ಲೇಖನಗಳು

ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಯೋಗದಾನ

ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಯೋಗದಾನ

ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಬ್ರಿಟಿಷರು ಇಲ್ಲಿಯ ಪ್ರಾಂತೀಯ ರಾಜರ ದೌರ್ಬಲ್ಯಗಳನ್ನೇ ತಮ್ಮ ಅಸ್ತ್ರವನ್ನಾಗಿಸಿಕೊಂಡು ಇಡೀ ಭಾರತವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ರಾಜರಿಂದ ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಅವರು ನಾನಾ ಬಗೆಯ ತಂತ್ರಗಳನ್ನು ಹೂಡಿದ್ದರು. ಡಾಲ್‌ಹೌಸಿಯ "ದತ್ತು ಮಕ್ಕಳಿಗೆ ಹಕ್ಕಿಲ್ಲ" ಎಂಬ ನೀತಿಯೊಂದೇ ಎಷ್ಟೋ ರಾಜ್ಯಗಳನ್ನು ನಾಮಾವಶೇಷವನ್ನಾಗಿ ಮಾಡಿತು. ನಮ್ಮದೇ ದೇಶದಲ್ಲಿ ನಮ್ಮ ಅಸ್ತಿತ್ವಕ್ಕೆ ಪ್ರಶ್ನೆ ಹಾಕುವಂತಹ ಕಾನೂನುಗಳನ್ನು ತಂದ ಬ್ರಿಟಿಷರು ಇಡೀ ಭಾರತ ಅನೇಕ ಸಂಸ್ಥಾನಗಳಲ್ಲಿ ಕುಶಲಕರ್ಮಿಗಳ ಅವನತಿಗೆ ನಾಂದಿ ಹಾಡಿದರು. ಕೆಲವು ಮೀರಸಾಧಕ ರಂಥವರು ಬ್ರಿಟಿಷರನ್ನು ರತ್ನಗಂಬಳಿ ಹಾಸಿ ಭಾರತದೊಳಕ್ಕೆ ಬಿಟ್ಟುಕೊಂಡರು. ನಮ್ಮವರೇ ಈ ರೀತಿ ಮಾಡಿದ್ದು ಅಕ್ಷಮ್ಯ. ನಮ್ಮಲ್ಲಿಯ ಒಗ್ಗಟ್ಟಿನ ಭೇದ ಕೂಡ ಬ್ರಿಟಿಷರಿಗೆ ಸಹಾಯ ಹಸ್ತ ನೀಡಿತು ಎಂದು ಹೇಳಬಹುದು.  

ಭಾರತ ದೇಶವು ಪುಣ್ಯ ಭೂಮಿ. ಅನೇಕ ಸಂಸ್ಥಾನಗಳು ಹರಿದುಹಂಚಿ ಹೋಗಿದ್ದರೂ ಕೂಡ ನಮ್ಮ ಜನರ ನಂಬಿಕೆ-ವಿಶ್ವಾಸ, ಆಧ್ಯಾತ್ಮಿಕತೆ, ಪೂಜಿಸುವ ದೇವರುಗಳು, ಆಚರಿಸುವ ಹಬ್ಬ ಹರಿದಿನಗಳು ನಮ್ಮನ್ನೆಲ್ಲ  ಮಾನಸಿಕವಾಗಿ ಒಂದಾಗಿಸಿದ್ದವು ಎಂದರೆ ತಪ್ಪಲ್ಲ. ಬ್ರಿಟಿಷರು ವಿವಿಧ ಸಂಸ್ಥಾನಿಕರನ್ನು ತೆಗೆದು ಅಲ್ಲಿ ತಮ್ಮ ಆಡಳಿತವನ್ನು ಹೇರಿದರು. ಆದರೆ ಮಾನಸಿಕವಾಗಿ ಒಂದಾಗಿದ್ದ ಭಾರತದ ಜನತೆ ಭೌಗೋಳಿಕವಾಗಿಯೂ ಒಂದಾದರು ಎಂದರೆ ಸುಳ್ಳಲ್ಲ.  

