ಬಳ್ಳಾರಿ

ಡಿ.9ರಂದು ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಘಟಿಕೋತ್ಸವ : ಸುದ್ದಿಗೋಷ್ಠಿಯಲ್ಲಿ ಕುಲಪತಿ ಪ್ರೊ.ಸಿದ್ದು ಆಲಗೂರ ಹೇಳಿಕೆ: ಸಾಧಕ ಮೂರು ಜನರಿಗೆ ಗೌರವ ಡಾಕ್ಟರೆಟ್

ಡಿ.9ರಂದು ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಘಟಿಕೋತ್ಸವ  : ಸುದ್ದಿಗೋಷ್ಠಿಯಲ್ಲಿ ಕುಲಪತಿ ಪ್ರೊ.ಸಿದ್ದು ಆಲಗೂರ ಹೇಳಿಕೆ: ಸಾಧಕ ಮೂರು ಜನರಿಗೆ ಗೌರವ ಡಾಕ್ಟರೆಟ್


ಬಳ್ಳಾರಿ,ಡಿ.8: ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ 2020-21ನೇ ಸಾಲಿನ 10ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವು ಡಿ.9ರಂದು ಬೆಳಗ್ಗೆ 10.15ಕ್ಕೆ ವಿಶ್ವ ವಿದ್ಯಾಲಯದ ಬಯಲು ರಂಗಮಂದಿರದ ಆವರಣದಲ್ಲಿ ನಡೆಯಲಿದೆ. ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮೂರು ಜನ ಮಹನೀಯರಿಗೆ ಗೌರವ ಡಾಕ್ಟರೆಟ್ ಪ್ರದಾನ ಮಾಡಲಾಗುತ್ತಿದೆ ಎಂದು ಕುಲಪತಿ ಪ್ರೊ.ಸಿದ್ದು ಪಿ.ಆಲಗೂರ್ ಅವರು ತಿಳಿಸಿದರು. 

ವಿವಿಯ ಅಂಬೇಡ್ಕರ್ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು. 

ಘಟಿಕೋತ್ಸವದಲ್ಲಿ ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರು ಕುಲಾಧಿಪತಿಗಳಾದ ಥಾವರಚಂದ್ ಗೆಹ್ಲೋಟ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. 

ಘಟಿಕೋತ್ಸವದ ಭಾಷಣವನ್ನು ಇಸ್ರೋ ಮಾಜಿ ಅಧ್ಯಕ್ಷರಾದ ಎ.ಎಸ್‌.ಕಿರಣ್ ಕುಮಾರ್ ಅವರು ಮಾಡಲಿದ್ದಾರೆ ಎಂದು ತಿಳಿಸಿದರು. 

ಉನ್ನತ ಶಿಕ್ಷಣ ಸಚಿವರು ಹಾಗೂ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಮ-ಕುಲಾಧಿಪತಿಗಳಾದ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ವಾರ್ಷಿಕ ಘಟಿಕೋತ್ಸವದ ನೇತೃತ್ವವನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಸಿದ್ದು ಆಲಗೂರ ಅವರು ವಹಿಸಲಿದ್ದಾರೆ ಎಂದು ಅವರು ವಿವರಿಸಿದರು. 

ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ ಸದಸ್ಯರುಗಳು, ಕುಲಸಚಿವರಾದ ಪ್ರೊ.ಎಸ್‌.ಸಿ.ಪಾಟೀಲ್, ಪ್ರೊ.ರಮೇಶ್ ಓಲೇಕಾರ ಅವರುಗಳು ಕುಲಪತಿಗಳಿಗೆ ಸಾಥ್ ನೀಡಲಿದ್ದಾರೆ ಎಂದು ಅವರು ತಿಳಿಸಿದರು. 

*ಘಟಿಕೋತ್ಸದ ವಿಶೇಷತೆಗಳಿವು: 3 ಜನರಿಗೆ ಗೌರವ ಡಾಕ್ಟರೇಟ್ ಪ್ರದಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಎಸ್‌.ಸಿ.ವೀರಭದ್ರ​‍್ಪ, ಡಾ.ಮಲ್ಲಿಕಾರ್ಜುನ ವಿ.ಜಾಲಿ, ಬಹದ್ದೂರ್ ಎಸ್ ಶೇಷಗಿರಿರಾವ್ ಮಹನೀಯರಿಗೆ ಈ ಬಾರಿಯ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತಿದೆ ಎಂದು ಕುಲಪತಿ ಪ್ರೊ.ಸಿದ್ದು ಆಲಗೂರು ಅವರು ತಿಳಿಸಿದರು. 

