ರಾಜ್ಯ ಮಟ್ಟದ ಮಾದಿಗರ ಸಮಾವೇಶ ಯಶಸ್ವಿಗೆ ಪೂಜಾರಿ ಕರೆ
ಹುಕ್ಕೇರಿ 5: ರಾಜ್ಯ ಮಟ್ಟದ ಮಾದಿಗರ ಸಮಾಜದ ಬೃಹತ್ ಸಮ್ಮೇಳನ ಫೆಬ್ರವರಿ 27ರಂದು ಬಾಗಲಕೋಟಿ ಜಿಲ್ಲೆಯ ಮುಧೋಳ ನಗರದಲ್ಲಿ ಜರಗಲಿದ್ದು, ಸಮಾವೇಶವನ್ನು ಯಶಸ್ಸುಗೊಳಿಸಬೇಕೆಂದು ಕರ್ನಾಟಕ ಪ್ರದೇಶ ಮಾದಿಗರ ಸಂಘದ ರಾಜ್ಯಾಧ್ಯಕ್ಷ ಶಂಕರ ಪೂಜಾರಿ ಕರೆ ನೀಡಿದರು.
ಅವರು ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದ ಕಾಳಿಕಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಬ್ರಹ್ಮಾನಂದ ಅಜ್ಜನವರ ಆಶೀರ್ವಾದ ಪಡೆದು ಸಮ್ಮೇಳನದ ನೇತೃತ್ವ ವಹಿಸಲು ವಿನಂತಿಸಿಕೊಂಡರು. ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಶಂಕರ ಪೂಜಾರಿ ಅವರು ಕಳೆದ 25 ವರ್ಷಗಳಿಂದ ಮಾದಿಗ ಸಮಾಜಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ , ಎಚ್. ಖ. ಕುಮಾರಸ್ವಾಮಿ, ಜಗದೀಶ ಶೆಟ್ಟರ ಸೇರಿದಂತೆ ಎಲ್ಲರಿಗೂ ನಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯ ಮಾಡುತ್ತಾ ಬಂದಿದ್ದೇವೆ, ಆದರೆ ಯಾವದೆ ಪ್ರಯೋಜನವಾಗಿಲ್ಲಾ. ಕಾರಣ ಬರುವ ಫೆಬ್ರವರಿ 27 ರಂದು ಬಾಗಲಕೋಟ ಜಿಲ್ಲೆಯ ಮುಧೋಳ ನಗರದಲ್ಲಿ ಮಾದಿಗ ಸಮಾಜದ ವಿವಿಧ ಸಂಘಟನೆಗಳ ಆಶ್ರಯದಲ್ಲಿ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಂಡು ನ್ಯಾಯಮೂರ್ತಿ ಸದಾಶಿವ ಆಯೋಗ ಜಾರಿಗೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವದು. ಸಮಾವೇಶದಲ್ಲಿ ಸಮಾಜದ ಸ್ವಾಮಿಜಿಗಳು, ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು ಸೆರಿದಂತೆ ಹಾಲಿ ಮತ್ತು ಮಾಜಿ ಸಚಿವರು, ಶಾಸಕರು, ಜನಪ್ರತಿನಿಧಿಗಳು ಸೇರಿದಂತೆ ಸಮಾಜದ ಸುಮಾರು 5 ಲಕ್ಷ ಜನ ಪಾಲ್ಗೊಳ್ಳುತ್ತಾರೆ. ಕಾರಣ ಈ ಸಮಾವೇಶದಲ್ಲಿ ಬೆಳಗಾವಿ ಜಿಲ್ಲೆಯ ಸಮಾಜದ ಪ್ರತಿಯೊಬ್ಬರೂ ಪಾಲ್ಗೊಂಡು ಸಮ್ಮೇಳನ ಯಶಸ್ವಿಗೆ ಸಹಕರಿಸಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಮುಕುಂದ ಮಠದ, ಸಮಾಜದ ರಾಜ್ಯ ಕಾನೂನು ಸಲಹೆಗಾರ ನ್ಯಾಯವಾದಿ ವಾಯ್ ಎಸ್ ಮೇತ್ರಾಣಿ, ಬೆಳಗಾವಿ ವಿಭಾಗೀಯ ಅಧ್ಯಕ್ಷ ಮಾರುತಿ ಗಸ್ತಿ, ರಾಜ್ಯ ಕಾರ್ಯದರ್ಶಿ ಅಶೋಕ ಮೇತ್ರಿ, ಬಾಗಲಕೋಟ ಜಿಲ್ಲಾ ಅಧ್ಯಕ್ಷ ಮಹಾದೇವ ಮೇತ್ರಿ, ಪ್ರಕಾಶ ಹೊಸಮನಿ ಮೊದಲಾದವರು ಉಪಸ್ಥಿತರಿದ್ದರು.