ಕುಟುಂಬದ ಸದಸ್ಯರು ಗರ್ಭಿಣಿಯ ಆರೈಕೆಗೆ ಆದ್ಯತೆ ನೀಡಿ ಡಿಹೆಚ್‌ಒ ಡಾ.ವೈ.ರಮೇಶಬಾಬು ಸಲಹೆ
ಬಳ್ಳಾರಿ,ಸೆ.06: ಗರ್ಭಿಣಿಯನ್ನು ಕುಟುಂಬದ ಸದಸ್ಯರು ಮನೆಯ ಮಗಳಂತೆ ಕಾಳಜಿ ವಹಿಸಬೇಕು. ಹೆರಿಗೆಯನ್ನು ಆಸ್ಪತ್ರೆಯಲ್ಲಿ ಮಾಡಿಸುವ ಮೂಲಕ ತಾಯಿ ಮಗುವಿನ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶಬಾಬು ಅವರು ಸೂಚಿಸಿದರು.
ಅವರು, ಸೋಮವಾರದಂದು ಕ್ಷೇತ್ರ ಭೇಟಿಯ ವೇಳೆ ಕುರುಗೋಡು ತಾಲೂಕಿನ ಕೊಳಗಲ್ಲು ಗ್ರಾಮದ ಮನೆ ಭೇಟಿ ನೀಡಿದ ಸಂದರ್ಭದಲ್ಲಿ ಗಂಡಾಂತರ ಗರ್ಭಿಣಿ ಇರುವ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು ಕುಟುಂಬದ ಸದಸ್ಯರಿಗೆ ತಿಳಿಸುವ ಜೊತೆಗೆ, ಸಾಮಾನ್ಯವಾಗಿ 18 ವರ್ಷ ವಯಸ್ಸಿನ ನಂತರ ಮದುವೆಯನ್ನು ಹೆಣ್ಣು ಮಗಳಿಗೆ ಮಾಡಿಸಿಬೇಕು. ಗರ್ಭಿಣಿಯಂದು ಗೊತ್ತಾದ ಕೂಡಲೆ ಇಲಾಖೆಯಲ್ಲಿ ನೊಂದಣಿ ಮಾಡಿಸಿ ತಾಯಿ ಕಾರ್ಡ್ ಪಡೆಯಿರಿ ನಿರಂತರ ಪರೀಕ್ಷೆ ಮಾಡಿಸಿ ಎಂದು ತಿಳಿಸಿದರು.
ಪ್ರತಿದಿನ ಪೌಷ್ಟಿಕ ಆಹಾರ, ತರಕಾರಿ, ಹಸಿರು ತಪ್ಪಲು ಪಲ್ಯ, ಬೇಳೆಕಾಳು, ಮೊಳಕೆ ಕಾಳು, ಹಾಗೂ ಇಲಾಖೆಯಿಂದ ನೀಡುವ ಕಬ್ಬಿಣಾಂಶ ಮಾತ್ರೆ ಸೇವಿಸುವಂತೆ ಸೂಚಿಸಿದರಲ್ಲದೇ, ತಾಯಿಯ ಆರೋಗ್ಯದ ಪರೀಕ್ಷೆ ಕೈಗೊಂಡಾಗ ಕಂಡುಬರುವ ಆರೋಗ್ಯದ ಸಮಸ್ಯೆಗಳಿಗೆ ಸೂಕ್ತ ಆರೈಕೆ ನೀಡಲು ಸಾಧ್ಯವಾಗುತ್ತದೆ ಎಂದರು.
ಗಂಡಾಂತರ ಗರ್ಭಿಣಿಯೆಂದು ನಿರ್ಧರಿಸುವ ಅಂಶಗಳಾದ 18 ವರ್ಷಕ್ಕಿಂತ ಮೊದಲು ಅಥವಾ 30 ವರ್ಷ ವಯಸ್ಸಿನ ನಂತರ ಗರ್ಭಿಣಿಯಾದಲ್ಲಿ, ರಕ್ತದಲ್ಲಿ ಕಬ್ಬಿಣಾಂಶ 9 ಕ್ಕಿಂತ ಕಡಿಮೆ ಇದ್ದಲ್ಲಿ, ಎತ್ತರ 142 ಸೆಂ.ಮೀ. ಕಡಿಮೆ ಇದ್ದಲ್ಲಿ, ರಕ್ತದೊತ್ತಡ 140/90 ಗಿಂತ ಹೆಚ್ಚು ಇದ್ದಲ್ಲಿ, ಅವಳಿ-ಜವಳಿ ಗರ್ಭಿಣಿ ಇದ್ದಲ್ಲಿ, ಮೊದಲ ಹೆರಿಗೆ ಶಸ್ತ್ರಚಿಕಿತ್ಸೆ ಮೂಲಕವಾದಲ್ಲಿ, ಹೆಚ್‌ಐವಿ, ಹೆಚ್‌ಬಿಎಸ್‌ಎಸಿಜಿ, ಮುರ್ಛೆರೋಗ, ಥೈರಾಯ್ಡ್, ಹೈಪೊಥೈರಾಯ್ಡ್ , ರಕ್ತ ಸಂಬಂಧಿತ ಖಾಯಿಲೆಗಳಿದ್ದಲ್ಲಿ, ಗರ್ಭಕೋಶದ ಬೆಳವಣಿಯ ತೊಂದರೆಯಿದ್ದಲ್ಲಿ, ಸ್ಕ್ಯಾನಿಂಗ್‌ನಲ್ಲಿ ಮಗು ಅಡ್ಡಲಾಗಿ ಇರುವದು ಕಂಡುಬಂದಲ್ಲಿ, ಮಾಸದ ಸ್ಥಳದ ಅಡಚಣೆ ( ಪ್ಲಸೇಂಟಾ ಪ್ರಿವಿಯಾ ) ಮುಂತಾದ ತೊಂದರೆಗಳು ಇರುವವರು ದಯವಿಟ್ಟು ವೈದ್ಯರ ನಿರ್ದೇಶನ, ಮಾರ್ಗದರ್ಶನ, ಪಡೆದು ಸ್ಥಳಿಯ ವೈದ್ಯಕೀಯ ಸಿಬ್ಬಂದಿಯವರ ಸಲಹೆಯಂತೆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಬೇಕು ಎಂದು ತಿಳಿಸಿದರು.
ವೈದ್ಯಾಧಿಕಾರಿ ಡಾ.ದಿವ್ಯಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ, ಸಿಹೆಚ್‌ಒ, ಎರಿ್ರಸ್ವಾಮಿ ಸೇರಿದಂತೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ತಾಯಂದಿರು, ಗ್ರಾಮಸ್ಥರು, ಉಪಸ್ಥಿತರಿದ್ದರು.