ಸುಮಾರ ಎರಡುನೂರು ವರ್ಷಗಳವರೆಗಿನ ಅವರ ದುರಾಡಳಿತಕ್ಕೆ, ಶೋಷಣೆಗೆ ವಿರೋಧಿಸಿದ ಭಾರತೀಯರು ಸ್ವಾತಂತ್ರ್ಯ ಆಂದೋಲನಕ್ಕೆ ಮುನ್ನುಡಿ ಬರೆದರು.. 1857ನೇ ವರ್ಷ ನಿರ್ಣಾಯಕ ವರ್ಷವಾಗಿತ್ತು. ಸಿಪಾಯಿ ದಂಗೆ ಉತ್ತರ ಭಾರತವನ್ನೆಲ್ಲಾ ವ್ಯಾಪಿಸಿತು. ಬ್ರಿಟಿಷರ ಬುಡ ಅಲುಗಾಡಿತು. ಆಗ ವಿರೋಚಿತವಾಗಿ ಹೋರಾಡಿದವರಲ್ಲಿ ಪುರುಷರಷ್ಟೇ ಅಲ್ಲ, ಮಹಿಳಾ ರತ್ನಗಳೂ ಶಾಮೀಲಾಗಿದ್ದರು. ಮಹಿಳೆಯರು ತಮ್ಮ ಪಾಲಿನ ಹವಿಸ್ಸನ್ನು ಸ್ವಾತಂತ್ರ್ಯದ ಯಜ್ಞಕ್ಕೆ ಆಹುತಿಯನ್ನಾಗಿ ನೀಡಿದರು. ಅದಕ್ಕಾಗಿ ತಮ್ಮ ತನು-ಮನ-ಧನವನ್ನೆಲ್ಲಾ ಅರ​‍್ಿಸಿದರು. ಇಂತಹ ಅಖಂಡ ಯಜ್ಞಕ್ಕೆ ಮಾನಹಾನಿ, ಪ್ರಾಣ ಹಾನಿ, ಆಸ್ತಿ ಹಾನಿ ಗಳೆಲ್ಲಾ ಸಂಭವಿಸಿದರೂ ಕೂಡ ಅವರ್ಯಾರೂ ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ತೆಗೆಯಲಿಲ್ಲ.  

ಕನ್ನಡ ರಾಣಿ ಅಬ್ಬಕ್ಕ  

ಅಭಯ ರಾಣಿ ಎಂದೇ ಹೆಸರಾದ ಅಬ್ಬಕ್ಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮೊದಲ ಮಹಿಳೆ. ಲಕ್ಷ್ಮಪ್ಪರಸ ಬಂಗರಾಜರನ್ನು ವಿವಾಹವಾದ ಅಬ್ಬಕ್ಕ ಆಡಳಿತದಲ್ಲಿ ಅವನಿಗೆ ಸಹಾಯ ಹಸ್ತ ನೀಡುತ್ತಿದ್ದಳು. ಹೊರಗಿನಿಂದ  ಬಂದ ಪೋರ್ಚುಗೀಸರು ಕೂಡ ಆಡಳಿತದಲ್ಲಿ ಕೈ  ಆಡಿಸುತ್ತಿದ್ದರು. ಅವರಿಗೆ ಕಪ್ಪಕಾಣಿಕೆ ಕೊಡಬೇಕಾಗುತ್ತಿತ್ತು. ಅಬ್ಬಕ್ಕನ ಪತಿ ಲಕ್ಷ್ಮಪ್ಪರಸ ಪೋರ್ಚುಗೀಸರಿಗೆ ಕಪ್ಪ ಕೊಡುವುದನ್ನು ನಿಲ್ಲಿಸಿದ. ಅವರ ಯಾವುದೇ ಬೆದರಿಕೆಗೂ ಮಣಿಯಲಿಲ್ಲ .ಕಪ್ಪ ನೀಡಿ ದಾಸ್ಯದ ಬದುಕು ಬದುಕುವುದಿಲ್ಲವೆಂಬ ಶಪಥಗೈದಳು ಅಬ್ಬಕ್ಕ. ಮಂಗಳೂರಿನ ಬಂದರಿಗೆ ಹೋಗಿ ಅಲ್ಲಿನ ಪೋರ್ಚುಗೀಸರ 2 ನೌಕೆಗಳನ್ನು ನಾಶಪಡಿಸಿದಳು. ಅವರು ದಂಡೆತ್ತಿ ಬಂದಾಗ ತನ್ನ ಸೈನ್ಯವನ್ನೆಲ್ಲ ಒಟ್ಟುಗೂಡಿಸಿ ಅವರನ್ನು ಸೋಲಿಸಿ ಕಳುಹಿಸಿದಳು. ಎಷ್ಟು ಸಲ ಅವರು ದಂಡೆತ್ತಿ ಬಂದಾಗಲೂ ಅವರನ್ನು ಸೋಲಿಸಿದ್ದರಿಂದ ಅವರು ಮತ್ತೆ ಬರಲು ಹೆದರಲಾರಂಭಿಸಿದರು. ಹೀಗೆ ಶೂರತನದಿಂದ ಮಂಗಳೂರು ಕೋಟೆಯನ್ನು ವಶಪಡಿಸಿಕೊಂಡಳು.  

