ಬೈಲಹೊಂಗಲ

ಕೆನರಾ ಬ್ಯಾಂಕ್ ಅವ್ಯವಸ್ಥೆ ವಿರುದ್ಧ ಗ್ರಾಹಕರ ಪ್ರತಿಭಟನೆ

ಕೆನರಾ ಬ್ಯಾಂಕ್ ಅವ್ಯವಸ್ಥೆ ವಿರುದ್ಧ ಗ್ರಾಹಕರ ಪ್ರತಿಭಟನೆ

ಬೈಲಹೊಂಗಲ 01: ಪಟ್ಟಣದ ಮೆಟಗುಡ್ಡ ಮಳಿಗೆಯಲ್ಲಿರುವ ಕೆನರಾ ಬ್ಯಾಂಕ್ ಅವ್ಯವಸ್ಥೆ ವಿರುದ್ಧ ಗ್ರಾಹಕರು ಅಸಾಮಾಧಾನ ಹೊರ ಹಾಕಿ ಗುರುವಾರ ಪ್ರತಿಭಟನೆ ನಡೆಸಿದರು. 

ಬ್ಯಾಂಕಿಗೆ ಹಣ ಜಮೆ ಹಾಗೂ ಹಣ ತಗೆದುಕೊಳ್ಳಲು ಬಂದಿದ್ದ ಗ್ರಾಹಕರು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸರದಿ ಸಾಲಿನಲ್ಲಿ ನಿಂತು ಬೇಸರಗೊಂಡರು. ನಮ್ಮ ಹಣ ನಮಗೆ ಕೊಡಲು ಎಷ್ಟು ಹೊತ್ತು ಕಾಯಬೇಕು. ಹಣ ಜಮೆ ಮಾಡಿಕೊಳ್ಳುವಾಗ ಇರುವ ತಾಳ್ಮೆ, ಹಣ ಕೊಡುವಾಗ ಏಕೆ ಇರಲ್ಲ. ಕ್ಯಾಶಿಯರ್ ನಮ್ಮ ಹಣ ನಮಗೆ ಕೊಡುವಾಗ ಏಕೆ ಸೌಜನ್ಯಯುತವಾಗಿ ವರ್ತಿಸುವುದಿಲ್ಲ ಎಂದು ಗ್ರಾಹಕರು ಬ್ಯಾಂಕ್ ಮ್ಯಾನೇಜರ, ಸಿಬ್ಬಂದಿಯನ್ನು ಪ್ರಶ್ನಿಸಿದರು. 

ಗ್ರಾಹಕ ಮಂಜುನಾಥ ಜ್ಯೋತಿ ಮಾತನಾಡಿ, 'ಹತ್ತು ಲಕ್ಷಕ್ಕಿಂತ ಹೆಚ್ಚಿಗೆ ಹಣ ಬೇಕಾಗಿತ್ತು. ಅದಕ್ಕಾಗಿ ಬ್ಯಾಂಕಿಗೆ ಬಂದಿದ್ದೆ. ಕ್ಯಾಶಿಯರ್ ಅಷ್ಟೊಂದು ಹಣವಿಲ್ಲ ಎಂದರು. ಪಕ್ಕದಲ್ಲಿದ್ದ ಸಿಬ್ಬಂದಿ ಲಿಮಿಟ್ ಇರುವುದೇ 25 ಲಕ್ಷ ಅಂತ ಹೇಳಿದರೆ ಮತ್ತೊಬ್ಬ ಸಿಬ್ಬಂದಿ 40 ಲಕ್ಷ ಇದೆ ಎಂದರು. ಕ್ಯಾಶಿಯರ್ ಮಾತ್ರ ಅಷ್ಟೊಂದು ಹಣ ಇಲ್ಲ. ಸೈಡ್ ಬನ್ನಿ ಎನ್ನುತ್ತಾರೆ. ಹಣ ತೆಗೆದುಕೊಳ್ಳುವ ಬಗ್ಗೆ ಮಾಹಿತಿ ಕೇಳಿದರೆ ಒಬ್ಬ ಸಿಬ್ಬಂದಿ, ಮತ್ತೊಬ್ಬರಿಗೆ ಬೊಟ್ಟು ಮಾಡಿ ತೋರಿಸಿ ಗ್ರಾಹಕರನ್ನು ಅಲೆದಾಡಿಸುತ್ತಿದ್ದಾರೆ. ಮ್ಯಾನೇಜರ್ ಬಳಿ ಹೋದರೆ ಪ್ರಾದೇಶಿಕ ಭಾಷೆ ಮಾತನಾಡದ ಕಾರಣ ಯಾರೊಂದಿಗೆ ಸ್ಪಂದಿಸುತ್ತಿಲ್ಲ. ಗ್ರಾಹಕರನ್ನು ತಮಗೆ ಇಚ್ಚೆ ಬಂದಂತೆ ಕಾಯಿಸುತ್ತಾರೆ. ಹಿರಿಯ ನಾಗರಿಕರಿಕರನ್ನು ದಿನವಿಡಿ ಸತಾಯಿಸುತ್ತಿದ್ದಾರೆ. ಬಹುತೇಕ ಸಿಬ್ಬಂದಿ ಕನ್ನಡ ಭಾಷೆ ಬಿಟ್ಟು ಉಳಿದೆಲ್ಲ ಭಾಷೆ ಮಾತನಾಡುತ್ತಾರೆ. ಬ್ಯಾಂಕ್ ವ್ಯವಹಾರದ ಬಗ್ಗೆ ಕೇಳಿದರೆ ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ಉತ್ತರಿಸುತ್ತಾರೆ. ಕನ್ನಡ ಬಿಟ್ಟು ಅನ್ಯ ಭಾಷೆ ಬಾರದ ಗ್ರಾಹಕರು ಕೆನರಾ ಬ್ಯಾಂಕಿನೊಂದಿಗೆ ಹೇಗೆ ವ್ಯವಹಾರ ಇಟ್ಟುಕೊಳ್ಳಬೇಕು. ಬ್ಯಾಂಕ್ ಸ್ಟೇಟ್ ಮೆಂಟ್ ಕೊಡಲು ಮೀನಾಮೇಷ ಎನಿಸುತ್ತಾರೆ' ಎಂದು ದೂರಿದರು. 

