ಗ್ರಾಮದ ಪ್ರತಿ ಮನೆಗೂ ಭೇಟಿ ನೀಡಿ ಸಮಸ್ಯೆ ಆಲಿಸಿದ ಡಿಸಿ ಮಾಲಪಾಟಿ
ಬಳ್ಳಾರಿ 16: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ನಿಮಿತ್ತ ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ತಾಲೂಕಿನ ಶಿಡಿಗಿನಮೊಳ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದರು.ಗ್ರಾಮಕ್ಕೆ ಭೇಟಿ ನೀಡಿದ ಡಿಸಿ ಅವರಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದರು.
ಗ್ರಾಮದಲ್ಲಿರುವ ಪ್ರತಿ ಮನೆ-ಮನೆಗೂ ಭೇಟಿ ನೀಡಿದ ಡಿಸಿ ಮಾಲಪಾಟಿ ಅವರು ಜನರೊಂದಿಗೆ ಬೆರೆತರು ಮತ್ತು ಅವರ ಸಮಸ್ಯೆಗಳನ್ನು ಆಲಿಸಿದರು ಮತ್ತು ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸುವುದರ ಮೂಲಕ ಗಮನಸೆಳೆದರು.ಡಿಸಿ ಅವರಿಗೆ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ್ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಸಾಥ್ ನೀಡಿದರು.
ಅಧಿಕಾರಿಗಳ ತಂಡ ಕಟ್ಟಿಕೊಂಡು ಇಡೀ ಗ್ರಾಮವನ್ನು ಕಾಲ್ನಡಿಗೆಯಲ್ಲಿ ಸುತ್ತಾಡಿದ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರಿಗೆ ಗ್ರಾಮದ ರಸ್ತೆ,ಚರಂಡಿ,ಸ್ವಚ್ಛತೆ, ಆರೋಗ್ಯ,ಶಿಕ್ಷಣ ಸೇರಿದಂತೆ ಅನೇಕ ಸಮಸ್ಯೆಗಳು ದರ್ಶನವಾದವು.
ಗ್ರಾಮಸ್ಥರು ಸಹ ಆಶ್ರಯ ಮನೆಗಳ ಸಮಸ್ಯೆ, ಕುಡಿಯುವ ನೀರಿನ ತೊಂದರೆ, ಚರಂಡಿ ವ್ಯವಸ್ಥೆ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
600 ರಿಂದ 628 ಸರ್ವೆ ನಂಬರ್ ವ್ಯಾಪ್ತಿಯಲ್ಲಿ ಪುನರ್ ಸರ್ವೆ ಮಾಡಿ, ಪೋಡಿ, ಹದ್ದುಬಸ್ತು ಮತ್ತು ಗಡಿಯ ಸಮಸ್ಯೆ ಬಗೆಹರಿಸಿದರೆ 350 ರಿಂದ 400 ಎಕರೆ ಜಮೀನಿನ 150 ರಿಂದ 200 ಜನ ರೈತರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದರು. ಇದೇ ಸರ್ವೆ ನಂಬರ್ ವ್ಯಾಪ್ತಿಯಲ್ಲಿ ಹಾದು ಹೋಗುವ ಬಿ.ಡಿ.ಹಳ್ಳಿ ರಸ್ತೆ ಇದುವರೆಗೂ ಅಭಿವೃದ್ಧಿಯನ್ನು ಕಾಣದೆ, ಕೆಸರು ಗದ್ದೆಯಂತೆ ನಿರ್ಮಾಣವಾಗಿದ್ದು, ಇದನ್ನು ಸರಿಪಡಿಸುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಒಕ್ಕರೋಲಿನಿಂದ ಮನವಿ ಸಲ್ಲಿಸಿದರು.
ಇದಕ್ಕುತ್ತರಿಸಿದ ಡಿಸಿ ಮಾಲಪಾಟಿ ಅವರು 400 ಎಕರೆ ಜಮೀನಿನ ಪುನರ್ ಸರ್ವೆ ಮಾಡಿಸಲಾಗುವುದು ಮತ್ತು ಪೋಡಿ, ಹದ್ದುಬಸ್ತು ಮತ್ತು ಗಡಿಯ ಸಮಸ್ಯೆಯನ್ನು ಶೀಘ್ರ ಪರಿಹರಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಅವರು ಅಭಯ ನೀಡಿದರು.
