ಬೆಳೆ ವಿಮೆ ಪ್ರಸ್ತಾವನೆ ತಿರಸ್ಕೃತ: ಆಕ್ಷೇಪಣೆಗೆ ಕೃಷಿ ಅಧಿಕಾರಿ ಆಹ್ವಾನ
ಮುಂಡಗೋಡ:2021-22ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದ ರೈತರುಗಳ ಪೈಕಿ ಕೆಲವು ರೈತರ ಪ್ರಸ್ತಾವನೆಗಳು ಬೆಳೆ ಸಮೀಕ್ಷೆಯೊಂದಿಗೆ ಹೊಂದಾಣಿಕೆ ಆಗದೆ ವಿಮಾ ಸಂಸ್ಥೆಯಿಂದ ತಿರಸ್ಕೃತಗೊಂಡಿವೆ. ತಿರಸ್ಕೃತಗೊಂಡ ರೈತರ ಯಾದಿಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಹಾಗೂ ವ್ಯವಸಾಯ ಸೇವಾ ಸಹಕಾರಿ ಸಂಘಗಳಲ್ಲಿ ಪ್ರದರ್ಶಿಸಲಾಗಿದೆ. ವಿಮೆ ಅರ್ಜಿಗಳು ತಿರಸ್ಕೃತಗೊಂಡ ಬಗ್ಗೆ ಸಂಬಂಧಪಟ್ಟ ರೈತರ ಆಕ್ಷೇಪಣೆ ಇದ್ದಲ್ಲಿ ಏ.15ರ ಒಳಗಾಗಿ ಸಲ್ಲಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2021-22ರ ಪಹಣಿ ಪತ್ರಿಕೆಯಲ್ಲಿ(ಆರ್.ಟಿ.ಸಿ.) ವಿಮೆಗೆ ನೋಂದಾಯಿಸಿದ ಬೆಳೆ ನಮೂದಾಗಿರಬೇಕು. ಬೆಂಬಲ ಬೆಲೆ ಪ್ರಯೋಜನ ಪಡೆದಿದ್ದಲ್ಲಿ ರಶೀದಿಯನ್ನು ಒದಗಿಸಬೇಕು. ವಿಮೆಗೆ ನೋಂದಾಯಿಸಿದ ಬೆಳೆಯ ಉತ್ಪನ್ನವನ್ನು ಎಪಿಎಂಸಿ ಮಾರುಕಟ್ಟೆಗೆ ಮಾರಾಟ ಮಾಡಿದ್ದಲ್ಲಿ ದಾಖಲೆ ಒದಗಿಸಬೇಕು. ಇವುಗಳಲ್ಲಿ ಯಾವುದಾದರೂ ಒಂದು ಸೂಕ್ತ ದಾಖಲಾತಿಯನ್ನು ಸಲ್ಲಿಸಬೇಕು ಹಾಗೂ ಇವುಗಳನ್ನು ಪರೀಶೀಲಿಸಲಾಗುವುದು. ರೈತರಿಂದ ಯಾವುದೆ ಆಕ್ಷೇಪಣಾ ಅರ್ಜಿಗಳು ಸ್ವೀಕೃತವಾಗದೆ ಇದ್ದಲ್ಲಿ ಮಾರ್ಗಸೂಚಿ ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಮುಂಡಗೋಡ, ಪಾಳಾ, ಬೆಳೆ ವಿಮೆ ಪ್ರೀಮಿಯಮ್ ಪಾವತಿಸಿದ ಸಹಕಾರಿ ಸಂಘಗಳನ್ನು ಸಂಪರ್ಕಿಸಬೇಕು ಎಂದು ಅವರು ತಿಳಿಸಿದ್ದಾರೆ.