‘ದುಬಾರಿ’ ವಿಚಾರ ಸದ್ಯಕ್ಕಿಲ್ಲ: ನಿರ್ಮಾಪಕ ಉದಯ್ ಮೆಹ್ತಾ
ಬೆಂಗಳೂರು, ಜೂನ್ 12: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯಸಬೇಕಿದ್ದ ‘ದುಬಾರಿ’ ಸಿನಿಮಾದಿಂದ ನಿರ್ದೇಶಕ ನಂದಕಿಶೋರ್ ಹೊರಬಂದಿದ್ದಾರೆ ಎಂಬ ಸುದ್ದಿ ಬಗ್ಗೆ ನಿರ್ಮಾಪಕ ಉದಯ್ ಕೆ ಮೆಹ್ತಾ ಸ್ಪಷ್ಟನೆ ನೀಡಿದ್ದಾರೆ.ನಿರ್ದೇಶಕರು ಹೊರನಡೆಯುವುದು ಹಾಗಿರಲಿ, ಚಿತ್ರ ನಿರ್ಮಾಣವನ್ನೇ ಮುಂದೂಡಲಾಗಿದೆ. ‘ದುಬಾರಿ’ ವಿಚಾರ ಸದ್ಯಕ್ಕಿಲ್ಲ ಎಂದು ಹೇಳಿದ್ದಾರೆ.ಪೊಗರು ಜೋಡಿ ಧ್ರುವ-ನಂದಕಿಶೋರ್ ಕಾಂಬಿನೇಷನ್ ನ ಸಿನಿಮಾದಲ್ಲಿ ನಾಯಕಿಯಾಗಿ ಶ್ರೀಲೀಲಾ ಅಭಿನಯಿಸಲಿದ್ದಾರೆ ಎಂಬುದೆಲ್ಲಾ ಪಕ್ಕಾ ಆಗಿತ್ತು. ಆದರೆ ಇದೀಗ ನಿರ್ದೇಶಕ ನಂದಕಿಶೋರ್ ಸಿನಿಮಾದಿಂದ ಹೊರನಡೆದಿದ್ದಾರೆ ಎನ್ನಲಾಗಿತ್ತು. ‘ಈ ಸಿನಿಮಾದಿಂದ ನಿರ್ದೇಶಕ ನಂದಕಿಶೋರ್ ರನ್ನು ಹೊರಹಾಕಲಾಗಿದೆ ಎನ್ನುವ ಸುದ್ದಿಗಳೆಲ್ಲಾ ಆಧಾರ ರಹಿತ. ದುಬಾರಿಯನ್ನು ನಂದಕಿಶೋರ್ ಅವರೇ ನಿರ್ದೇಶಿಸಲಿದ್ದಾರೆ. ಸಿನಿಮಾದ ಹೆಚ್ಚಿನ ಭಾಗ ವಿದೇಶದಲ್ಲಿ ಚಿತ್ರೀಕರಣವಾಗಬೇಕಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದು ಅಸಾಧ್ಯ. ಹೀಗಾಗಿ ಸಿನಿಮಾವನ್ನೇ ಕೆಲವು ದಿನಗಳ ಮಟ್ಟಿಗೆ ಮುಂದೂಡಿದ್ದೇವೆ’ ಎಂದು ಉದಯ್ ಕೆ ಮೆಹ್ತಾ ಮಾಹಿತಿ ನೀಡಿದ್ದಾರೆ.