ಕಾರ್ಮಿಕ ಇಲಾಖೆಯ ಶಿಶುಪಾಲನಾ ಕೇಂದ್ರದಿಂದ ಅನುಕೂಲ: ಕವಿತಾ
ಮುಂಡಗೋಡ: ಕಾರ್ಮಿಕ ಇಲಾಖೆಯವರು ಆರಂಭಿಸಿದ ಶಿಶುಪಾಲನಾ ಕೇಂದ್ರದಿಂದ ಕಾರ್ಮಿಕ ವರ್ಗದ ಹಾಗೂ ಇತರೆ ಸಾಮಾನ್ಯ ವರ್ಗದ ಕುಟುಂಬಗಳಿಗೆ ತುಂಬಾ ಅನುಕೂಲವಾಗಿದೆ ಎಂದು ಶಿಶು ಪಾಲನಾ ಕೇಂದ್ರದ ಶಿಕ್ಷಕಿ ಕವಿತಾ ಶೇಖರ ಲಮಾಣಿ ಹೇಳಿದರು.
ಪಟ್ಟಣದ ಲಮಾಣಿ ತಾಂಡಾದಲ್ಲಿರುವ ಕಾರ್ಮಿಕ ಇಲಾಖೆಯ ಏಡುಸ್ ಪಾರ್ಕ್ ಏಜೆನ್ಸಿಯ ಶಿಶುಪಾಲನಾ ಕೇಂದ್ರದಲ್ಲಿ ರವಿವಾರ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅವರು ತಾಲೂಕಿನಲ್ಲಿ ಶಿಶುಪಾಲನಾ ಕೇಂದ್ರ ಪ್ರಾರಂಭಿಸಿರುವುದರಿಂದ ನಮಗೆ ಉದ್ಯೋಗಾವಕಾಶ ದೊರೆಯುವುದರ ಜೊತೆಗೆ ಬಡ ಮಕ್ಕಳಿಗೆ ಶಿಕ್ಷಣ ಒದಗಿಸುವ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಮೂಲಕ ಅವರಿಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಪಾಲಕರು ತಮ್ಮ ಮಕ್ಕಳನ್ನು ಶಿಶುಪಾಲನಾ ಕೇಂದ್ರಗಳಿಗೆ ಕಳುಹಿಸುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಏಡುಸ್ ಪಾರ್ಕ್ ಏಜೆನ್ಸಿಯ ಶಿಶುಪಾಲನಾ ಕೇಂದ್ರದ ವತಿಯಿಂದ ಪೌರಕಾರ್ಮಿಕ ಮಂಜುನಾಥ ಹರಿಜನ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಶಿಶುಪಾಲನಾ ಕೇಂದ್ರದ ಸಹಾಯಕಿ ಲಲಿತಾ ಲಮಾಣಿ, ಪಾಲಕರಾದ ಮಂಜು ಲಮಾಣಿ, ನೀಲಾ ಲಮಾಣಿ, ಪರಶುರಾಮ ಲಮಾಣಿ, ಎಲ್.ಎಸ್.ಎಮ್.ಪಿ. ಸದಸ್ಯರಾದ ವಾಸು ಲಮಾಣಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.