ಕ್ಷಯರೋಗ ತಡೆಗೆ ಸಹಕಾರ ಮುಖ್ಯ: ಪಾಟೀಲ
ತಾಳಿಕೋಟೆ27: ಕ್ಷಯರೋಗ ತಡೆಗಟ್ಟಲು ಸಾರ್ವಜನಿಕರ ಸಹಕಾರ ಬಹಳ ಮುಖ್ಯ. ಪ್ರಸ್ತುತ ಕ್ಷಯರೋಗಿಗಳಿಗೆ ಸರಕಾರದ ವತಿಯಿಂದ ಉಚಿತವಾಗಿ ಓಷಧಿ ನೀಡಲಾಗುತ್ತಿದೆ. ವೈದ್ಯರ ಸಲಹೆ ಮೇರೆಗೆ ರೋಗಿಗಳು ಓಷಧಿಯನ್ನು ಪಡೆದರೆ ಸುಲಭವಾಗಿ ಗುಣಮುಖರಾಗಬಹುದು ಎಂದು ಆಡಳಿತ ವೈದ್ಯಾಧಿಕಾರಿ ಡಾ.ಎಸ್.ಬಿ.ಪಾಟೀಲ ಹೇಳಿದರು.
ಅವರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕ್ಷಯ ರೋಗ ನಿವಾರಣಾ ಘಟಕದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಕ್ಷಯ ರೋಗ ಹೆಚ್ಚಾಗಲು ಅನಕ್ಷರತೆ, ತಪ್ಪು ಕಲ್ಪನೆ, ಮೂಢನಂಬಿಕೆ ಗಳಿಂದ ಚಿಕಿತ್ಸೆ ಪಡೆಯದೆ ದೂರ ಉಳಿದಿರುವುದು, ಕ್ಷಯರೋಗವಿರುವುದನ್ನು ಹೇಳಿಕೊಳ್ಳಲು ಹಿಂಜರಿಯುತ್ತಿರುವ ರೋಗಿಗಳನ್ನು ಗುರುತಿಸಿ ಅವರಿಗೆ ಅರಿವು ಮೂಡಿಸಿ, ಅವರೆಲ್ಲರನ್ನು ಚಿಕಿತ್ಸೆಗೆ ಒಳಪಡಿಸಿ ಗುಣಪಡಿಸುವ ಅಗತ್ಯವಿದೆ ಎಂದರು.
ಚಿಕ್ಕಮಕ್ಕಳ ವೈದ್ಯ ಡಾ.ಆನಂದ ಭಟ್ ಮಾತನಾಡಿ, ಕ್ಷಯ ರೋಗವು ಯಾರಿಗೆ ಬೇಕಾದರೂ ಬರಬಹುದು. ಹೆಚ್ಚಿನ ಅಪಾಯದ ಗುಂಪುಗಳಿಗೆ ಒಂದು ದಿವಸ ಕೆಮ್ಮು ಇದ್ದರೆ ಅಂಥವದು ಕಫ ಪರೀಕ್ಷೆ ಮಾಡಿಸಿಕೊಳ್ಳುವದು ಒಳ್ಳೆಯದು. ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕಫ್ ಪರೀಕ್ಷೆ ಮಾಡಲಾಗುತ್ತಿದ್ದು, ಎರಡು ಬಾರಿ ಪರೀಕ್ಷೆ ಮಾಡಿಸಿದರೆ ಕ್ಷಯ ರೋಗದ ಬಗ್ಗೆ ಗೊತತಾಗುತ್ತದೆ. ಕ್ಷಯ ರೋಗಕ್ಕೆ ಅಂಜುವದು ಅವಶ್ಯಕತೆ ಇಲ್ಲ. ಮುಂಜಾಗ್ರತೆ ವಹಿಸಿಕೊಂಡರೆ ಸಾಕು ಎಂದರು.
ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳಗಿ, ಚಿಕ್ಕ ಮಕ್ಕಳ ತಜ್ಞ ಡಾ.ಆಯ್.ಬಿ.ತಳ್ಳೊಳ್ಳಿ, ಡಾ.ಮಧುಬಾಲಾ ಸಿಂಘಾಲ, ಡಾ,ವಿಜಯಲಕ್ಷ್ಮೀ ಹಜೇರಿ, ಡಾ.ವಿಜಯಕುಮಾರ ಅಮಲ್ಯಾಳ, ಡಾ.ಎ.ಎ.ನಾಲಬಂದ, ಡಾ,ಕಿರಣ ನ್ಯಾಮಣ್ಣವರ, ಎಸ್.ವಿ.ಎಂ ಪ್ಯಾರಾಮೇಡಿಕಲ್ ಕಾಲೇಜು ಅಧ್ಯಕ್ಷ ಎ.ಆರ್.ಹಿರೇಮಠ ವೇದಿಕೆಯ ಮೇಲಿದ್ದರು. ಕಲ್ಪನಾ ಹೂಗಾರ ಸ್ವಾಗತಿಸಿದರು. ಶಿವರಾಜ ದೀಕ್ಷಿತ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಅಗ್ನಿ ನಿರೂಪಿಸಿದರು. ಸಿದ್ದಮ್ಮ ಬ್ಯಾಲಾಳ ವಂದಿಸಿದರು.