ತೆಲುಗು ಭಾಷೆಯಲ್ಲಿಯೇ ಮಾತಾಡಿದ ಡಿಸಿ: ಆಂಧ್ರದ ಗಡಿಗೆ ಶಿಡಿಗಿನಮೋಳ ಗ್ರಾಮ ಹೊಂದಿಕೊಂಡಿರುವ ಕಾರಣ, ಗ್ರಾಮದಲ್ಲಿ ಜನರು ಸಂವಹನದ ಸಂದರ್ಭದಲ್ಲಿ ಹೆಚ್ಚಾಗಿ ತೆಲುಗು ಭಾಷೆ ಬಳಸುತ್ತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ತಾವು ಕೂಡ ತೆಲುಗು ಭಾಷೆಯಲ್ಲಿಯೇ ಮಾತನಾಡುವ ಮೂಲಕ ಅವರ ಸಮಸ್ಯೆಗಳಿಗೆ ಧ್ವನಿಯಾಗುವ ಕೆಲಸ ಮಾಡಿದರು. ತಮ್ಮದೇ ಭಾಷೆಯಲ್ಲಿ ತಮ್ಮೆಲ್ಲ ಸಮಸ್ಯೆಗಳನ್ನು ಆಲಿಸುವ ಜಿಲ್ಲಾಧಿಕಾರಿಯವರೊಂದಿಗೆ ಗ್ರಾಮದ ಜನರು ಸಮಸ್ಯೆ ಹೇಳಿಕೊಳ್ಳಲು ಮುಗಿಬಿದ್ದ ದೃಶ್ಯಗಳು ಕಂಡು ಬಂದವು.
ಜಿಲ್ಲಾಧಿಕಾರಿ ಮಾಲಪಾಟಿ ಅವರು ಅತ್ಯಂತ ತಾಳ್ಮೆ ಮತ್ತು ಸಂಯಮದಿಂದ ಜನರ ಸಮಸ್ಯೆಗಳನ್ನು ಆಲಿಸಿದ್ದು ಕಂಡುಬಂದಿತು.
ಸೇತುವೆ ನಿರ್ಮಾಣಕ್ಕೆ ಜನರು ಒಲವು: ಪಂಪ್ ಹೌಸ್ ರಸ್ತೆಯಲ್ಲಿ ಜನರ ಓಡಾಟಕ್ಕೆ ಸರಿಯಾದ ಸೇತುವೆಯಿಲ್ಲದೆ ಜನರು ದಿನನಿತ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದು, ಮಹಿಳೆಯರು ಜಮೀನುಗಳಿಗೆ ತೆರಳಲು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ಹಲವು ದಶಕಗಳಿಂದ ಹೀಗೆ ಇದ್ದು, ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಗ್ರಾಮದ ಜನರು ಡಿಸಿ ಅವರಲ್ಲಿ ಮನವಿ ಮಾಡಿದರು.
ಇದನ್ನು ಆಲಿಸಿದ ಡಿಸಿ ಮಾಲಪಾಟಿ ಅವರು ಪಂಪ್ಹೌಸ್ ರಸ್ತೆಗೆ ಶಾಸಕ ಬಿ.ನಾಗೇಂದ್ರ ಹಾಗೂ ಅಧಿಕಾರಿಗಳೊಂದಿಗೆ ತೆರಳಿ ಪರೀಶೀಲಿಸಿದರು.
ಈ ಸಂದರ್ಭದಲ್ಲಿ ಶಾಸಕ ಬಿ.ನಾಗೇಂದ್ರ ಅವರು ಕೂಡ ಇಲ್ಲಿ ಸೇತುವೆ ನಿರ್ಮಾಣ ಮಾಡಿದರೆ ಸಾವಿರಾರು ಜನ ರೈತರಿಗೆ ದಿನನಿತ್ಯ ಓಡಾಡಲು ಅನುಕೂಲವಾಗುತ್ತದೆ ಎಂದು ವಾಸ್ತವದ ಪರಿಸ್ಥಿತಿ ವಿವರಿಸಿದರು.
ಡಿಸಿ ಅವರು ಇದನ್ನು ಆಲಿಸಿ ಗ್ರಾಮಸ್ಥರು ಹಾಗೂ ಸ್ಥಳೀಯ ಶಾಸಕರು ಹೇಳಿರುವುದು ಸರಿಯಾಗಿದೆ. ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡು ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಯಾವುದಾದರೂ ಅನುದಾನದ ಅಡಿ ಸೇತುವೆ ನಿರ್ಮಿಸಲಾಗುವುದು ಎಂದರು.
ಗ್ರಾಮಸ್ಥರು ತಮಗೆ ಸರಿಯಾದ ಮನೆಯಿಲ್ಲ, ಚರಂಡಿ, ನೀರಿನ ಸಮಸ್ಯೆ ಹೆಚ್ಚಾಗಿದ್ದು ಇದರ ಕುರಿತು ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು ಮತ್ತು ಸಮರ್ಕ ಚರಂಡಿ ವ್ಯವಸ್ಥೆ ಮಾಡಿಕೊಡಬೇಕು. ಗ್ರಾಮದ ಮುಖ್ಯರಸ್ತೆಗಳಷ್ಟೇ ಅಲ್ಲದೇ ಒಳರಸ್ತೆಗಳಲ್ಲಿಯೂ ಸಿಸಿ ರಸ್ತೆ ಮಾಡಬೇಕು ಎಂದರು.
