ದೇವಿನಗರ ಎಲ್ಲಮ್ಮದೇವಿ ನೂತನ ಮಂದಿರ ಉದ್ಘಾಟನೆ ಕ್ಷಣಗಣನೆ
ಲೋಕದರ್ಶನ ವರದಿ
ಬಳ್ಳಾರಿ 24: ಬಳ್ಳಾರಿ ನಗರದ ಐತಿಹಾಸಿಕ ದೇವಿನಗರಕ್ಕೆ ತನ್ನದೇ ಆದ ಐತಿಹ್ಯವಿದೆ. ಬಳ್ಳಾರಿ ಮಹಾನಗರ ಪಾಲಿಕೆಯ 37ನೇ ವಾರ್ಡ್ನಲ್ಲಿ ಈ ದೇವಾಲಯವಿದ್ದು, ಸಾರಿಗೆ ಸಚಿವ ಬಿ.ಶ್ರೀರಾಮುಲು ಹಾಗೂ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಸೇರಿದಂತೆ ಸಮಸ್ತ ಭಕ್ತರ ಸಹಕಾರದೊಂದಿಗೆ ಸಂಪೂರ್ಣ ನವೀಕರಿಸಲಾಗಿದೆ. ನೂತನ ಕಟ್ಟಡ ಉದ್ಘಾಟನೆ ಮತ್ತು ವಿಗ್ರಹ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ.
ಇದೇ ಅ. 25ರಂದು ಬೆಳಿಗ್ಗೆ ಗಂಗೆ ಪೂಜೆ, ನಾಗಶಾಲ ಪ್ರವೇಶ, ಸ್ವಸ್ತಿ ವಾಚನ ಪೂಜೆಯೊಂದಿಗೆ ಆರಂಭಿಸಲಾಗುತ್ತಿದೆ. ಪಂಚಗವ್ಯ ಅಧಿವಾಸ, ಅಗ್ನಿ ಪ್ರತಿಷ್ಠೆ ಮತ್ತು ಅಂಕುರಾರ್ಣ ಮಹಾಮಂಗಳಾರತಿ ಜರುಗಲಿದೆ. ಇದೇ ಅ. 27ರಂದು ಜರುಗುವ ದೇವತಾ ಮೂರ್ತಿಗಳ ಪ್ರತಿಷ್ಠಾಪನೆಗೆ ದಿನಗಣನೆ ಪ್ರಾರಂಭವಾಗಿದೆ. ಅ. 26ರಂದು ಬೆಳಿಗ್ಗೆ ಮಂಟಪ ಆರಾಧನೆ, ಧಾನ್ಯಾಧಿವಾಸ, ಅಧಿವಾಸಾಂಗ ಹೋಮ, ಸಂಜೆ ಮಹಾಸ್ವಪನ, ಪುಷ್ಪಾದಿವಾಸ, ಶಯ್ಯಾಧಿವಾಸ ಬಳಿಕ ಮಹಾಮಂಗಳಾರತಿ ಜರುಗಲಿದೆ. ಅ. 27ರಂದು ಬೆಳಗಿನ ಜಾವ ಯಂತ್ರ ಪ್ರತಿಷ್ಠಾಪನೆ, ವಿಗ್ರಹ ಪ್ರತಿಷ್ಠಾಪನೆ, ಕಳಾನ್ಯಾಸ ಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ ಹಾಗೂ ಮಹಾ ಪ್ರಸಾದ ಜರುಗಲಿದೆ. ಮೂರು ದಿನ ನಡೆಯುವ ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸದ್ಭಕ್ತರು ಪಾಲ್ಗೊಂಡು ಅಮ್ಮನ ಕೃಪೆಗೆ ಪಾತ್ರರಾಗುವಂತೆ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಸಚಿವ ಬಿ.ಶ್ರೀರಾಮುಲು ಅವರ ಆಪ್ತ ಸಹಾಯಕರು ಸಜ್ಜನ ಭಕ್ತರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ರೇಣುಕಾ ಎಲ್ಲಮ್ಮ ದೇವಿ ಟ್ರಸ್ಟ್ ಅಧ್ಯಕ್ಷ ಬಿ.ಹೊನ್ನೂರ್ಪ, ಪ್ರಧಾನ ಕಾರ್ಯದರ್ಶಿ ವೀರೇಶ್ ಮತ್ತು ಖಜಾಂಚಿ ಆರ್.ಗಿರಿಬಾಬು ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರ ಆಪ್ತ ಸಹಾಯಕ ರಾಮು ಅವರು, ಧಾರವಾಡ ರಸ್ತೆ ಎಂದು ಹೇಳುತ್ತಿದ್ದ ಈ ಭಾಗದಲಿ ಎಲ್ಲಮ್ಮದೇವಿ ಮಂದಿರ ನಿರ್ಮಾಣವಾಗಿದ್ದೇ ಒಂದು ಆಶ್ಚರ್ಯದ ವಿಷಯ. ಐತಿಹಾಸಿಕ ಬಸವನಕುಂಟೆ ಪ್ರದೇಶ ಎಷ್ಟು ಪ್ರಸಿದ್ಧವೋ ಅಷ್ಟೇ ದೇವಿನಗರ ಎಲ್ಲಮ್ಮದೇವಿ ತುಂಬಾ ಪ್ರಸಿದ್ಧಿ ಪಡೆದಿದ್ದಾಳೆ.
ಭಕ್ತರ ಇಚ್ಛೆಯಂತೆಯೇ ಬಿ.ಶ್ರೀರಾಮುಲು ಅವರು ಹಳೆಯ ದೇವಸ್ಥಾನ ತೆರವುಗೊಳಿಸಿ ಹೊಸ ದೇವಸ್ಥಾನ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಎಲ್ಲ ರೀತಿಯ ನೆರವೂ ನೀಡಿದ್ದಾರೆ. ಅವರಂತೆಯೇ ನಗರ ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ ಅವರೂ ಸಹ ಸಹಾಯ ಮಾಡಿದ್ದಾರೆ. ಈ ಮಹನೀಯರ ಸಂಪೂರ್ಣ ಸಹಕಾರ ಮತ್ತು ಸ್ಥಳೀಯ ದೇವಿನಗರ ಸೇರಿದಂತೆ ಎಲ್ಲ ಭಕ್ತರ ಇಚ್ಛಾನುಸಾರ ತನು-ಮನ-ಧನದಿಂದ ಈ ದೇವಸ್ಥಾನ ಇದೀಗ ಅಭಿವೃದ್ಧಿಯಾಗಿದೆ. ಶ್ರೀ ಎಲ್ಲಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆಗೆ ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.