ಮಕ್ಕಳ ಸಹಕಾರ ಮಳಿಗೆಗೆ ಡಿವಾಯ್ಎಸ್ಪಿ ಶಾಂತವೀರ ಚಾಲನೆ
ಲೋಕದರ್ಶನ ವರದಿ,
ಜಮಖಂಡಿ 19: ಸರ್ಕಾ ರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಖಾಸಗಿ ಶಾಲೆಯ ಮಕ್ಕಳಿಗಿಂತ ಉತ್ತಮ ಜ್ಞಾನವನ್ನು ಹೊಂದಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳೇ ವಿವಿಧ ಇಲಾಖೆಯಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಡಿ.ವಾಯ್.ಎಸ್.ಪಿ ಶಾಂತವೀರ ಹೇಳಿದರು.
ನಗರದ ಸರ್ಕಾರಿ ಕನ್ನಡ ಮಾದರಿ ಶಾಲೆ ನಂ 1 (ಎಂ.ಪಿ.ಎಸ್)ರಲ್ಲಿ ಏರ್ಪಡಿಸಿದ ಮಕ್ಕಳ ಸಹಕಾರ ಮಳಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕ ಕುಲಕರ್ಣಿ ಅವರು ಮಾತನಾಡಿ, ಶಾಲೆಯಲ್ಲಿ ವಿನೂತನ ಪ್ರಯೋಗಗಳನ್ನು ಮಾಡಿ ಶಾಲಾ ಮಕ್ಕಳಲ್ಲಿ ಆಸಕ್ತಿ ಉತ್ಸಾಹ ಹೆಚ್ಚಿಸುವುದರ ಜೊತೆಗೆ ಶಾಲೆಯನ್ನು ಅಭಿವೃದ್ದಿ ಪಡಿಸುತ್ತಿರುವದು ಹೆಮ್ಮೆಯ ಸಂಗತಿ ಎಂದರು.
ಮಕ್ಕಳಿಗೆ ಕಲಿಕಾ ಸಾಮಗ್ರಿಗಳು ಬೇಕಾದರೆ ಪುಸ್ತಕ ಮಳಿಗೆಗಳಿಗೆ ಹೋಗಬೇಕಾದ ಅನಿವಾರ್ಯತೆ ಇತ್ತು. ಅದನ್ನು ಮನಗಂಡು ಶಾಲಾ ಶಿಕ್ಷಕವೃಂದ ತಮ್ಮ ಸ್ವಂತ ಹಣವನ್ನು ವಂತಿಗೆ ರೂಪದಲ್ಲಿ ಸಂಗ್ರಹಿಸಿ ಮಕ್ಕಳಿಗೆ ಬೇಕಾಗುವ ನೋಟ್ ಬುಕ್ ಪೆನ್ನು ಸೇರಿದಂತೆ ವಿವಿಧ ಕಲಿಕಾ ಸಾಮಗ್ರಿಗಳು ಶಾಲೆಯಲ್ಲಿಯೇ ದೊರೆಯಬೇಕು ಎಂಬುವುದನ್ನು ಯೋಚಿಸಿ ಈ ಸಹಕಾರ ಮಳಿಗೆಯನ್ನು ಪ್ರಾರಂಭಿಸಿ ಮಕ್ಕಳ ಸಮಯ ಉಳಿಕೆ, ವ್ಯವಹಾರಿಕ ಜ್ಞಾನ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಸಾಮಗ್ರಿ ದೊರೆಯುವಂತೆ ಮಾಡಿರುವದು ಸಂತೋಷದ ಸಂಗತಿ ಎಂದರು.
ಬಿ,ಆರ್,ಪಿ ಶಿವಪ್ರಸಾದ ಯಾದವಾಡ. ಹಿಂದಿನ ಸಿ.ಆರ್.ಪಿ ಶಿಕ್ಷಕ ಪುಂಡಲೀಕ ಅಜ್ಜನಕಿ ಮಾತನಾಡಿದರು.
ವೇದಿಕೆಯಲ್ಲಿ ಎಸ್,ಡಿ,ಎಮ್,ಸಿ ಅಧ್ಯಕ್ಷ ಮಹ್ಮದ ಆಶ್ರಪಲಿ ಖಾದ್ರಿ, ಪ್ರಭಾರಿ ಮುಖ್ಯಗುರುಮಾತೆ ಎಲ್,ಎಸ್, ಮೋಕಾಶಿ, ಶಾಲಾ ಸಲಹಾ ಸಮಿತಿ ಸದಸ್ಯ ಪತ್ರಕರ್ತ ಶಿವಾನಂದ ಕೊಣ್ಣೂರ ಸೇರಿದಂತೆ ಅನೇಕರು ಇದ್ದರು. ಮುಖ್ಯ ಶಿಕ್ಷಕ ನಾರಾಯಣ ಕುಲಕರ್ಣಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಪಿ,ಆರ್, ಜಕಾತಿ ನಿರೂಪಿಸಿದರು. ಶಿಕ್ಷಕಿ ಎಸ್,ಎಸ್, ಆಲೂರ ವಂದಿಸಿದರು.