ಬಳ್ಳಾರಿ

ಖಡ್ಗದ ನೋವಿಗಿಂತ ಮಾತಿನ ನೋವು ಭಯಾನಕ: ಡಾ. ಎ.ತಿಮ್ಮನಗೌಡ

ಖಡ್ಗದ ನೋವಿಗಿಂತ ಮಾತಿನ ನೋವು ಭಯಾನಕ: ಡಾ. ಎ.ತಿಮ್ಮನಗೌಡ

ಬಳ್ಳಾರಿ 28: ಮಾತೇ ಮಾಣಿಕ್ಯ, ಮಾತಿನಿಂದ ಸ್ನೇಹ, ಮಾತಿನಿಂದ ದ್ವೇಷ. ಮಾತಿಲ್ಲದ ಮಾನವ ಸಮಾಜವನ್ನು ಊಹಿಸಲೂ ಸಾಧ್ಯವಿಲ್ಲ. ಶರಣರು ಮಾತಿಗೆ ಮೌಲ್ಯವನ್ನು ತಂದುಕೊಟ್ಟರು. ಮೃದು ವಚನವೇ ಸಕಲ ಜಪ, ಸಕಲ ತಪಗಳೆಂದು ರಾವ್ ಬಹದ್ದೂರು ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಎ.ತಿಮ್ಮನಗೌಡ ನುಡಿದರು. 

ಬಳ್ಳಾರಿಯ ವಿದ್ಯಾನಗರದ ಕರಿಬಸವೇಶ್ವರ ಕೃಪದಲ್ಲಿ ಜರುಗಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ 249 ಮಹಾಮನೆ ಲಿಂಗೈಕ್ಯ ಸಂಗನಕಲ್ಲು ದೊಡ್ಡ ಶರಣಪ್ಪ ಹಂಪಮ್ಮ ದತ್ತಿ ಕಾರ್ಯಕ್ರಮದಲ್ಲಿ "ಮಾತೆಂಬುದು ಜ್ಯೋತಿರ್ಲಿಂಗ" ಎಂಬ ವಿಷಯ ಬಗ್ಗೆ ಉಪನ್ಯಾಸ ನೀಡುತ್ತಾ, ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಮುಂತಾದ ಶರಣರೆಲ್ಲರೂ ಮಾತಿಗೆ ಮಹತ್ವ ಸ್ಥಾನ ನೀಡುವ ಮೂಲಕ ಕಲ್ಯಾಣ ಸಮಾಜ ನಿರ್ಮಾಣ ಮಾಡಿದರು. ಮಾತೇ ಮಾಣಿಕ್ಯ, ಅಯ್ಯಾ ಎಂದೆಡೆ ಸ್ವರ್ಗ. ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಹೌದೆನ್ನಬೇಕು ಎಂಬ ಮಾತುಗಳಿಂದ ಪಾವಿತ್ರತೆ ತಂದುಕೊಟ್ಟರು. ಆಡುವ ಮಾತು, ಹರಿತವಾಗಿದ್ದರೆ ಅದು ಖಡ್ಗದ ಗಾಯಕ್ಕಿಂತ ಆಳವಾದ ಮತ್ತು ಹರಿತವಾದ ಭಯಾನಕ ನೋವನ್ನುಂಟು ಮಾಡುತ್ತದೆ ಎಂದರು. 

ಕಾರ್ಯಕ್ರಮದಲ್ಲಿ ನಂದ ವಸತಿ ಶಾಲೆಯ ಅಧ್ಯಕ್ಷರಾದ ಬಿ.ಗಾಂಧಿ ಅವರು ಅತಿಥಿಗಳಾಗಿ ಪಾಲ್ಗೊಂಡು ಮಾತಿನಿಂದ ಸುಂದರ, ಸುಖ ಸಮಾಜ ನಿರ್ಮಿಸಬಹುದು. ಅಂತೆಯೇ ಕ್ರೂರವಾದ ದ್ವೇಷದಿಂದ ಕೂಡಿದ ಭಯಾನಕ ಸಮಾಜವನ್ನು ನಿರ್ಮಿಸಬಹುದು. ಮಾತು ಮನಸ್ಸನ್ನು ಅರಳಿಸುವಂತಿರಬೇಕು, ಕೆರಳಿಸುವಂತಿರಬಾರದು ಎಂದರು. ಅಧ್ಯಕ್ಷತೆಯನ್ನು ಸಂಡೂರಿನ ನಿವೃತ್ತ ಮುಖ್ಯ ಗುರುಗಳಾದ ಎನ್.ವೀರಣ್ಣನವರು ವಹಿಸಿದ್ದರು. ಕುಮಾರಿ ಸಿಂಚನ, ವಿನಾಯಕ, ಅಮೋಘ ಪ್ರಾರ್ಥನೆ ಮಾಡಿದರು. ಶ್ರೀಮತಿ ವಿದ್ಯಾವತಿ ಬಿ. ವೀರೇಶ್ ರವರು ಭಕ್ತಿಸೇವೆಯನ್ನು ವಹಿಸಿಕೊಂಡಿದ್ದರು. ಪರಿಷತ್ತಿನ ಅಧ್ಯಕ್ಷರಾದ ಕೆ.ಬಿ.ಸಿದ್ದಲಿಂಗಪ್ಪ ದತ್ತಿ ದಾತೃಗಳನ್ನು ಪರಿಚಿಯಿಸಿ ಶರಣ ಸಮರ್ಪಣೆ ಮಾಡಿದರು. ಡಾ. ಎ.ಎನ್.ಸಿದ್ದೇಶ್ವರಿ ಸ್ವಾಗತ ಕೋರಿ, ಕಾರ್ಯಕ್ರಮ ನಿರ್ವಹಣೆ ಮಾಡಿದರು. 

ಸಭೆಯಲ್ಲಿ ಡಾ. ವೆಂಕಟಯ್ಯ ಅಪ್ಪಗೆರೆ, ಗಂಗಾಧರ ಪತ್ತಾರ, ಡಾ. ತಿಪ್ಪೇರುದ್ರ, ಡಾ. ಕೊಟ್ರೇಶ್, ಶ್ಯಾಮಣ್ಣ, ಚಾಂದ್‍ಭಾಷ ಮುಂತಾದವರು ಉಪಸ್ಥಿತರಿದ್ದರು. ದಾಸೋಹದೊಂದಿಗೆ ಕಾರ್ಯಕ್ರಮ ಮಂಗಲವಾಯಿತು.

ಸುದ್ದಿ ಓದಿ