ಗ್ರಾಹಕಿ ನಿರ್ಮಲಾ ರಾಜಗೋಳಿ ಮಾತನಾಡಿ, 'ಈ ಮೊದಲು ಸಿಡಿಕೇಟ್ ಬ್ಯಾಂಕ್ ಇದ್ದಾಗ ಗ್ರಾಹಕರೊಂದಿಗೆ ಒಳ್ಳೆಯ ಸಂಬಂಧವಿತ್ತು. ಎರಡು, ಮೂರು ಕೌಂಟರ್ ತೆಗೆದಿದ್ದರು. ಈಗ ಅದು ಕೆನರಾ ಬ್ಯಾಂಕಿನಲ್ಲಿ ಸೇರಿಸಿದ್ದರಿಂದ ಕೆನರಾ ಬ್ಯಾಂಕಿನವರಿಗೆ ಕೊಂಬು ಬಂದಂತಾಗಿದೆ. ಚಿಕ್ಕ ಮಕ್ಕಳನ್ನು ಹೊತ್ತುಕೊಂಡು ಬ್ಯಾಂಕಿಗೆ ಬಂದು ದಿನವಿಡಿ ಕಾಯಬೇಕಾಗಿದೆ. ಇದು ಪ್ರತಿ ದಿನ ನೂರಾರು ಗ್ರಾಹಕರು ಅನುಭವಿಸುವ ವೇದನೆ ಆಗಿದೆ' ಎಂದರು. 

ವಿಷಯ ತಿಳಿದು ಸ್ಥಳಕ್ಕೆ ಬಂದ ಮಾಧ್ಯಮದವರು ಗ್ರಾಹಕರ ಸಮಸ್ಯೆ ಆಲಿಸಿ ಸತ್ಯ ಸಂಗತಿಯನ್ನು ಚಿತ್ರಿಸುತ್ತಿದ್ದ ವೇಳೆ ಮ್ಯಾನೇಜರ್ ಸ್ಯೆಕ್ಯೂರಿಟಿಗೆ ತಿಳಿಸಿ ಮಾಧ್ಯಮದವರನ್ನು ತಡೆಯಲು ಯತ್ನಿಸಿದರು. ಮೂರುವರೇ ಗಂಟೆಗಳ ಕಾಲ ಹಣ ಕೊಡದೆ ಸತಾಯಿಸಿದ್ದ ಕ್ಯಾಶಿಯರ್ ಮಾಧ್ಯಮದವರು ಬಂದ ನಂತರ ಕೇವಲ ಹತ್ತು ಸೆಕೆಂಡಿನಲ್ಲಿ ಗ್ರಾಹಕರ ಹಣ ಕೊಟ್ಟು ಕಳುಹಿಸಿದರು. ಈ ಕುರಿತು ಮ್ಯಾನೇಜರ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. 


ಸುದ್ದಿ ಓದಿ