ಈ ಬಾರಿಯ ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿವಿಧ ವಿಭಾಗಗಳ 60 ಚಿನ್ನದ ಪದಕಗಳ ಪೈಕಿ ಒಟ್ಟು 48 ವಿದ್ಯಾರ್ಥಿಗಳು ಚಿನ್ನದ ಪದಕ ಮುಡಿಗೇರಿಸಿಕೊಳ್ಳಲಿದ್ದಾರೆ. ವಿವಿಧ ವಿಭಾಗಗಳ ಒಟ್ಟು 17 ಸಂಶೋಧನಾರ್ಥಿಗಳು ಡಾಕ್ಟರೇಟ್ ಪದವಿ ಪಡೆಯಲಿದ್ದಾರೆ. ಎಲ್ಲ ವಿಭಾಗಗಳ ಸ್ನಾತಕ ಪದವಿಯ 63 ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿಯಿಂದ 73 ಒಟ್ಟು 136 ವಿದ್ಯಾರ್ಥಿಗಳು ರಾ​‍್ಯಂಕ್ ಪ್ರಮಾಣ ಪತ್ರಗಳನ್ನು ಪಡೆಯಲಿದ್ದಾರೆ. 

*04 ಚಿನ್ನದ ಪದಕಗಳನ್ನು ಪಡೆದ ವಿದ್ಯಾರ್ಥಿಗಳ ಪಟ್ಟಿ: ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯ ವಾಣಿಜ್ಯ ಶಾಸ್ತ್ರ ವಿಭಾಗದ ಅಕ್ಷಿತಾ ಕುಮಾರಿ ಅವರು ಪಡೆದಿದ್ದಾರೆ. 

*03 ಚಿನ್ನದ ಪದಕ: ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯ ಖನಿಜ ಸಂಸ್ಕರಣ ವಿಭಾಗದ ಹೇಮಂತ ಟಿ.ಎಲ್ ಹಾಗೂ ವಿಶ್ರೀಕೃ ವಿಶ್ವವಿದ್ಯಾಲಯದ ಓದ್ಯೋಗಿಕ ರಸಾಯನ ಶಾಸ್ತ್ರ ವಿಭಾಗದ ಪ್ರೀತಿ.ಆರ್ ಇವರುಗಳು ಪಡೆದುಕೊಂಡಿದ್ದಾರೆ. 

*02 ಚಿನ್ನದ ಪದಕ: ವಿಶ್ರೀಕೃ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಹಫ್ಸಾ ನೂರೈನ್, ರಸಾಯನ ಶಾಸ್ತ್ರ ವಿಭಾಗದ ಶಮಾಪರ್ವಿನ್ ಹುಲಗಿ, ಭೌತಶಾಸ್ತ್ರ ವಿಭಾಗದ ಅರುಣ್‌ಕುಮಾರ್ ಎಸ್‌.ಎಂ, ಇತಿಹಾಸ ವಿಭಾಗದ ಮೌಲಮ್ಮ ಹಾಗೂ ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯ ಸಮಾಜಕಾರ್ಯ ವಿಭಾಗದ ಆರ್‌.ಸುಚಿತ್ರಾ ಇವರುಗಳು ಪಡೆದುಕೊಂಡಿದ್ದಾರೆ. 

*ಪರೀಕ್ಷಾ ಫಲಿತಾಂಶ: ಪದವಿ ಮಟ್ಟದ ವಿಶ್ವವಿದ್ಯಾಲಯದಲ್ಲಿ ಒಟ್ಟು 11,687 ಪದವಿ ವಿದ್ಯಾರ್ಥಿಗಳು ಅಂತಿಮ ಪರೀಕ್ಷೆ ಬರೆದು ತಮ್ಮ ಕೋರ್ಸ್‌ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಹಾಗೂ ಸ್ನಾತಕೋತ್ತರ ಮಟ್ಟದಲ್ಲಿ ಸ್ನಾತಕೋತ್ತರ ಪದವಿಯಲ್ಲಿ 1862 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಉತ್ತೀರ್ಣರಾಗಿದ್ದಾರೆ. 

ಗೌರವ ಡಾಕ್ಟರೆಟ್ ಪಡೆದ ಮೂರು ಜನರ ಪರಿಚಯ ಇಂತಿದೆ: 

*ಎಸ್‌.ಸಿ.ವೀರಭದ್ರ​‍್ಪ: ಇವರು ಮೂಲತಃ ಚಿತ್ರದುರ್ಗದ ಜಿಲ್ಲೆಯ ಬಿ ಜಿ ಕೆರೆ ಯವರಾಗಿದ್ದು, ಕೃಷಿ ಪದವೀಧರರು ಮತ್ತು ಸಮಗ್ರ ಹಾಗೂ ಸಾವಯವ ಕೃಷಿಯನ್ನು ಮಾಡಿದ್ದರಿಂದ ಇವರು “ಬರದ ನಾಡಿನ ಭಗೀರಥ” ಎಂದು ಜನಪ್ರಿಯರಾಗಿದ್ದಾರೆ. ಇವರಿಗೆ 2006 ರಲ್ಲಿ ಕರ್ನಾಟಕ ಸರ್ಕಾರದಿಂದ “ಕೃಷಿ ಪಂಡಿತ ಪ್ರಶಸ್ತಿ” ತೆಂಗು ಅಭಿವೃದ್ಧಿ ಮಂಡಳಿಯಿಂದ “ಅತ್ಯುತ್ತಮ ತೆಂಗು ಬೆಳೆಗಾರ ರಾಷ್ಟ್ರೀಯ ಪ್ರಶಸ್ತಿ”, ನಬಾರ್ಡ್‌ ಅತ್ಯುತ್ತಮ ಸಾಧಕ ಪ್ರಶಸ್ತಿ, ಅತ್ಯುತ್ತಮ ರೇಷ್ಮೆಶಾಸ್ತ್ರಜ್ಞ ಪ್ರಶಸ್ತಿ ಇತ್ಯಾದಿ ಆನೇಕ ಪ್ರಶಸ್ತಿಗಳು ಲಭಿಸಿವೆ. 

