ಕೋವಿಡ್ ಲಸಿಕೆ: ಸಣ್ಣಲೋಪವೂ ಆಗದಂತೆ ಎಚ್ಚರಿಕೆ ವಹಿಸಲು ಆರೋಗ್ಯ ಸಚಿವ ಸುಧಾಕರ್ ಸೂಚನೆ
ಬಳ್ಳಾರಿ 15: ಮೊದಲ ಸುತ್ತಿನ ಕೋವಿಡ್ ಲಸಿಕೆ ಕಾರ್ಯಕ್ರಮ ಜ.16ರಿಂದ ಆರಂಭವಾಗಲಿದ್ದು,ಎಲ್ಲ ಜಿಲ್ಲಾಡಳಿತಗಳು ಸಕಲ ಸಿದ್ಧತೆಗಳನ್ನು ಕೈಗೊಳ್ಳಬೇಕು ಮತ್ತು ಯಾವುದೇ ರೀತಿಯ ಸಣ್ಣಲೋಪವೂ ಆಗದಂತೆ ಎಚ್ಚರವಹಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಮೊದಲ ಸುತ್ತಿನ ಕೋವಿಡ್ ಲಸಿಕೆ ಕಾರ್ಯಕ್ರಮ ಶನಿವಾರದಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ,ಎಸ್ಪಿ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಗಳ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ನಡೆಸಿ ಕೈಗೊಳ್ಳಲಾಗಿರುವ ಸಿದ್ಧತೆಗಳ ಮಾಹಿತಿ ಪಡೆದು ಅವರು ಮಾತನಾಡಿದರು.
ಸುಸೂತ್ರ ಲಸಿಕಾ ಕಾರ್ಯಕ್ರಮ ಜರುಗುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ಕೈಗೊಳ್ಳಬೇಕು; ಇದರ ಸಂಪೂರ್ಣ ಜವಾಬ್ದಾರಿ ಜಿಲ್ಲಾಡಳಿತದ್ದಾಗಿದೆ. ಪ್ರಧಾನಮಂತ್ರಿಗಳು ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ತಮ್ಮ ಲಸಿಕಾ ಕೇಂದ್ರಗಳಲ್ಲಿ ಲಸಿಕಾ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಅವರು ಹೇಳಿದರು. ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆಯುವವರು ಹಾಗೂ ಕೇಂದ್ರಗಳಿಗೆ ನಿಯೋಜಿತರಾದವರನ್ನು ಹೊರತುಪಡಿಸಿ ಬೇರೆಯವರನ್ನು ಲಸಿಕಾ ಕೇಂದ್ರದೊಳಗೆ ಪ್ರವೇಶಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿದ್ದು,ಅದರಂತೆ ಕ್ರಮವಹಿಸಬೇಕು ಎಂದು ಅವರು ಸೂಚಿಸಿದರು.
ಸಚಿವರ ವಿಡಿಯೋ ಕಾನ್ಪರೆನ್ಸ್ ಮುಗಿದ ನಂತರ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು 11 ಲಸಿಕಾಕೇಂದ್ರಗಳಲ್ಲಿ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಸಿದ್ಧತೆ ಕೈಗೊಳ್ಳಿ; ಲಸಿಕೆ ಪಡೆಯುವವರ ಮತ್ತು ನಿಯೋಜಿತರಾದ ನೋಡಲ್ ಅಧಿಕಾರಿಗಳ ವಿವರ ಒದಗಿಸಿ ಎಂದರು. ಕೇಂದ್ರದೊಳಗೆ ಲಸಿಕೆ ಪಡೆಯುವವರು ಹಾಗೂ ನಿಯೋಜಿತ ಅಧಿಕಾರಿಗಳ ಪ್ರವೇಶ ಹೊರತುಪಡಿಸಿ ಉಳಿದವರನ್ನು ನಿಷೇಧಿಸಲಾಗಿರುವುದರಿಂದ ಲಸಿಕೆ ಪಡೆದವರ ವಿವರ ಮತ್ತು ಚಿತ್ರಗಳು ಹಾಗೂ ವಿಡಿಯೋಗಳನ್ನು ಮಾಧ್ಯಮದವರಿಗೆ ಕೋವಿಡ್ ವಾರ್ ರೂಂ ಮೂಲಕ ಬಿಡುಗಡೆ ಮಾಡಲಾಗುವುದು. ಅಧಿಕಾರಿಗಳು ಸಹ ಇದೇ ರೀತಿ ಕ್ರಮವಹಿಸುವಂತೆ ಸೂಚನೆ ನೀಡಿದರು.
ಮೊದಲ ಹಂತದಲ್ಲಿ ಆರೋಗ್ಯ ಸೇವಾ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತಿದ್ದು,ಜಿಲ್ಲೆಯಲ್ಲಿ ಮೊದಲ ಸುತ್ತಿನಲ್ಲಿ 19432 ಆರೋಗ್ಯ ಸೇವಾ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ಹಾಕಲು ನಿರ್ಧರಿಸಲಾಗಿದೆ. ಜಿಲ್ಲೆಗೆ ಗುರುವಾರ ಮಧ್ಯಾಹ್ನ 10ಸಾವಿರ ಕೋವಿಶಿಲ್ಡ್ ಲಸಿಕೆಗಳು ಅತ್ಯಂತ ಸುರಕ್ಷತಾ ಭದ್ರತೆಯೊಂದಿಗೆ ವಾಹನದಲ್ಲಿ ಆಗಮಿಸಿವೆ ಎಂದರು. ಬಳ್ಳಾರಿ ಜಿಲ್ಲೆಯಲ್ಲಿ ವಿಮ್ಸ್ , ಜಿಲ್ಲಾಸ್ಪತ್ರೆ, 7 ಸಾರ್ವಜನಿಕ ಆಸ್ಪತ್ರೆಗಳು, ಮಿಲ್ಲರಪೇಟೆ ನಗರ ಆರೋಗ್ಯ ಕೇಂದ್ರ, ಚೆಳ್ಳಗುರ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಂದರೇ 11 ಕಡೆ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಆರೋಗ್ಯ ಸಿಬ್ಬಂದಿಗೆ ಪ್ರತಿ ಕೇಂದ್ರದಲ್ಲಿ ತಲಾ 100ರಂತೆ 1100 ಜನರಿಗೆ ಲಸಿಕೆ ನೀಡಲಾಗುತ್ತಿದೆ.ಜಿಲ್ಲೆಯಲ್ಲಿ ಸರಕಾರಿ, ಖಾಸಗಿ ಸೇರಿದಂತೆ 145 ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದ್ದು,ಇಲ್ಲಿ ಈಗಾಗಲೇ ನೋಂದಾಯಿಸಲಾಗಿರುವ ಆರೋಗ್ಯ ಸೇವಾ ಸಿಬ್ಬಂದಿಗೆ ಲಸಿಕೆ ನೀಡಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಮಾತನಾಡಿದರು.ಈ ಸಂದರ್ಭದಲ್ಲಿ ಡಿಎಚ್ಒ ಡಾ.ಜನಾರ್ಧನ್, ಜಿಲ್ಲಾ ಆರ್ ಸಿಎಚ್ ಅಧಿಕಾರಿ ಡಾ. ಅನಿಲಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ ಮತ್ತಿತರರು ಇದ್ದರು.