * * -  


ಸುದ್ದಿ ಓದಿ