ಸಹಕಾರ ಸಂಘಕ್ಕೆ ರೂ1.20 ಕೋಟಿ ನಿವ್ವಳ ಲಾಭ
ಲೋಕದರ್ಶನ ವರದಿ
ಹುಕ್ಕೇರಿ 08: ಬೆಳಗಾವಿ ಜಿಲ್ಲೆಯ ಭಾಗೇವಾಡಿ ತಾಲೂಕಿನ ಬೆಲ್ಲದ ಭಾಗೇವಾಡಿ ಶ್ರೀ ಆದಿನಾಥ ಮಲ್ಲಿಪರಸಪ್ಪ ಸೌಹಾರ್ದ ಸಹಕಾರಿ ಸಂಘವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೂ1.20 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಶೀತಲಕುಮಾರ ಸಿದ್ದಪ್ಪ ಖೇಮಲಾಪುರ ತಿಳಿಸಿದರು.
ಸಂಘದ 26ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದಸ್ಯರ ಸಹಕಾರ ಹಾಗೂ ಸಿಬ್ಬಂದಿಯ ಪ್ರಾಮಾಣಿಕ ಸೇವೆಯಿಂದ ಸಂಘವು ದಿನದಿಂದ ದಿನಕ್ಕೆ ಪ್ರಗತಿ ಸಾಧಿಸುತ್ತಿದೆ ಎಂದರು. ಕಳೆದ 26 ವರ್ಷಗಳಿಂದ ಗ್ರಾಮೀಣ ಭಾಗದ ಜನರಿಗೆ ಆರ್ಥಿಕ ಆಸರೆಯಾಗಿ ಕಾರ್ಯನಿರ್ವಹಿಸುತ್ತಿರುವ ಸಂಘವು ಸದಸ್ಯರ ನಂಬಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.
ಪ್ರಸ್ತುತ ಸಂಘದಲ್ಲಿ 466 ಸದಸ್ಯರಿದ್ದು, ರೂ16.24 ಲಕ್ಷ ಷೇರು ಬಂಡವಾಳ ಹೊಂದಿದೆ. ಸಾರ್ವಜನಿಕರಿಂದ ರೂ26.71 ಕೋಟಿ ಠೇವಣಿ ಸಂಗ್ರಹಿಸಿದ್ದು, ರೂ7.19 ಕೋಟಿ ವಿವಿಧ ನಿಧಿಗಳನ್ನು ಹೊಂದಿದೆ. ಸದಸ್ಯರ ಕೃಷಿ, ವ್ಯಾಪಾರ ಹಾಗೂ ವೈಯಕ್ತಿಕ ಅಗತ್ಯಗಳಿಗಾಗಿ ಇದುವರೆಗೆ ರೂ22.90 ಕೋಟಿ ಸಾಲ ವಿತರಿಸಲಾಗಿದೆ. ಪ್ರಸ್ತುತ ಸಂಘವು ರೂ34.07 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ಮಾದರಿ ಸೌಹಾರ್ದ ಸಹಕಾರಿ ಸಂಘವಾಗಿ ಹೊರಹೊಮ್ಮಿದೆ ಎಂದು ಅವರು ವಿವರಿಸಿದರು.
ಉಪಾಧ್ಯಕ್ಷ ಮರೆಪ್ಪ ಮುನ್ನೋಳಿ, ನಿರ್ದೇಶಕರಾದ ಅಪ್ಪಾಸಾಹೇಬ ಖೇಮಲಾಪುರ, ಶ್ರೀಧರ ಖೇಮಲಾಪುರ, ಮಹಾವೀರ ಮುನ್ನೋಳಿ, ಶ್ರೀಕಾಂತ ಹಲಕರ್ಣಿ, ಧನ್ಯಕುಮಾರ ಮುನ್ನೋಳಿ, ಸಂದೀಪ ಮುನ್ನೋಳಿ, ಆದಿನಾಥ ನೇಗಿನಹಾಳ, ದುಂಡಪ್ಪ ಹಿಡಕಲ್, ಭರತೇಶ ಹಲಕರ್ಣಿ, ಲಕ್ಷ್ಮೀ ಖೇಮಲಾಪುರ, ಸನ್ಮತಿ ತೇಜಣ್ಣವರ ಸೇರಿದಂತೆ ಎಲ್ಲಾ ನಿರ್ದೇಶಕರು, ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.