ಮುಂದಗೋಡ

ತೇವಾಂಶ ಕೊರತೆಯಿಂದ ಬೆಳೆ ಕುಂಠಿತವಾಗುವ ಸಾಧ್ಯತೆ

ತೇವಾಂಶ ಕೊರತೆಯಿಂದ ಬೆಳೆ ಕುಂಠಿತವಾಗುವ ಸಾಧ್ಯತೆ

ಆಗಾಗ ನಾಲ್ಕು ಹನಿ ಮಳೆ, ಬೆಳೆಗಳಿಗೆ ಮಳೆಯ ಅವಶ್ಯಕತೆ  

ಮುಂಡಗೋಡ 13: ತಾಲೂಕಿನಲ್ಲಿ ಬೆಳೆದ ಬೆಳೆಗಳಿಗೆ ಮಳೆಯ ಅವಶ್ಯಕತೆಯಿದ್ದು ಕಳೆದ ಕೆಲವು ದಿನಗಳಿಂದ ಬಿಸಿಲಿನ ಮಧ್ಯೆ ಆಗಾಗ ನಾಲ್ಕು ಹನಿ ಮಳೆ ಉದುರುತ್ತಿರುವುದರಿಂದ ತೇವಾಂಶದ ಕೊರತೆ ಉಂಟಾಗಿ ಬೆಳೆಗಳು ಕುಂಠಿತವಾಗುವ ಸಾಧ್ಯತೆ ಇದೆ ಎಂಬುದು ರೈತರ ಅಭಿಪ್ರಾಯವಾಗಿದೆ.  

ಭತ್ತ ಮತ್ತು ಗೋವಿನ ಜೋಳ ಎರಡೂ ಬೆಳೆಗೆ ಮಳೆಯ ಅವಶ್ಯಕತೆ ಇದೆ. ಸಾಮಾನ್ಯವಾಗಿ ಭತ್ತ ಬೆಳೆದ ಎಲ್ಲ ರೈತರು ಹೊಲಗಳಲ್ಲಿ ಎಡೆ ಕುಂಟೆ ಹೊಡೆದು ಸ್ವಚ್ಛ ಮಾಡಿ ಗೊಬ್ಬರ ನೀಡುತ್ತಿದ್ದಾರೆ. ಈ ಹಂತದಲ್ಲಿ ಭತ್ತದ ಬೆಳೆಗೆ ಮಳೆಯ ತೀರಾ ಅಗತ್ಯತೆ ಇದೆ. ಇನ್ನು ಮುಂಚಿತವಾಗಿ ಬಿತ್ತಿದ್ದ ಗೋವಿನ ಜೋಳದ ಬೆಳೆ ತೆನೆ ಬಿಡಲು ಆರಂಭಿಸಿದೆ. ತಡವಾಗಿ ಬಿತ್ತನೆ ಮಾಡಿದ ಗೋವಿನ ಜೋಳದ ಬೆಳೆ ಮಳೆಯ ಕೊರತೆಯಿಂದ ಬೀಜಗಳು ಅಲ್ಲಲ್ಲಿ ಹುಟ್ಟಲೇ ಇಲ್ಲ. ಗೋವಿನ ಜೋಳದ ಬೆಳೆಗೂ ಮಳೆ ಬೇಕಾಗಿದ್ದು ಕಷ್ಟಪಟ್ಟು ಬೆಳೆದ ಬೆಳೆಗೆ ರೈತರು ಈ ಸಮಯದಲ್ಲಿ ಮಳೆಯ ಆಗಮನಕ್ಕಾಗಿ ಕಾಯುತ್ತಿದ್ದಾರೆ.  

ಬಸವರಾಜ ಗುಂಜಾಳ, ಬಾಚಣಕಿ ರೈತ:  

ಆರಂಭದಲ್ಲಿ ಬಿತ್ತನೆಗೆ ಉತ್ತಮವಾದ ಹದ ನೀಡಿದ ಮಳೆ ಇಲ್ಲಿಯವರೆಗೆ ಚೆನ್ನಾಗಿಯೇ ಆಗಿತ್ತು. ಈಗ ಕೆಲವು ದಿನಗಳಿಂದ ಮಳೆ ಕಡಿಮೆ ಆಗಿದ್ದು ಸದ್ಯಕ್ಕೆ ಎಲ್ಲ ಬೆಳೆಗಳಿಗೆ ಮಳೆ ಬೇಕಾಗಿದೆ.  

ಎಮ್‌.ಎಸ್‌.ಕುಲಕರ್ಣಿ, ಸಹಾಯಕ ಕೃಷಿ ನಿರ್ದೇಶಕ:  

ಭತ್ತ ಮತ್ತು ಗೋವಿನ ಜೋಳ ಬೆಳವಣಿಗೆ ಹಂತದಲ್ಲಿವೆ. ರೈತರು ಕಳೆ ತೆಗೆದು ಸ್ವಚ್ಛ ಮಾಡಿ ಗೊಬ್ಬರ ನೀಡುತ್ತಿದ್ದಾರೆ. ಮಳೆ ಎಲ್ಲರಿಗೂ ಬೇಕು. ಇದೇ ರೀತಿ ಮಳೆ ಬಾರದೆ ಹೋದಲ್ಲಿ ಭತ್ತಕ್ಕೆ ಬೆಂಕಿ ರೋಗ ಕಂಡು ಬರುವ ಸಾಧ್ಯತೆ ಇದೆ. ರೈತರು ಸಾವಯವ ಗೊಬ್ಬರ ಹೆಚ್ಚು ಬಳಸಿ ಯೂರಿಯಾ ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಬೇಕು. 


ಸುದ್ದಿ ಓದಿ