*ಡಾ.ಮಲ್ಲಿಕಾರ್ಜುನ ವಿ.ಜಾಲಿ: ಇವರು ಮೂಲತಃ ವಿಜಯನಗರ (ಹೊಸಪೇಟೆ) ಜಿಲ್ಲೆಯವರು. ಪ್ರಸ್ತುತ ಕೆಎಲ್‌ಇ ಸೊಸೈಟಿಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಬೆಳಗಾವಿಯಲ್ಲಿ ವೈದ್ಯಕೀಯ ನಿರ್ದೇಶಕರಾಗಿ, ಮುಖ್ಯ ಕಾರ್ಯನಿರ್ವಾಹಕರಾಗಿ ಮತ್ತು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯಕೀಯ ಸೇವೆಗಳಿಗಾಗಿ ಜೆರಿಯಾಟ್ರಿಕ್ಸ್‌ನಲ್ಲಿ ಚಿನ್ನದ ಪದಕ, ಕರ್ನಾಟಕ ಸರ್ಕಾರದಿಂದ ಗೌರವ ಪ್ರಧಾನ, ವೈದ್ಯಶ್ರೀ, ಐಎಂಎ ರಾಜ್ಯ ಪಶಸ್ತಿ, ರಾಜ್ಯ ರೆಡ್ ಕ್ರಾಸ್ ಪ್ರಶಸ್ತಿ, ಕರ್ನಾಟಕ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿಯಂತಹ ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳನ್ನು ಡಾ.ಜಾಲಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. 

*ಬಹದ್ದೂರ್ ಎಸ್‌.ಶೇಷಗಿರಿರಾವ್‌: ರಾವ್ ಅವರು ಮೂಲತಃ ಬಳ್ಳಾರಿಯವರು. ಇವರು ಮೂಲತಃ ಶಿಕ್ಷಕರು ಮತ್ತು ಆಡಳಿತಗಾರರು. ಬಾಲ ಭಾರತಿ, ರಾಜ್ಯೋಜ್ಞಾನ ಪರಿಷತ್ತು ಮುಂತಾದ ಶಿಕ್ಷಣ ಶಿಕ್ಷಣ ಸಂಸ್ಥೆಗಳನ್ನು ಉತ್ತಮಗೊಳಿಸಲು ಶ್ರಮ ವಹಿಸಿದ್ದಾರೆ. ಇವರು ಭಾರತ ಸೇವಾದಳ, ಫ್ಯಾಮಿಲಿ ಪ್ಲ್ಯಾನಿಂಗ್ ಆಸೋಸಿಯೇಷನ್ ಆಫ್ ಇಂಡಿಯಾ, ವೀರಶೈವ ವಿದ್ಯಾವರ್ಧಕ ಸಂಘದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು ಅಂದಿನ ರಾಷ್ಟ್ರಪತಿಗಳಾದ ನೀಲಂ ಸಂಜೀವ ರೆಡ್ಡಿ ಅವರಿಂದ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. 

ಘಟಿಕೋತ್ಸವದಲ್ಲಿ ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ತಿನ ಸದಸ್ಯರುಗಳು, ಎಲ್ಲ ನಿಕಾಯದ ಡೀನರು, ಮುಖ್ಯಸ್ಥರುಗಳು, ಸಂಯೋಜಕರುಗಳು, ವಿವಿಧ ಮಹಾವಿದ್ಯಾಲಯಗಳ ಪಾಂಶುಪಾಲರಾಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಕುಲಪತಿಗಳಾದ ಪ್ರೊ.ಸಿದ್ದು ಪಿ.ಆಲಗೂರ ಅವರು ತಿಳಿಸಿದರು. 

ಈ ಸಂದರ್ಭದಲ್ಲಿ ಕುಲಸಚಿವರಾದ ಕುಲಸಚಿವರಾದ ಪ್ರೊ.ಎಸ್‌.ಸಿ.ಪಾಟೀಲ್, ಪ್ರೊ.ರಮೇಶ್ ಓಲೇಕಾರ ಇದ್ದರು. 


ಸುದ್ದಿ ಓದಿ