ಭಾರತದ ಸ್ವಾತಂತ್ರ್ಯ ಅಂದೋಲನದ ಶುರುವಾಗುವ ಮೊದಲೇ ಅಂದರೆ ಸುಮಾರು 1555ರಲ್ಲೇ ಪರಕೀಯರ ದಾಸ್ಯದ ವಿರುದ್ಧ ಸ್ವಾತಂತ್ರ್ಯದ ಕಹಳೆ ಊದಿದ್ದವಳು ರಾಣಿ ಅಬ್ಬಕ್ಕ. ಎಲ್ಲ ಸ್ವಾತಂತ್ರ್ಯ ವೀರರಿಗೆ ಆದರ್ಶ ರಾಷ್ಟ್ರ ಪ್ರೇಮಿಯಾಗಿ ಮಾದರಿಯಾಗಿದ್ದಾಳೆ  

ವೀರರಾಣಿ ಕಿತ್ತೂರು ಚೆನ್ನಮ್ಮ 

ಭಾರತದ ಇತಿಹಾಸದಲ್ಲಿ ಮತ್ತೊಂದು ಪ್ರಜ್ವಲ ರತ್ನ ಉತ್ತರ ಕರ್ನಾಟಕದ ಹೆಮ್ಮೆಯ ವೀರ ರಾಣಿ ಕಿತ್ತೂರು ಚೆನ್ನಮ್ಮ. ಬೆಳಗಾವಿಯ ಕಾಕತಿಯ ಹೆಣ್ಣುಮಗಳು ಈಕೆ. ಹುಟ್ಟಿದ್ದು 14ನೇ ನವೆಂಬರ್ 1778ರಲ್ಲಿ. ಕಿತ್ತೂರು ಸಂಸ್ಥಾನದ ರಾಜ ಮಲ್ಲಸರ್ಜ ನೊಂದಿಗೆ ವಿವಾಹವಾಗಿ ಕಿತ್ತೂರಿಗೆ ಬರುತ್ತಾಳೆ. ಆಗಲೇ ಮರಾಠರು, ಪೇಶ್ವೆಗಳು, ನಿಜಾಮರು ಹಾಗೂ ಟಿಪ್ಪುಸುಲ್ತಾನನ ಸೈನ್ಯದೊಂದಿಗೆ ಹೋರಾಡುತ್ತಾ ಎದೆಯೊಡ್ಡಬೇಕಾಗಿತ್ತು. ಭಾರತೀಯರ ಇದೇ ದೌರ್ಬಲ್ಯವನ್ನು ಉಪಯೋಗಿಸಿಕೊಂಡ  ಬ್ರಿಟಿಷರು ಒಡೆದು ಆಳುವ ನೀತಿಯನ್ನು ಬಳಸಿಕೊಂಡು ಅನೇಕ ಸಂಸ್ಥಾನಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳ ತೊಡಗಿದ್ದರು. ಮಲ್ಲಸರ್ಜನ ನಿಧನಾನಂತರ ಆತನ ಪುತ್ರ ಶಿವಲಿಂಗ ಮಲ್ಲಸರ್ಜ ಪಟ್ಟವನ್ನೇರಿದ. ಅವನು ಮಾಸ್ತಮರಡಿಯ ಗೌಡರ ಪುತ್ರ ಶಿವಲಿಂಗಪ್ಪ ಎಂಬಾತನನ್ನು ದತ್ತು ಪಡೆದಿದ್ದ. ಬ್ರಿಟಿಷರು ದತ್ತು ಪುತ್ರನಿಗೆ ಅಧಿಕಾರ ವಿಲ್ಲವೆಂದು ಹೇಳಿದಾಗ ಚೆನ್ನಮ್ಮ ದಿಟ್ಟತನದಿಂದ, "ನಮ್ಮ ರಾಜ್ಯ, ನಮ್ಮ ದೇಶ ನಿಮಗೆ ಯಾರು ಅಧಿಕಾರ ಕೊಟ್ಟಿರುವವರು" ಎಂದು ಅವರನ್ನು ಬೈದು ಕಳಿಸಿದ್ದಲ್ಲದೇ ಶಿವಲಿಂಗ ಮಲ್ಲಸರ್ಜನ ಮರಣಾನಂತರ ತಾನೇ ಆಡಳಿತದ ಚುಕ್ಕಾಣಿ ಹಿಡಿದಳು. ಕಪ್ಪ ಕೇಳಲು ಬಂದ ಥ್ಯಾಕರೆ ಸಾಹೇಬನಿಗೆ ಎದುರುತ್ತರ ನೀಡಿ ಕೊಡುವುದಿಲ್ಲವೆಂದು ಹೇಳಿಕಳಿಸಿದಳು. ಆಗ ಸಿಟ್ಟಿಗೆದ್ದ  ಥ್ಯಾಕರೆ ಬ್ರಿಟಿಷ್ ಸೈನ್ಯದೊಂದಿಗೆ ಕಿತ್ತೂರಿನ ಮೇಲೆ ಏರಿ ಬಂದಾಗ ದಿಟ್ಟತನದಿಂದ ಹೋರಾಡಿ ಅವರನ್ನು ಸೋಲಿಸಿ ಕಳುಹಿಸಿದಳು. ಆದರೆ ಮತ್ತೆ ಹೆಚ್ಚಿನ ಸೈನ್ಯದೊಂದಿಗೆ ಬಂದರು ಬ್ರಿಟಿಷರು. ನಮ್ಮಲ್ಲಿರುವ ಮೀರಸಾಧಕರ ವಂಚನೆಯಿಂದ ಕಿತ್ತೂರಿನ ರಾಣಿ ಸೋಲಬೇಕಾಗಿ ಬಂದಿತ್ತು. ಮತ್ತು ಬೈಲಹೊಂಗಲದ ಸೆರೆಮನೆಗೆ ಅವಳನ್ನು ಕಳುಹಿಸಿದರು. ಆದರೆ ಭಾರತದ ಇತಿಹಾಸದಲ್ಲಿ ಮೊಟ್ಟಮೊದಲು ಬ್ರಿಟಿಷರ ವಿರುದ್ಧ ಧ್ವನಿ ಎತ್ತಿದ್ದು ವೀರರಾಣಿ ಕಿತ್ತೂರು ಚೆನ್ನಮ್ಮ ಎಂದರೆ ಅತಿಶಯೋಕ್ತಿಯೇನಲ್ಲ. ಅವಳ ಸ್ವಾಭಿಮಾನ ಶೂರ ಧೀರತೆಗೆ ಸೋತು ಸುಣ್ಣಾಗಿದ್ದು ಬ್ರಿಟಿಷ್ ಸೈನ್ಯ. ಆದರೆ ವಂಚಕರ ಕುಬುದ್ಧಿಯಿಂದ ರಾಣಿ ಚೆನ್ನಮ್ಮ ಸೋಲಬೇಕಾಯಿತೇ ವಿನಃ ಅವಳಂತಹ ಕೆಚ್ಚೆದೆಯ ಗುಂಡಿಗೆ ಯಾರಿಗೂ ಇರಲಿಲ್ಲ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಕಿತ್ತೂರಿನ ರಾಣಿ ಚೆನ್ನಮ್ಮಳದು ಅಜರಾಮರವಾಗಿ ಉಳಿಯುವ ಹೆಸರು ಎಂದರೆ ತಪ್ಪಲ್ಲ.  

