ಬಳ್ಳಾರಿ

ಕೋವಿಡ್ 2ನೇ ಅಲೆ ಬೇಜವಾಬ್ದಾರಿ ಸಲ್ಲದು: ವೀರೇಶ್

ಕೋವಿಡ್ 2ನೇ ಅಲೆ ಬೇಜವಾಬ್ದಾರಿ ಸಲ್ಲದು: ವೀರೇಶ್

ಹಗರಿಬೊಮ್ಮನಹಳ್ಳಿ.ಎ.24 : ಹೆಮ್ಮಾರಿ ಕೊರೋನಾ 2ನೇ ಅಲೆ ಭಾರಿ ಆತಂಕ ಸೃಷ್ಟಿಸುತ್ತಿದ್ದು ಸಾರ್ವಜನಿಕರು ಮೈಮರೆಯದೆ ಜವಾಬ್ದಾರಿಯಿಂದ ರಾಜ್ಯ ಸರಕಾರ ಹೊರಡಿಸಿರುವ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹನಸಿ ಗ್ರಾಮ ಪಂಚಾಯತಿ ಸದಸ್ಯ ವಿ.ವೀರೇಶ್ ಹೇಳಿದರು. 

ತಾಲೂಕಿನ ಹನಸಿಯ ಗ್ರಾಮ ಪಂಚಾಯತಿ ಆವರಣದಲ್ಲಿ ನಡೆದ ಕೊರೊನಾ ಟಾಸ್ಕ್‌ ಫೋರ್ಸ್‌ ಸಭೆಯಲ್ಲಿ ಅವರು ಮಾತನಾಡಿ, ಕೊರೊನಾ 2ನೇ ಅಲೆಯ ಅಬ್ಬರ ಜೋರಾಗಿದ್ದು ಆಸ್ಪತ್ರೆಗಳಲ್ಲಿ ಬೆಡ್‌ಗಳಿಲ್ಲದೆ ಮೃತಪಟ್ಟ ಘಟನೆಗಳನ್ನು ನೂಡುತ್ತಿರುವುದು ಕಂಡರೆ ಇದರ ತೀವ್ರತೆ ಎಷ್ಟು ಎಂಬುದನ್ನು ಅಂದಾಜಿಸಲು ಅಗುತ್ತಿಲ್ಲ ಹಾಗಾಗಿ ಸಾರ್ವಜನಿಕರು ಮಾಸ್ಕ್‌, ಹ್ಯಾಂಡ್ ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಬಹು ಮುಖ್ಯವಾಗಿದೆ, ಸಭೆ ಸಮಾರಂಭಗಳನ್ನು ಆದಷ್ಟು ಬದಿಗೊತ್ತಿ, ಅನಗತ್ಯವಾಗಿ ಹೊರಗಡೆ ಒಡಾಟವನ್ನು ನಿಯಂತ್ರಿಸಿ ಆರೋಗ್ಯದ ಕಡೆ ಗಮನ ನೀಡಿ ಎಂದು ಕರೆ ನೀಡಿದರು. 

ಪಿಡಿಒ ಶಿವರಾಜ್ ಮಾತನಾಡಿ ಕರೋನಾ ಎರಡನೇ ಅಲೆಗೆ ಕಡಿವಾಣ ಹಾಕಲು   ರಾಜ್ಯ ಸರಕಾರ ಕಟ್ಟು ನಿಟ್ಟಿನ ಆದೇಶಗಳನ್ನು ಹೊರಡಿಸಿದ್ದು ಸಾರ್ವಜನಿಕರ ಸಹಕಾರ ಬಹು ಮುಖ್ಯವಾಗಿದೆ, ಗ್ರಾಮೀಣ ಭಾಗಗಳಲ್ಲಿ ಕದಂಬ ಬಾಹುಗಳನ್ನು ಚಾಚದಂತೆ ಕಟ್ಟು ನಿಟ್ಟಿನ ಕ್ರಮಗಳನ್ನು ಅನುಸರಿಸಬೇಕು, ಇಲ್ಲದಿದ್ದಲ್ಲಿ ಕಾನೂನಾತ್ನಕ ಕ್ರಮ ಕೈಗೊಳ್ಳಲಾಗುವುದು. ಸ್ವಚ್ಛತೆ ಬಗ್ಗೆ ಕಾಳಜಿವಹಿಸಿ, ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ಒಡಾಟಕ್ಕೆ ನಿರ್ಬಂಧವಿದ್ದು ಸಾರ್ವಜನಿಕರು ಅಗತ್ಯ ವಸ್ತಗಳನ್ನು ನಿಗದಿತ ವೇಳೆಯಲ್ಲಿ ಖರೀಧಿಸಬೇಕು ಅನಗತ್ಯ ಒಡಾಟ ಬೇಡ  ಸಾಮಾಜಿಕ ಅಂತರ ಕಾಪಾಡಿಕೊಂಡು ಸಭೆ ಸಮಾರಂಭಗಳಿಗೆ ತಾಲೂಕು ಕಚೇರಿಯಿಂದ ಪರವಾನಿಗೆಯ ಪಾಸ್‌ಗಳನ್ನು ಪಡೆಯಬೇಕು ಎಂದರು. 

ಹನಸಿ ಗ್ರಾಮ ಪಂಚಾಯತಿ ಸದಸ್ಯರಾದ ಹಸನ್ ಷರೀಫ್,ಕೆ.ಗೋಣೆಪ್ಪ ಸೇರಿದಂತೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. 


ಸುದ್ದಿ ಓದಿ