ಬಳ್ಳಾರಿ

ಸಚಿವ ಈಶ್ವರಪ್ಪ ವಿರುದ್ಧ ಸುಮೊಟೊ ಕೇಸ್ ಬುಕ್ ಮಾಡಿ: ಡಿಕೆಶಿ ಆಗ್ರಹ

ಸಚಿವ ಈಶ್ವರಪ್ಪ ವಿರುದ್ಧ ಸುಮೊಟೊ ಕೇಸ್ ಬುಕ್ ಮಾಡಿ: ಡಿಕೆಶಿ ಆಗ್ರಹ

ಬಳ್ಳಾರಿ ಆಗುಸ್ಟ್ 07: ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ‌.ಎಸ್.ಈಶ್ವರಪ್ಪನವರು ಈ ದೇಶದಲ್ಲಿ ಶಾಂತಿ ಕದಡುವ ಭಾಷಣ ಮಾಡಿದ್ದಾರೆ. ಹೀಗಾಗಿ, ಅವರ ವಿರುದ್ಧ ರಾಜ್ಯ ಪೊಲೀಸ್ ಇಲಾಖೆಯು ಸುಮೊಟೊ ಕೇಸ್ ಬುಕ್ ಮಾಡ್ಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಜಿಲ್ಲೆಯ ಖಾಸಗಿ ಹೊಟೇಲ್ನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‌ಬಾಬ್ರಿ ಮಸೀದಿ ಬಿಟ್ಟರೆ ಬೇರೆ ಯಾವ ಹಿಂದೂ- ಮುಸ್ಲಿಂ ದೇಗುಲಗಳನ್ನು‌ ಓಲೈಕೆ ಮಾಡಿಕೊಂಡು ಶಾಂತಿ ಕದಡುವ ಭಾಷಣ ಮಾಡಬಾರದು ಎಂದು ಸುಪ್ರೀಂಕೋರ್ಟ್ ಆದೇಶವಿದ್ದರೂ ಕೂಡ ಸಚಿವ ಈಶ್ವರಪ್ಪನವರು ಅಯೋಧ್ಯೆ ಆಯಿತು,‌ ಮಥುರಾ ಮತ್ತು ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಬರುವ ಮಸೀದಿಗಳನ್ನು ನೆಲಸಮಗೊಳಿಸುವ ಅರ್ಥದಲ್ಲಿ ಭಾಷಣ ಮಾಡಿ, ಈ ದೇಶದಲ್ಲಿನ ಹಿಂದೂ-ಮುಸ್ಲಿಂಮರಲ್ಲಿನ ಶಾಂತಿ ಮತ್ತು ಸಾಮರಸ್ಯದ ಭಾವನೆಯನ್ನು ಕದಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಹೀಗಾಗಿ, ಅವರ ವಿರುದ್ಧ ರಾಜ್ಯ ಪೊಲೀಸ್ ಇಲಾಖೆಯು ಸುಮೊಟೊ ಕೇಸ್ ಹಾಕಬೇಕು ಎಂದರು.

ಇನ್ನು ಸಿಎಂ ಬಿಎಸ್ವೈ ಅವರು ಸಚಿವ ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಈ ಸಂಬಂಧ ಪ್ರಧಾನಿ ಮೋದಿಯವರೂ ಕೂಡ ಮಧ್ಯೆ ಪ್ರವೇಶಿಸಬೇಕೆಂದು ಒತ್ತಾಯಿಸಿದರು. ಕಳೆದ ಮಾರ್ಚ್ ತಿಂಗಳಿಂದ ರಾಜ್ಯ ಹಾಗೂ ರಾಷ್ಟ್ರ ಬಹಳ ನೋವಿನಿಂದ ಬಳಲುತ್ತಿದೆ. ಕೇಂದ್ರ ಸರ್ಕಾರ ಗಂಟೆ ಬಾರಿಸಿ ದೀಪ ಹಚ್ಚಿ ಎಂದು ಹೇಳಿದ ಹಾಗೆ ನಾವು ಕುಣಿದಿದ್ದು ಆಗಿದೆ. ಲಾಕ್ಡೌನ್ ಆಯಿತು, ಸೀಲ್ಡೌನ್ ಆಯಿತು, ಬ್ರೇಕ್ ಡೌನ್ ಆಯಿತು,‌ ಈ ರಾಜ್ಯದಲ್ಲಿ ಸೋಂಕಿತರ ಗೋಳಿನ ಕಥೆಯನ್ನು ಸಾಕಷ್ಟು ಸಿನಿಮಾ ತೆಗೆಯಬಹುದು ಎಂದು ಹೇಳಿದರು.

ಒಬ್ಬ ಮಾಜಿ ಸಚಿವ ಕೋವಿಡ್ ಆಸ್ಪತ್ರೆಯಲ್ಲಿ ಅಂದಾಜು 17 ಲಕ್ಷ ರೂ.‌ಬಿಲ್ ಕಟ್ಟಿದ್ದಾರೆ. ಅವರ ಹೆಸರು ನಾನು ಬಹಿರಂಗ ಪಡಿಸಲ್ಲ. ಸರ್ಕಾರ ಕೊರೊನಾ ನಿಯಂತ್ರಣದ ಹೆಸರಲ್ಲಿ ಕೊಳ್ಳೆ ಹೊಡೆಯುತ್ತಿದೆ. ಜನರನ್ನು ಒತ್ತಾಯ ಪೂರ್ವಕವಾಗಿ ಕೋವಿಡ್ ಕೇರ್ ಸೆಂಟರ್ಗೆ ಸೇರಿಸಿದ್ದೀರಿ. ಅವರ ಹೆಸರಲ್ಲಿ ಬಿಲ್ ಹಾಕಿ ಹಣ ಲೂಟಿ ಮಾಡಿದ್ದೀರಿ ಎಂದು ಡಿಕೆಶಿ ದೂರಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಶಾಸಕರಾದ ಭೀಮಾನಾಯ್ಕ, ಜೆ.ಎನ್.ಗಣೇಶ, ಡಿಸಿಸಿ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್, ಮುಖಂಡರಾದ ಅಸುಂಡಿ ನಾಗರಾಜ ಗೌಡ, ಬಿ.ವಿ.ಶಿವಯೋಗಿ ಇದ್ದರು.

ಸುದ್ದಿ ಓದಿ