ಝಾನ್ಸಿ ರಾಣಿ ಲಕ್ಷ್ಮೀಬಾಯಿ  

ನವೆಂಬರ್ 19, 1835ರಲ್ಲಿ ಕಾಶಿಯಲ್ಲಿ ಹುಟ್ಟಿದ ಮಣಿಕರ್ಣಿಕಾ ಅಪ್ರತಿಮ ಸೌಂದರ್ಯ, ಶೂರ ಬಾಲಕಿ. ಮೋರೋಪಂತನ ಮಗಳಾಗಿದ್ದಳು. ಬಾಲ್ಯದಲ್ಲಿಯೇ ಕುದುರೆ ಸವಾರಿ, ಯುದ್ಧ ತರಬೇತಿ, ಈಜು, ಕತ್ತಿವರಸೆ ಗಳಲ್ಲೆಲ್ಲಾ ಪರಿಣಿತಳಾದವಳು. 47 ವರ್ಷದ ಝಾನ್ಸಿ ರಾಜ ಗಂಗಾಧರರಾವ್ ಅವರೊಡನೆ 14 ವರ್ಷದ ಮಣಿಕರ್ಣಿಕಳ ಬಾಲ್ಯ ವಿವಾಹವಾಯಿತು. ನಂತರ ಆಕೆಯ ಹೆಸರು ಲಕ್ಷ್ಮಿಬಾಯಿ ಎಂದಾಯಿತು. ತನ್ನ ಸ್ವಂತದ ಗಂಡು ಮಗುವನ್ನು ಕಳೆದುಕೊಂಡು ದುಃಖಿತಳಾದಳು. ದುಃಖದಲ್ಲಿಯೇ ಗಂಗಾಧರರಾವ್ ಹಾಸಿಗೆ ಹಿಡಿದನು. ಇನ್ನು ಮಕ್ಕಳಾಗದೇ ದತ್ತು ಪುತ್ರನನ್ನು ಪಡೆಯುವ ಆಸೆ ವ್ಯಕ್ತಪಡಿಸಿದನು. ಹಾಗೆಯೇ ಸಂಬಂಧಿಕರಲ್ಲೇ ಇದ್ದ ಮಗುವನ್ನು ದತ್ತು ಪಡೆದರು ಮತ್ತು ಆ ಮಗನೇ ದಾಮೋದರ ರಾವ್‌. ನಂತರ ಹೆಚ್ಚು ದಿನವಿರದೆ ಗಂಗಾಧರರಾವ್ ಅವರು ಅಸುನೀಗಿದರು. ಮಗು ಚಿಕ್ಕವನಿರುವುರಿಂದ ಇಡೀ ರಾಜ್ಯದ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡಳು ಲಕ್ಷ್ಮಿಬಾಯಿ. ಆದರೆ ಬ್ರಿಟಿಷರು ಇಲ್ಲಿಯೂ ಮೂಗು ತೂರಿಸಲು ಬಂದರು. ದತ್ತು ಪುತ್ರನಿಗೆ ಅಧಿಕಾರವಿಲ್ಲ ಎಂದು ನಿಂತರು. ರಾಣಿ ಇದಕ್ಕೆ ಸೊಪ್ಪು ಹಾಕಲಿಲ್ಲ.ಅವರು ಯುದ್ಧಕ್ಕೆ ಬಂದರೆ ತನ್ನ ಸೈನಿಕರಿಗೆಲ್ಲ ಧೈರ್ಯ ತುಂಬುತ್ತ ಕತ್ತಿ ಜಳಪಿಸಿ ಸೋಲಿಸಿ ಕಳುಹಿಸಿದಳು. ಎರಡನೇ ಸಲ ಅಪಾರ ಸೈನ್ಯದೊಡನೆ ಆಗಮಿಸಿದ ಬ್ರಿಟಿಷರು ಕೋಟೆಗೆ ಲಗ್ಗೆ ಹಾಕಿದರು. ಮಹಿಳಾ ಸೈನ್ಯವನ್ನು ಕಟ್ಟಿ ಅವರಿಗೆಲ್ಲ ಯುದ್ಧದ ತರಬೇತು ನೀಡಿದ್ದ ಲಕ್ಷ್ಮಿಬಾಯಿ ರಾತ್ರೋರಾತ್ರಿ ಅವರನ್ನೆಲ್ಲ ತನ್ನೊಂದಿಗೆ ಕರೆದುಕೊಂಡು ಪರಾರಿಯಾದಳು. ಮತ್ತು ತಾತ್ಯಾಟೋಪಿ ನಾನಾಸಾಹೇಬ ಸೈನ್ಯದೊಂದಿಗೆ ಸೇರಿದಳು. ಗ್ವಾಲಿಯರ್ ಕೋಟೆಯನ್ನು ವಶಪಡಿಸಿಕೊಂಡು ಅವರ ಸೈನ್ಯದೊಂದಿಗೆ ಬ್ರಿಟಿಷರ ಜೊತೆಗೆ ಹೋರಾಡಿದಳು. ಆಗಲೇ ಸ್ವಾತಂತ್ರ್ಯದ ಕಹಳೆ ಊದಲಾಗಿತ್ತು. ಬ್ರಿಟಿಷರು ಸೈನಿಕರು ಉಪಯೋಗಿಸುವ ಕಾಡತೂಸುಗಳಿಗೆ ದನದ ಮಾಂಸ ಮತ್ತು ಹಂದಿಮಾಂಸವನ್ನು ಹಚ್ಚಿದ್ದು ತಿಳಿದ ಸೈನಿಕರೆಲ್ಲ ದಂಗೆಯೆದ್ದಿದ್ದರು. ಆ ದಂಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಯಿತು. ಚಪಾತಿ ಆಂದೋಲನ ವೆಂದು ಪ್ರಸಿದ್ಧಿ ಪಡೆಯಿತು. ಸ್ವಾತಂತ್ರ್ಯಾಂದೋಲನದಲ್ಲಿ ಸೇರಲು ಇಚ್ಛೆಯುಳ್ಳವರು ಚಪಾತಿಯನ್ನು ಮಾಡಿ ಇನ್ನೊಂದು ಊರಿಗೆ ಸಾಗಿಸುತ್ತಿದ್ದರು. ಅದು ಬ್ರಿಟಿಷರ ಕಣ್ತಪ್ಪಿಸಲು ಈ ರೀತಿಯ ಯೋಜನೆ ಹಾಕಿಕೊಂಡಿದ್ದರು. ಅದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಸ್ವಾತಂತ್ರ್ಯದ ಕಹಳೆಗೆ ನಾಂದಿ ಹಾಡಿತು. ಸೈನಿಕರೆಲ್ಲ ವಿರೋಧ ವ್ಯಕ್ತಪಡಿಸಲು ಆರಂಭಿಸಿದರು. ಇತ್ತ ಶೂರ ಧೀರ ತನದಿಂದ ಲಕ್ಷ್ಮೀಬಾಯಿ ತನ್ನ ಮಹಿಳಾ ಸೈನ್ಯದೊಂದಿಗೆ ತಾತ್ಯಾಟೋಪಿ ಮತ್ತು ನಾನಾಸಾಹೇಬ ನೊಂದಿಗೆ ಸೇರಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದಳು. 1857ರ ಕದನ ಬ್ರಿಟಿಷರ ವಿರುದ್ಧ ಭಾರತೀಯರು ಊದಿದ ಮೊದಲ ಕಹಳೆ. ಜೂನ್ 17, 1858 ರಂದು ಬ್ರಿಟಿಷರೊಂದಿಗೆ ಕೆಚ್ಚೆದೆಯಿಂದ ಹೋರಾಡುತ್ತಲೇ ಸಾವನ್ನಪ್ಪಿದ್ದಳು ಲಕ್ಷ್ಮೀಬಾಯಿ. ಯುದ್ಧದಲ್ಲಿ ಗಾಯಾಳುವಾಗಿ ಸಾಯುತ್ತಿರುವಾಗಲೇ ತನ್ನ ದೇಹವನ್ನು ಪವಿತ್ರವಾಗಿರುವ ಅಗ್ನಿ ಮಾತ್ರವೇ ಸ್ಪರ್ಶಿಸಲಿ, ಬ್ರಿಟಿಷರಲ್ಲ ಎಂದು ತನ್ನ ಅಂಗರಕ್ಷರಿಗೆ ಹೇಳಿದ್ದಳು. ಹೀಗಾಗಿ ಅವಳ  ಸಾವು ಸಂಭವಿಸುತ್ತಿದ್ದಂತೆ ಅವಳ ದೇಹವನ್ನು ಅಗ್ನಿಗೆ ಸಮರ​‍್ಿಸಲಾಯಿತು. ಬ್ರಿಟಿಷ್ ಅಧಿಕಾರಿ ಸರ್ ಹುಫ್ ರೋಜ್‌ನು ಬರೆದಿದ್ದ ಯುದ್ಧದ ಟಿಪ್ಪಣಿ ಪುಸ್ತಕದಲ್ಲಿ ರಾಣಿಯನ್ನು ಕೊಂಡಾಡುತ್ತಾ," ಅತಿ ಸುಂದರಿ, ಧೈರ್ಯವಂತೆ, ಅತಿ ಬುದ್ಧಿವಂತೆಯಾಗಿದ್ದಳು ಲಕ್ಷ್ಮೀಬಾಯಿ ಬ್ರಿಟಿಷರ ಪಾಲಿಗೆ ದಂಗೆಕೋರರ ನಾಯಕಿ" ಎಂದು ವರ್ಣಿಸಿದ್ದಾನೆ.  