ಮುಖ್ಯ ರಸ್ತೆಗಳಲ್ಲಿ ನಿರ್ಮಿಸಲಾದ ಸಿಸಿ ರಸ್ತೆಯ ಬದಿಗೆ ಚರಂಡಿ ವ್ಯವಸ್ಥೆ ಇರದ ಕಾರಣ ಮಳೆ ಬಂದ ಸಂದರ್ಭದಲ್ಲಿ ನೀರೆಲ್ಲ ಹರಿದು ಕೆಳಹಂತದ ಮನೆಗಳಿಗೆ ನುಗ್ಗುತ್ತಿವೆ;ಇದರಿಂದ ಸಮಸ್ಯೆಯಾಗುತ್ತಿದೆ ಎಂದರು. ಡಿಸಿ ಅವರು ಗ್ರಾಮಸ್ಥರ ಸಮಸ್ಯೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸಿದರು.
ಗ್ರಾಮದಲ್ಲಿ ಪ್ರಮುಖವಾಗಿ ಮಾಶಾಸನ, ವಿಧವಾ ವೇತನ ಸೇರಿದಂತೆ ಹಲವು ವಿಷಯಗಳ ಕುರಿತು ಜಿಲ್ಲಾಧಿಕಾರಿಗಳು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿದ್ದು, ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ಕೆಲಸ ಮಾಡಿದರು.
*ಗಮನಸೆಳೆದ ಸೀಮಂತ ಕಾರ್ಯಕ್ರಮ: ಗ್ರಾಮದ ಅಂಗನವಾಡಿ ಕೇಂದ್ರ-2ರಲ್ಲಿ ಫೋಷಣ ಅಭಿಯಾನದ ಅಡಿ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಡಿಸಿ ಮಾಲಪಾಟಿ ಮತ್ತು ಶಾಸಕ ಬಿ.ನಾಗೇಂದ್ರ ಅವರು ಜೊತೆಗೂಡಿ ತೆರಳಿ ಗರ್ಭೀಣಿ ಮಹಿಳೆಯರಿಗೆ ಅಕ್ಷತೆ ಹಾಕುವುದರ ಮೂಲಕ ಶುಭಕೋರಿದರು.
ಅಂಗನವಾಡಿ ಕೇಂದ್ರ 1 ಮತ್ತು ಕೇಂದ್ರ 2ರಲ್ಲಿ ಮಕ್ಕಳಿಗೆ ಹಾಗೂ ಗರ್ಭೀಣಿಯರಿಗೆ ನೀಡಲು ಉದ್ದೇಶಿಸಿರುವ ಪೌಷ್ಠಿಕ ಆಹಾರವನ್ನು ಅಂಗನವಾಡಿ ಕಾರ್ಯಕರ್ತೆಯರು ಸರಿಯಾಗಿ ನೀಡುತ್ತಿಲ್ಲ ಎಂಬುದು ಸೇರಿದಂತೆ ಅಂಗನವಾಡಿ ಸಂಬಂಧಿತ ವಿವಿಧ ದೂರುಗಳನ್ನು ಡಿಸಿ ಮಾಲಪಾಟಿ ಅವರಿಗೆ ಗ್ರಾಮಸ್ಥರು ಹೇಳಿದರು.
ಸ್ಥಳದಲ್ಲಿಯೇ ಉಪಸ್ಥಿತರಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ ಅವರಿಗೆ ಕೂಡಲೇ ಇಬ್ಬರು ಅಂಗನವಾಡಿ ಕಾರ್ಯಕರ್ತೆಯರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ, ಉತ್ತರ ಬಂದ ನಂತರ ಅವರ ಮೇಲೆ ಕ್ರಮಕೈಗೊಂಡು ಹೊಸದಾಗಿ ಬೇರೆ ಅಂಗನವಾಡಿ ಕಾರ್ಯಕರ್ತೆಯರನ್ನು ಆಯ್ಕೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯಕ್ಕೆ ಗ್ರಾಮಾಂತರ ಶಾಕಸ ಬಿ.ನಾಗೇಂದ್ರ ಸಾಥ್ ನೀಡಿದ್ದು, ಜನರ ಪರವಾಗಿ ಹಲವು ಸಮಸ್ಯೆಗಳನ್ನು ಡಿಸಿ ಅವರ ಗಮನಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಿಲ್ಲಾಧಿಕಾರಿ ಅವರೊಂದಿಗೆ ಹೆಜ್ಜೆ ಹಾಕಿದರು.
ನಿಮ್ಮೂರಿನ ಸಮಸ್ಯೆಗಳೇನೇ ಇದ್ದರೂ ನನ್ನ ಕಚೇರಿ ತೆರೆದಿರುತ್ತದೆ;ಸಮಸ್ಯೆಗಳಿದ್ದಲ್ಲಿ ಡಿಸಿ ಕಚೇರಿಗೆ ಬಂದು ಕಾಣುವಂತೆ ಜನರಿಗೆ ಡಿಸಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.