ಜಾನ್ಸಿ ರಾಣಿ ಲಕ್ಷ್ಮೀಬಾಯಿ ತನ್ನ ಚಿಕ್ಕವಯಸ್ಸಿನಲ್ಲಿಯೇ ಪತಿಯನ್ನು ಕಳೆದುಕೊಂಡರೂ ತನ್ನ ದೇಶದ ಮೇಲಿನ ಅಭಿಮಾನದಿಂದ ಸಾಯುವವರೆಗೂ ದಿಟ್ಟತನದಿಂದ ಬ್ರಿಟಿಷರೊಂದಿಗೆ ಹೋರಾಡಿದಳು. ಹಾಗೂ ಭಾರತದ ಸ್ವಾತಂತ್ರ್ಯ ಆಂದೋಲನಕ್ಕೆ ಮುನ್ನುಡಿ ಬರೆದಳು. ಭಾರತೀಯ ಇತಿಹಾಸದಲ್ಲಿ ಆಕೆಯ ಹೆಸರು ಚಿರಸ್ಥಾಯಿ ಆಯಿತು.  

- ದೀಪಿಕಾ ಚಾಟೆ   

ಲೇಖಕಿ, ಬೆಳಗಾವಿ 

- * * * - 


ಸುದ್ದಿ ಓದಿ